ADVERTISEMENT

ರಾಜಕೀಯ ಭರಾಟೆ; ಅಭಿವೃದ್ಧಿ ಗೌಣ

ಗ್ರಾಮಗಳಲ್ಲಿ ಕುಡಿಯುವ ನೀರು, ಸಾರಿಗೆ ಸೇರಿದಂತೆ ಮೂಲ ಸೌಲಭ್ಯ ಕೊರತೆ

ಜಿ.ಬಿ.ನಾಗರಾಜ್
Published 9 ಡಿಸೆಂಬರ್ 2020, 5:50 IST
Last Updated 9 ಡಿಸೆಂಬರ್ 2020, 5:50 IST
ಚಿತ್ರದುರ್ಗ ತಾಲ್ಲೂಕಿನ ಕಲ್ಲೇನಹಳ್ಳಿಯ ಚರಂಡಿಯಲ್ಲಿ ಕಸ ತುಂಬಿದೆ. (ಎಡಚಿತ್ರ). ಚಿತ್ರದುರ್ಗ ತಾಲ್ಲೂಕಿನ ಕಲ್ಲೇನಹಳ್ಳಿಯ ಪ್ರಮುಖ ವೃತ್ತದ ಸ್ಥಿತಿ.               ಪ್ರಜಾವಾಣಿ ಚಿತ್ರ: ಭವಾನಿ ಮಂಜು
ಚಿತ್ರದುರ್ಗ ತಾಲ್ಲೂಕಿನ ಕಲ್ಲೇನಹಳ್ಳಿಯ ಚರಂಡಿಯಲ್ಲಿ ಕಸ ತುಂಬಿದೆ. (ಎಡಚಿತ್ರ). ಚಿತ್ರದುರ್ಗ ತಾಲ್ಲೂಕಿನ ಕಲ್ಲೇನಹಳ್ಳಿಯ ಪ್ರಮುಖ ವೃತ್ತದ ಸ್ಥಿತಿ.               ಪ್ರಜಾವಾಣಿ ಚಿತ್ರ: ಭವಾನಿ ಮಂಜು   

ಚಿತ್ರದುರ್ಗ: ಗ್ರಾಮ ಪಂಚಾಯಿತಿ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಹಳ್ಳಿ ರಾಜಕೀಯ ದಿನ ಕಳೆದಂತೆ ರಂಗೇರುತ್ತಿದೆ. ಪಕ್ಷಗಳ ನೇರ ಪಾಲ್ಗೊಳ್ಳುವಿಕೆಗೆ ಅವಕಾಶವಿಲ್ಲದಿದ್ದರೂ ರಾಜಕೀಯ ಮುಖಂಡರಿಗೆ ಇದು ಪ್ರತಿಷ್ಠೆಯಾಗಿದೆ. ಪ್ರಚಾರ, ಮತಯಾಚನೆಯ ಭರಾಟೆಯಲ್ಲಿ ಅಭಿವೃದ್ಧಿಯ ನೈಜ ವಿಚಾರಗಳು ಗೌಣವಾಗುತ್ತಿವೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ 38 ಗ್ರಾಮ ಪಂಚಾಯಿತಿಗಳಿವೆ. 727 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಅಭ್ಯರ್ಥಿ ಆಯ್ಕೆಯ ಕಸರತ್ತು ನಿರ್ಣಾಯಕ ಹಂತಕ್ಕೆ ಬಂದಿದೆ. ಅಭಿವೃದ್ಧಿಯ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಯಾರೊಬ್ಬರೂ ಆಸಕ್ತಿ ತೋರುತ್ತಿಲ್ಲ ಎಂಬುದು ಗ್ರಾಮಗಳನ್ನು ಸುತ್ತಿದಾಗ ಅರಿವಿಗೆ ಬರಲಿದೆ.

ಚಿತ್ರದುರ್ಗ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳು ಮೂರು ವಿಧಾನಸಭಾ ಕ್ಷೇತ್ರಕ್ಕೆ ಹರಿದು ಹಂಚಿವೆ. ಚಿತ್ರದುರ್ಗ, ಚಳ್ಳಕೆರೆ ಹಾಗೂ ಹೊಳಲ್ಕೆರೆ ಮೀಸಲು ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿವೆ. ಬಹುತೇಕ ಎಲ್ಲ ಹಳ್ಳಿಯ ಸಮಸ್ಯೆಗಳಲ್ಲಿ ಸಾಮ್ಯತೆ ಇದೆ. ಮೂಲ ಸೌಲಭ್ಯ, ಕುಡಿಯುವ ನೀರಿನ ಕೊರತೆ, ಸಾರಿಗೆ, ವಿದ್ಯುತ್‌ ಸಂಪರ್ಕ, ಅನೈರ್ಮಲ್ಯದ ಸಮಸ್ಯೆಗಳು ಜನರನ್ನು ಕಾಡುತ್ತಿವೆ.

ADVERTISEMENT

ಅಧಿಕಾರ ವಿಕೇಂದ್ರೀಕರಣ, ಗ್ರಾಮಗಳ ನಿರ್ವಹಣೆ ಉದ್ದೇಶದಿಂದ ಜಾರಿಗೊಂಡ ಸ್ಥಳೀಯ ಸಂಸ್ಥೆ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿಗೆ ಮಹತ್ವದ ಸ್ಥಾನವಿದೆ. ಹಳ್ಳಿಗಳು ಬೆಳೆದರೆ ದೇಶ ಅಭಿವೃದ್ಧಿಯಾಗುತ್ತದೆ ಎಂಬ ಪರಿಕಲ್ಪನೆ ಈ ವ್ಯವಸ್ಥೆಯ ಹುಟ್ಟಿಗೆ ಕಾರಣವಾಗಿದೆ. ಹಲವು ಯೋಜನೆಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನ ನೇರವಾಗಿ ಗ್ರಾಮಗಳಿಗೆ ಹರಿದು ಬರುತ್ತಿದೆ. ಆದರೂ, ಬಹುತೇಕ ಗ್ರಾಮಗಳು ತೀರಾ ಹಿಂದುಳಿದಿವೆ.

ಚಿತ್ರದುರ್ಗ ತಾಲ್ಲೂಕಿನ ಕಲ್ಲೇನಹಳ್ಳಿ ಇನ್ನೂ ಅಭಿವೃದ್ಧಿಯತ್ತ ಮುಖ ಮಾಡಿಲ್ಲ. ಗ್ರಾಮ ಪ್ರವೇಶಿಸುತ್ತಿದ್ದಂತೆ ಮೂಗಿಗೆ ಬಡಿಯುವ ದುರ್ವಾಸನೆ ಹಳ್ಳಿಯ ಸ್ಥಿತಿಯನ್ನು ಸೂಚಿಸುತ್ತದೆ. ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತ ಎಂಬ ಹಣೆಪಟ್ಟಿ ಅಂಟಿಸಿಕೊಂಡಿದೆ. ಆದರೆ, ಈ ಹಳ್ಳಿಯ ಬಹುತೇಕ ಮನೆಗಳಿಗೆ ಇನ್ನೂ ಶೌಚಾಲಯದ ಸೌಲಭ್ಯ ಸಿಕ್ಕಿಲ್ಲ. ಊರ ಸಮೀಪದ ಕೃಷಿ ಜಮೀನು, ರಸ್ತೆ ಬದಿಯಲ್ಲಿಯೇ ಮಲ ವಿಸರ್ಜನೆ ನಡೆಯುತ್ತಿದೆ.

ಸುಮಾರು 150 ಮನೆಗಳಿರುವ ಗ್ರಾಮದಲ್ಲಿ 480ಕ್ಕೂ ಹೆಚ್ಚು ಮತದಾರರಿದ್ದಾರೆ. ಗೋನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮದಲ್ಲಿ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಬೇಕಿದೆ. ಪರಿಶಿಷ್ಟ ಪಂಗಡದ ಜನರೇ ಹೆಚ್ಚಾಗಿದ್ದು, ಒಬ್ಬ ಪುರುಷ ಹಾಗೂ ಒಬ್ಬ ಮಹಿಳೆ ಗ್ರಾಮವನ್ನು ‍ಪ್ರತಿನಿಧಿಸಲಿದ್ದಾರೆ. ಎಸ್‌ಟಿಪಿ/ಟಿಎಸ್‌ಪಿ ಅನುದಾನ ಪಡೆಯುವ ಅರ್ಹತೆ ಹೊಂದಿದ್ದರೂ ಗ್ರಾಮದಲ್ಲಿ ಸರಿಯಾದ ರಸ್ತೆಗಳಿಲ್ಲ. ಎರಡು ರಸ್ತೆಗೆ ಮಾತ್ರ ಚರಂಡಿ ನಿರ್ಮಿಸಿದರೂ, ನೀರು ಹರಿಯುತ್ತಿಲ್ಲ.

ಬೀದಿ ದೀಪದ ವ್ಯವಸ್ಥೆ ಇದೆಯಾದರೂ ಬೆಳಕು ಸೂಸುವುದು ಅಪರೂಪ. ನೀರಿನ ಸೌಲಭ್ಯಕ್ಕೆ ಟ್ಯಾಂಕ್‌ ನಿರ್ಮಿಸಲಾಗಿದೆ. ಆದರೆ, ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ವಸತಿ ಸೌಲಭ್ಯಕ್ಕೆ ಕಾಯುತ್ತಿರುವ ಬಡವರ ಸಂಖ್ಯೆ ಹೆಚ್ಚಾಗಿದೆ. ಸಾಸಲಹಟ್ಟಿ, ಮಲ್ಲಾಪುರ, ಗೊಲ್ಲರಹಟ್ಟಿ, ಚಿತ್ರದುರ್ಗ ನಗರದ ಸೆರಗಿನಲ್ಲಿರುವ ಚೇಳುಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಇಂತಹದೇ ಸಮಸ್ಯೆಗಳಿವೆ.

ಸಾರಿಗೆ ಸೌಲಭ್ಯ ಮರೀಚಿಕೆ

ಚಿತ್ರದುರ್ಗ ನಗರದಿಂದ 9 ಕಿ.ಮೀ ದೂರದಲ್ಲಿರುವ ಕಲ್ಲೇನಹಳ್ಳಿಗೆ ಸಾರಿಗೆ ಸೌಲಭ್ಯ ಮರೀಚಿಕೆಯಾಗಿದೆ. ಬಸ್‌ ಸೇವೆ ಪಡೆಯಲು ಗ್ರಾಮಸ್ಥರು ಮೂರು ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಬೇಕು.

ತುರುವನೂರು ರಸ್ತೆಯಿಂದ ಪಶ್ಚಿಮ ದಿಕ್ಕಿಗೆ ಸಾಗಿದರೆ ಕಲ್ಲೇನಹಳ್ಳಿ ಸಿಗುತ್ತದೆ. ಎಂಟು ವರ್ಷಗಳ ಹಿಂದೆ ಕೆಎಸ್‌ಆರ್‌ಟಿಸಿ ಬಸ್‌ ಸೌಲಭ್ಯ ಕಲ್ಪಿಸಲಾಗಿತ್ತು. ಕೆಲ ದಿನ ಸೇವೆ ಒದಗಿಸಿದ ಬಸ್‌, ಸಂಚಾರ ಸ್ಥಗಿತಗೊಳಿಸಿತು. ಗ್ರಾಮದ ಬಹುತೇಕರು ನಡೆದುಕೊಂಡೇ ಸಾಗುತ್ತಾರೆ. ಕೆಲವರು ಮಾತ್ರ ದ್ವಿಚಕ್ರ ವಾಹನ ಹೊಂದಿದ್ದಾರೆ.

*ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಸರಿ ಯಾಗಿಲ್ಲ. ಸ್ನಾನ ಮಾಡಿದ, ಬಟ್ಟೆ ತೊಳೆದ ನೀರು ರಸ್ತೆಯಲ್ಲಿ ಹರಿಯು ತ್ತದೆ. ಕೊಳಚೆ ನೀರು ದಾಟಿಕೊಂಡು ದೇಗುಲಕ್ಕೆ ತೆರಳಲು ಅಸಹ್ಯವಾಗುತ್ತದೆ.

ಸತ್ಯಮ್ಮ, ಗೃಹಿಣಿ, ಕಲ್ಲೇನಹಳ್ಳಿ

*ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬಹುದಿನಗಳಿಂದ ಬೇಡಿಕೆ ಇಟ್ಟಿದ್ದೇವೆ. ಕುಡಿಯುವ ನೀರು ತರಲು ಪಕ್ಕದ ಊರುಗಳಿಗೆ ತೆರಳಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.

ಪಾಪಣ್ಣ, ರೈತ, ಕಲ್ಲೇನಹಳ್ಳಿ

*ಗ್ರಾಮಕ್ಕೆ ಸಾರಿಗೆ ಸೌಲಭ್ಯವಿಲ್ಲ. ಬಸ್ ಸೇವೆ ಪಡೆಯಲು ಮೂರು ಕಿ.ಮೀ. ನಡೆಯಬೇಕು. ಅನಿವಾರ್ಯ ಸಂದರ್ಭದಲ್ಲಿ ₹ 200 ಬಾಡಿಗೆ ತೆತ್ತು ಆಟೊ ಸೇವೆ ಪಡೆಯುತ್ತೇವೆ.

ರಾಜಪ್ಪ, ಕೂಲಿ ಕಾರ್ಮಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.