ADVERTISEMENT

ಹೊಳಲ್ಕೆರೆಗೆ ಬಂದಿವೆ ಹೈದರಾಬಾದ್‌ ಈಚಲು ಮರಗಳು

ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿಗೆ ಚತುಷ್ಪಥ ರಸ್ತೆಯ ವಿಭಜಕದ ಮಧ್ಯೆ 48 ಮರ ನಾಟಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 3:10 IST
Last Updated 15 ಆಗಸ್ಟ್ 2021, 3:10 IST
ಹೊಳಲ್ಕೆರೆಯ ಹೊಸದುರ್ಗ ಮಾರ್ಗದ ರಸ್ತೆ ವಿಭಜಕದ ಮಧ್ಯೆ ಕ್ರೇನ್ ಮೂಲಕ ಈಚಲ ಮರಗಳನ್ನು ನೆಡುವ ಕಾರ್ಯಕ್ಕೆ ಶಾಸಕ ಎಂ. ಚಂದ್ರಪ್ಪ ಚಾಲನೆ ನೀಡಿದರು (ಎಡಚಿತ್ರ) ವಿಭಜಕ ಮಧ್ಯೆ ನೆಟ್ಟಿರುವ ಈಚಲ ಮರಗಳು
ಹೊಳಲ್ಕೆರೆಯ ಹೊಸದುರ್ಗ ಮಾರ್ಗದ ರಸ್ತೆ ವಿಭಜಕದ ಮಧ್ಯೆ ಕ್ರೇನ್ ಮೂಲಕ ಈಚಲ ಮರಗಳನ್ನು ನೆಡುವ ಕಾರ್ಯಕ್ಕೆ ಶಾಸಕ ಎಂ. ಚಂದ್ರಪ್ಪ ಚಾಲನೆ ನೀಡಿದರು (ಎಡಚಿತ್ರ) ವಿಭಜಕ ಮಧ್ಯೆ ನೆಟ್ಟಿರುವ ಈಚಲ ಮರಗಳು   

ಹೊಳಲ್ಕೆರೆ: ಪಟ್ಟಣದ ಹೊಸದುರ್ಗ ಮಾರ್ಗದಲ್ಲಿ ಚತುಷ್ಪಥ ರಸ್ತೆಯ ವಿಭಜಕದ ಮಧ್ಯೆ 48 ಈಚಲ ಮರಗಳನ್ನು ನೆಟ್ಟಿದ್ದು, ಪಟ್ಟಣದ ಸೌಂದರ್ಯ ಹೆಚ್ಚಿಸಿದೆ.

ಶಾಸಕ ಎಂ. ಚಂದ್ರಪ್ಪ ಕ್ರೇನ್ ಮೂಲಕ ಈಚಲ ಮರಗಳ ನಾಟಿಗೆ ಚಾಲನೆ ನೀಡಿ ಮಾತನಾಡಿ, ‘ಪಟ್ಟಣದ ಮುಖ್ಯವೃತ್ತದಿಂದ ಸ್ನೇಹ ಕಂಫರ್ಟ್ ವರೆಗೆ ಚತುಷ್ಪಥ ರಸ್ತೆ ನಿರ್ಮಿಸಿದ್ದು, ರಸ್ತೆಯ ಮಧ್ಯದಲ್ಲಿ 48 ಕಂಪಾರ್ಟ್‌ಮೆಂಟ್‌ಗಳಿವೆ. ಪ್ರತಿ ಕಂಪಾರ್ಟ್‌ಮೆಂಟ್‌ಗೆ ಒಂದೊಂದು ಈಚಲ ಮರ ನೆಡಲಾಗಿದೆ. ಇದರ ನಡುವೆ ನೆಡಲು ಬೆಂಗಳೂರು, ರಾಜಮುಂಡ್ರಿಯಿಂದ 48 ವಿಧದ ಅಲಂಕಾರಿಕ ಮತ್ತು ಹೂವಿನ ಗಿಡಗಳನ್ನು ತರಿಸಲಾಗಿದೆ. ನೀರು ಹಾಯಿಸಲು ಹನಿ ನೀರಾವರಿ ಪದ್ಧತಿ ಅಳವಡಿಸಲಾಗಿದೆ. ಇದಕ್ಕಾಗಿ ಸುಮಾರು ₹ 12 ಲಕ್ಷ ವೆಚ್ಚವಾಗಲಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿಗೆ ಈ ಮರಗಳನ್ನು ನೆಡಲಾಗಿದೆ’ ಎಂದರು.

‘ವಿಭಜಕದ ಮಧ್ಯೆ ಬೇರೆ ಮರಗಳನ್ನು ಬೆಳೆಸಿದರೆ ಬೇರುಗಳು ಹರಡಿಕೊಂಡು ರಸ್ತೆ ಹಾಗೂ ವಿಭಜಕ ಬಿರುಕು ಬಿಡುವ ಸಾಧ್ಯತೆ ಇದೆ. ಈಚಲ ಮರಗಳ ಬೇರುಗಳು ಸಣ್ಣದಾಗಿರುವುದರಿಂದ ಯಾವುದೇ ಹಾನಿ ಆಗುವುದಿಲ್ಲ. ನೀರು ಕಡಿಮೆ ಆದರೂ ತಡೆದುಕೊಳ್ಳುವ ಶಕ್ತಿ ಈ ಮರಗಳಿಗೆ ಇದೆ. ಸುಮಾರು 100ಕ್ಕೂ ಹೆಚ್ಚು ವರ್ಷ ಮರಗಳು ಇರುತ್ತವೆ. ಸಸಿಗಳನ್ನು ನೆಟ್ಟರೆ ಅವು ಮರಗಳಾಗಲು ಹತ್ತಾರು ವರ್ಷ ಬೇಕು. ಆದ್ದರಿಂದ ಹೈದರಾಬಾದ್‌ನಿಂದ ಮರಗಳನ್ನೇ ತರಿಸಿ ನೆಡಲಾಗಿದೆ’ ಎಂದು ಶಾಸಕ ಎಂ. ಚಂದ್ರಪ್ಪ
ತಿಳಿಸಿದರು.

ADVERTISEMENT

‘ಶಿವಮೊಗ್ಗ-ಚಿತ್ರದುರ್ಗ ಮಾರ್ಗದ ಪಟ್ಟಣ ವ್ಯಾಪ್ತಿಯಲ್ಲಿ 6 ಕಿ.ಮೀವರೆಗೆ ಷಟ್ಪಥ ರಸ್ತೆ ನಿರ್ಮಿಸಲಾಗುವುದು. ಈ ಮಾರ್ಗದಲ್ಲಿಯೂ ರಸ್ತೆ ವಿಭಜಕ ನಿರ್ಮಸಿ ಬೀದಿ ದೀಪ ಅಳವಡಿಸಲಾಗುವುದು’ ಎಂದು ಚಂದ್ರಪ್ಪತಿಳಿಸಿದರು.

‘ಶಾಸಕರೇ ಖುದ್ದಾಗಿ ನರ್ಸರಿಗಳಿಗೆ ಭೇಟಿ ನೀಡಿ ಅಲಂಕಾರಿಕ ಗಿಡಗಳನ್ನು ಆಯ್ಕೆ ಮಾಡಿದ್ದಾರೆ. ಇವು ಸುಮಾರು 10 ವರ್ಷದ ಈಚಲ ಮರಗಳಾಗಿದ್ದು, ಪ್ರತಿ ಮರಕ್ಕೆ ₹ 5,000 ವೆಚ್ಚವಾಗಿದೆ. ಬೋಗನ್ ವಿಲ್ಲಾ ಜಾತಿಯ 8 ವಿಧದ ಅಲಂಕಾರಿಕ ಸಸಿಗಳು, ವರ್ಷಪೂರ್ತಿ 5 ಬಣ್ಣಗಳ ಹೂ ಬಿಡುವ ಟೆಕ್ಸಾಸ್ ಲಂಟಾನಾ, ಯೂಫೋರ್ಬಿಯ ಮಿಲಯ, ಲಾಜೆಸ್ಟ್ರೋಮಿಯ ಇಂಡಿಕಾ, 3 ತಿಂಗಳು ಹೂಗಳು ಬಾಡದಿರುವ ಲೆಗಟ್ರೋಮಿಯ ಹಾಗೂ ಕ್ರೋಟಾನ್ ಸಸಿಗಳನ್ನು ನೆಡಲಾಗುವುದು’ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕುಮಾರ ನಾಯ್ಕ್ ತಿಳಿಸಿದರು. ಪುರಸಭೆ ಅಧ್ಯಕ್ಷ ಅಶೋಕ್, ಉಪಾಧ್ಯಕ್ಷ ಕೆ.ಸಿ. ರಮೇಶ್, ಮುಖ್ಯಾಧಿಕಾರಿ ವಾಸಿಂ, ಪ್ರವೀಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.