
ಚಿತ್ರದುರ್ಗ: ‘ವಿದೇಶಿ ಸಂಶೋಧಕರಿಂದ ಅತೀ ಹೆಚ್ಚು ಸಂಶೋಧನೆಗೆ ಒಳಪಟ್ಟ ದಾರ್ಶನಿಕ ವೇಮನರು. ಸಮಾಜದಲ್ಲಿನ ಲೋಪದೋಷ, ಅನ್ಯಾಯ, ಅನೀತಿಯನ್ನು ಯಾವುದೇ ಮುಲಾಜಿಲ್ಲದೇ ನೇರವಾಗಿ ಖಂಡಿಸಿದ್ದರು’ ಎಂದು ಸಾಹಿತಿ ಎಸ್.ಬಿ.ಭೀಮಾರೆಡ್ಡಿ ಹೇಳಿದರು.
ನಗರದಲ್ಲಿ ಸೋಮವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿಯಲ್ಲಿ ಉಪನ್ಯಾಸ ನೀಡಿದರು.
‘ಸಾಮಾಜಿಕ ಸಮಾನತೆ, ನೈತಿಕ ಮೌಲ್ಯಗಳನ್ನು ಜನಸಾಮಾನ್ಯರ ಭಾಷೆಯಲ್ಲಿ ಸರಳವಾಗಿ ಅರ್ಥೈಸಿದ್ದರು. ಜತೆಗೆ ಜಾತಿ ಪದ್ಧತಿ, ಮೂಢನಂಬಿಕೆಗಳನ್ನು ತೀವ್ರವಾಗಿ ಖಂಡಿಸುತ್ತಾ ಬಂದರು’ ಎಂದು ತಿಳಿಸಿದರು.
‘ವಿದೇಶಿ ಸಂಶೋಧಕ ಸಿ.ಪಿ.ಬ್ರೌನ್ ಅವರು ವೇಮನರ ವಚನಗಳನ್ನು ಸಂಗ್ರಹ ಮಾಡಿದ ಮೇಲೆ, ಅದರಲ್ಲಿರುವ ವಿಷಯ, ತಿರುಳನ್ನು ಬೇರೆಯವರಿಂದ ಕೇಳಿ ತಿಳಿದು, ಆಶ್ಚರ್ಯಗೊಂಡಿದ್ದರು. ಬಳಿಕ ತೆಲುಗು ಭಾಷೆ ಕಲಿತು ಸುಮಾರು 1,167 ವಚನಗಳನ್ನು ಸಂಗ್ರಹ ಮಾಡಿದ್ದಾರೆ’ ಎಂದು ಹೇಳಿದರು.
‘ವೇಮನರು ತಮ್ಮ ಎಲ್ಲ ವಚನಗಳಲ್ಲಿ ಆತ್ಮಚಿಂತನೆ ಕುರಿತು ಹೆಚ್ಚು ತಿಳಿಸಿದ್ದಾರೆ. ನೈತಿಕತೆ ಬಳಸಿಕೊಂಡು ನಾವು ಮುಕ್ತಿ ಮಾರ್ಗದ ಕಡೆ ಸಾಗಬೇಕು. ಅಲ್ಲಿ ಆತ್ಮ ಚಿಂತನೆ, ನೈತಿಕತೆ, ಮುಕ್ತಿ ಮಾರ್ಗಕ್ಕೆ ಸಂಬಂಧಪಟ್ಟ ಬೇರೆ ಬೇರೆ ರೀತಿಯಾದ ವಚನಗಳನ್ನು ರಚಿಸಿರುವುದನ್ನು ನಾವು ಕಾಣಬಹುದಾಗಿದೆ’ ಎಂದರು.
‘ವೇಮನ ಚರಿತ್ರೆ ನಮಗೆ ನೆಪಮಾತ್ರ. ಅವರ ಸಾಹಿತ್ಯ ಬೋಧನೆಗಳು ನಮ್ಮ ದಾರಿಗೆ ಬೆಳಕು ಚೆಲ್ಲಲಿವೆ. ವೇಮನರ ಸಾಹಿತ್ಯ ಮುಂದಿಟ್ಟುಕೊಂಡು ನಾವು ನಮ್ಮ ಜೀವನ ರೂಪಿಸಿಕೊಳ್ಳಬೇಕು’ ಎಂದು ಹೊಸಹಳ್ಳಿಯ ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ತಿಳಿಸಿದರು.
‘ನಾವೆಲ್ಲರೂ ಸಂತೃಪ್ತಿಯಿಂದ ಬದುಕಬೇಕು ಎಂಬುದೇ ಮಹನೀಯರ ಜಯಂತಿಗಳ ಆಶಯ. ವೇಮನರು ತಮ್ಮ ಬೋಧನೆಗಳನ್ನು ಜನರಾಡುವ ಭಾಷೆಯಲ್ಲಿ ಸರಳವಾಗಿ ಬರೆದಿರುವುದು ಅವರ ವಿಶೇಷ. ಜನರಿಗೆ ಗೊತ್ತಿರುವ ಉಪಮೆ, ಪ್ರತಿಮೆಗಳ ಮೂಲಕ ತಿಳಿಸಿದ್ದಾರೆ. ಇದು ಹೆಚ್ಚಿನ ಜನರಿಗೆ ತಲುಪಲು ಸಾಧ್ಯವಾಯಿತು’ ಎಂದು ಅಭಿಪ್ರಾಯಪಟ್ಟರು.
ತಹಶೀಲ್ದಾರ್ ಬಿ.ಎಂ.ಗೋವಿಂದರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್, ಜಿಲ್ಲಾ ಪಂಚಾಯಿತಿ ಲೆಕ್ಕಪತ್ರ ಶಾಖೆಯ ಸಹಾಯಕ ನಿರ್ದೇಶಕ ದಾದಾಪೀರ್, ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.