ADVERTISEMENT

ಸಾಣೇಹಳ್ಳಿ: ರಾಜಕೀಯ ಘಟನೆ ದೆಹಲಿ ಚರಿತ್ರೆಯ ಭಾಗ

ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವದಲ್ಲಿ ಪ್ರೊ.ವೆಂಕಟಾಚಲ ಹೆಗಡೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 2:19 IST
Last Updated 3 ನವೆಂಬರ್ 2020, 2:19 IST
ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ ‘ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ’ ನಾಟಕದ ದೃಶ್ಯ.
ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ ‘ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ’ ನಾಟಕದ ದೃಶ್ಯ.   

ಹೊಸದುರ್ಗ: ‘ದೇಶದ ಪ್ರಮುಖ ರಾಜಕೀಯ ವಿದ್ಯಮಾನಗಳು ಬಹುತೇಕ ದೆಹಲಿಯಲ್ಲಿಯೇ ನಡೆಯುತ್ತವೆ. ಈ ಎಲ್ಲ ಘಟನೆಗಳು ದೆಹಲಿಯ ಚರಿತ್ರೆಯ ಭಾಗ ಆಗಿವೆ’ ಎಂದು ದೆಹಲಿ ಜವಾಹರಲಾಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ವೆಂಕಟಾಚಲ ಹೆಗಡೆ ತಿಳಿಸಿದರು.

ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವದಲ್ಲಿ ಸೋಮವಾರ ಸಂಜೆ ‘ರಾಜಕೀಯ ಮತ್ತು ಸಾಮಾಜಿಕ ಸ್ಥಿತ್ಯಂತರ’ ಕುರಿತು ಅವರು ಉಪನ್ಯಾಸ ನೀಡಿದರು.

‘ಎಲ್ಲ ರಾಜಕೀಯ ಸ್ಥಿತ್ಯಂತರಗಳು ಆಯಾ ಪ್ರದೇಶದ ಜನರ ಬದುಕಿನ ರೂಪುರೇಷೆ ನಿರ್ಧರಿಸುತ್ತವೆ. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶದಲ್ಲಿದ್ದ 600ಕ್ಕೂ ಹೆಚ್ಚು ರಾಜಮನೆತನಗಳನ್ನು ಒಟ್ಟುಗೂಡಿಸಿ ಸ್ವಾತಂತ್ರ್ಯಗೊಳಿಸಿದುದು ಸಾಮಾಜಿಕವಾಗಿ ದೊಡ್ಡ ಸ್ಥಿತ್ಯಂತರವನ್ನು ತಂದಿತು. ಸಾಕಷ್ಟು ಭಿನ್ನತೆಯಿದ್ದೂ, ಏಕತೆಯನ್ನು ಸಾಧಿಸಿರುವುದಕ್ಕೆ ಮುಖ್ಯ ಕಾರಣ ರಾಜಕೀಯ ಸ್ಥಿತ್ಯಂತರ. ಬುದ್ಧ, ಬಸವಣ್ಣ, ಗಾಂಧಿ ಮೊದಲಾದವರು ಮಾಡಿದ ಸಾಮಾಜಿಕ ಕಾರ್ಯಗಳು ಮತ್ತೆ ಈಗ ಆಗಬೇಕು. ನಮ್ಮ ಸಾಹಿತ್ಯಿಕ, ಸಾಂಸ್ಕೃತಿಕ ನೆಲೆಗಳಲ್ಲಿ ರಾಜಕೀಯ ಮತ್ತು ಸಾಮಾಜಿಕ ಸ್ಥಿತ್ಯಂತರಗಳಿಗೆ ಉತ್ತರ ಕಂಡುಕೊಳ್ಳಬಹುದು’ ಎಂದು ವಿವರಿಸಿದರು.

ADVERTISEMENT

ನೇತೃತ್ವ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ಪಕ್ಷಾಧಾರಿತ ಆಡಳಿತದಿಂದ ಒಂದು ಪಕ್ಷ ಅಧಿಕಾರಕ್ಕೆ ಬಂದಾಗ ಒಂದು ನಿಲುವು ತೆಗೆದುಕೊಂಡಿರುತ್ತದೆ. ಅದು ಜಾರಿಯಾಗುವ ಮೊದಲೇ ಮತ್ತೊಂದು ಪಕ್ಷದ ಸರ್ಕಾರ ಆಡಳಿತಕ್ಕೆ ಬರುತ್ತದೆ. ಆಗ ಅದು ಹಿಂದಿನ ಸರ್ಕಾರದ ನಿಲುವನ್ನು ಒಪ್ಪಬಹುದು ಅಥವಾ ತಿರಸ್ಕರಿಸಬಹುದು. ಹೀಗಾಗಿ ಪಕ್ಷ ರಾಜಕಾರಣದಿಂದಾಗಿ ಸಮಾಜದಲ್ಲಿ ಪ್ರಗತಿ ನಿಂತ ನೀರಿನಂತಾಗುತ್ತಿದೆ’ ಎಂದು ಹೇಳಿದರು.

ಪಂಡಿತಾರಾಧ್ಯ ಶ್ರೀಗಳ ‘ಸಂಸ್ಕಾರ’ ಕೃತಿ ಲೋಕಾರ್ಪಣೆಗೊಳಿಸಿದ ಬೆಂಗಳೂರಿನ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ವಿಕಾಸಕಿ ಮುಕ್ತಾ ಬಿ.ಕಾಗಲಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.