ADVERTISEMENT

ರಾಜಕಾರಣಿಗಳ ಜೀವನ ನಾಯಿಪಾಡು: ಮಾಜಿ ಶಾಸಕ ವೈ.ಎಸ್.ವಿ.ದತ್ತ

ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರ 53ನೇ ವರ್ಷದ ಜನ್ಮದಿನ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 5:42 IST
Last Updated 30 ನವೆಂಬರ್ 2021, 5:42 IST
ಹೊಸದುರ್ಗ ತಾಲ್ಲೂಕಿನ ಬ್ರಹ್ಮವಿದ್ಯಾನಗರ ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರ 53ನೇ ವರ್ಷದ ಜನ್ಮದಿನದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವಾಮೀಜಿ ಅವರನ್ನು ಭಕ್ತರು ಅಭಿನಂದಿಸಿದರು.
ಹೊಸದುರ್ಗ ತಾಲ್ಲೂಕಿನ ಬ್ರಹ್ಮವಿದ್ಯಾನಗರ ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರ 53ನೇ ವರ್ಷದ ಜನ್ಮದಿನದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವಾಮೀಜಿ ಅವರನ್ನು ಭಕ್ತರು ಅಭಿನಂದಿಸಿದರು.   

ಹೊಸದುರ್ಗ: ‘ಪ್ರಸ್ತುತ ರಾಜಕಾರಣಿಗಳ ಜೀವನ ನಾಯಿ ಪಾಡಾಗಿದೆ. ಸಂತರ, ಶರಣರ, ದಾರ್ಶನಿಕರ ಚಿಂತನೆ ಹಾಗೂ ಬದುಕು ಶ್ರೇಷ್ಠವಾಗಿದೆ’ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದರು.

ತಾಲ್ಲೂಕಿನ ಬ್ರಹ್ಮವಿದ್ಯಾನಗರ ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿಅವರ 53ನೇ ವರ್ಷದ ಜನ್ಮದಿನದ ಅಂಗವಾಗಿ ಸೋಮವಾರ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಹಾಗೂ ನಾಯಕತ್ವ ಬೆಳವಣಿಗೆ ಕುರಿತ ಜನೋತ್ಸವ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಒಮ್ಮೆ ನಾಯಿ ಊಟ ಮಾಡಿ ಸುಖವಾಗಿ ನಿದ್ದೆ ಮಾಡುತ್ತಿತ್ತು. ಇದನ್ನು ಕಂಡ ಹಸಿವು ಆಗಿದ್ದ ಒಬ್ಬ ಮನುಷ್ಯ ದ್ವೇಷದಿಂದ ನಾಯಿಗೆ ಜಾಡಿಸಿ ಒದ್ದ. ಆಗ ಆ ನಾಯಿ ಸುಖವಾಗಿ ಮಲಗಿದ್ದ ನನ್ನ ನಿದ್ದೆಯನ್ನು ಈ ಮನುಷ್ಯ ಕೆಡಿಸಿದ ಅಂತ ಶ್ರೀರಾಮನ ಹತ್ತಿರ ಹೋಗಿ ದೂರು ಹೇಳಿತ್ತು. ಆಗ ಶ್ರೀರಾಮ ಈ ಮನುಷ್ಯನಿಗೆ ಏನು ಶಿಕ್ಷೆ ಕೊಡೋಣ ಹೇಳು ಎಂದು ಕೇಳಿದಾಗ, ಆ ನಾಯಿ ಈತನನ್ನು ಶಾಸಕನನ್ನಾಗಿ ಮಾಡಿ ಅಂತ ಹೇಳಿತ್ತು. ಆಗ ಏನು ಹೀಗೆ ಹೇಳುತ್ತಿಯಾ ಎಂದು ರಾಮ ಕೇಳಿದಾಗ ನನ್ನ ಪಾಡು ಆತನಿಗೆ ಬರಲಿ ಎಂದು ನಾಯಿ ಹೇಳಿತ್ತು. ಇವತ್ತಿನ ರಾಜಕಾರಣಿಯ ಬದುಕು ಈ ರೀತಿ ಆಗುತ್ತಿದೆ’ ಎಂದು ವಿಶ್ಲೇಷಿಸಿದರು.

ADVERTISEMENT

ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಬಸವ, ಬುದ್ಧ, ಅಂಬೇಡ್ಕರ್, ಗಾಂಧೀಜಿ, ಲಾಲ್ ಬಹುದ್ದೂರ್ ಶಾಸ್ತ್ರಿ ಸೇರಿ ಹಲವು ಆದರ್ಶ ವ್ಯಕ್ತಿಗಳ ಬದುಕು ಬರಹ ಮಾದರಿಯಾಗಿದೆ. ಭಗೀರಥ ಮಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಈ ಸಮಾಜದ ಸಂಘಟನೆ ಹಾಗೂ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಉಪ್ಪಾರರ ಅಭಿವೃದ್ಧಿಗೆ ರಾಜಕೀಯ ಪ್ರಾತಿನಿಧ್ಯ ಅವಶ್ಯ ಎಂದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದಪುರುಷೋತ್ತಮಾನಂದಪುರಿ ಸ್ವಾಮೀಜಿ, ‘ಎರಡು ದಿನ ನಡೆದ ವ್ಯಕ್ತಿತ್ವ ವಿಕಸನ ಹಾಗೂ ನಾಯಕತ್ವ ಬೆಳವಣಿಗೆ ಕಾರ್ಯಾಗಾರದಲ್ಲಿ ಹಲವು ವೈದ್ಯರು, ವಿದ್ವಾಂಸರು, ಸಾಹಿತಿಗಳು, ಗಣ್ಯರು ಅತ್ಯುತ್ತಮ ಮಾಹಿತಿ ಮಂಡಿಸಿದ್ದಾರೆ. ಶ್ರೀಮಠ ಹಾಗೂ ಸಮಾಜದ ಅಭಿವೃದ್ಧಿಗೆ ಸಂಬಂಧಿಸಿದಂತೆ ಚಿಂತನೆ ಮುಖ್ಯ’ ಎಂದು ತಿಳಿಸಿದರು.

ಮಾಜಿ ಸಚಿವ ಎಚ್.ಎಂ.ರೇವಣ್ಣ, ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಗಿರೀಶ್ ಉಪ್ಪಾರ, ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬಾ ಪತ್ತಾರ್, ಮಾನವ ಕಂಪ್ಯೂಟರ್ ಬಸವರಾಜು ಉಮ್ರಾಣಿ, ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ, ನಿವೃತ್ತ ತಹಶೀಲ್ದಾರ್ ಚನ್ನಬಸಪ್ಪ, ನಿವೃತ್ತ ಮುಖ್ಯಶಿಕ್ಷಕ ಲಕ್ಕಪ್ಪ ಮಾತನಾಡಿದರು.

ಉಪ್ಪಾರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್, ಬಾ.ಮೈಲಾರಪ್ಪ, ಆಡಿಟರ್ ಮಲ್ಲೇಶಪ್ಪ, ಐಲಾಪುರ ಮಲ್ಲಿಕಾರ್ಜುನ್, ಪ್ರಾಂಶುಪಾಲ ಚಂದ್ರಪ್ಪ, ಉಪನ್ಯಾಸಕರಾದ ಕೆ.ಸುರೇಶ್, ತಿಪ್ಪೇಸ್ವಾಮಿ, ಮಂಜುನಾಥ್, ಮುಖ್ಯಶಿಕ್ಷಕ ಬಿ.ಎಂ. ಪ್ರಕಾಶ್, ಉಪ್ಪಾರ ಸಮಾಜದ ಮುಖಂಡರು ಇದ್ದರು.

53ನೇ ಜನ್ಮದಿನದ ಅಂಗವಾಗಿ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರನ್ನು ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಭಗೀರಥ ಗುರುಪೀಠದ ಭಕ್ತರು, ಜನಪ್ರತಿನಿಧಿಗಳು, ಗಣ್ಯರು ಅಭಿನಂದಿಸಿದರು. ಶ್ರೀಮಠದ ಆವರಣದಲ್ಲಿ ಬೆಳಿಗ್ಗೆಯಿಂದಲೂ ಧಾರ್ಮಿಕ ಕಾರ್ಯಕ್ರಮಗಳು, ವಚನ ಗಾಯನ, ಯೋಗ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.