ADVERTISEMENT

ಸಿರಿಯಜ್ಜಿ ಪದಗಳನ್ನು ಕಲ್ಲಿನಲ್ಲಿ ಕೆತ್ತಿಸಬೇಕು: ಕೃಷ್ಣಮೂರ್ತಿ ಹನೂರು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 7:17 IST
Last Updated 25 ಆಗಸ್ಟ್ 2025, 7:17 IST
ಯಲಗಟ್ಟೆ ಗೊಲ್ಲರಹಟ್ಟಿ ಕುರಿಮರಡಿ ಬಳಿ ಭಾನುವಾರ ಆಯೋಜಿಸಿದ್ದ ಜಾನಪದ ಸಿರಿಯಜ್ಜಿ ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಕೃಷ್ಣಮೂರ್ತಿ ಹನೂರು ಮಾತನಾಡಿದರು
ಯಲಗಟ್ಟೆ ಗೊಲ್ಲರಹಟ್ಟಿ ಕುರಿಮರಡಿ ಬಳಿ ಭಾನುವಾರ ಆಯೋಜಿಸಿದ್ದ ಜಾನಪದ ಸಿರಿಯಜ್ಜಿ ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಕೃಷ್ಣಮೂರ್ತಿ ಹನೂರು ಮಾತನಾಡಿದರು   

ಚಳ್ಳಕೆರೆ: ‘ನೂರಾರು ಜನ ಅಭಿಜಾತ ಕಲಾವಿದರನ್ನು ಹೊಂದಿರುವ ಚಿತ್ರದುರ್ಗ ಪರಿಸರದಲ್ಲಿ ಅಪಾರವಾದ ಜಾನಪದ ಸಂಪತ್ತು ಇದೆ’ ಎಂದು ಖ್ಯಾತ ಜಾನಪದ ವಿದ್ವಾಂಸ ಕೃಷ್ಣಮೂರ್ತಿ ಹನೂರು ಅಭಿಪ್ರಾಯಪಟ್ಟರು.

ತಾಲ್ಲೂಕಿನ ದೇವರಮರಿಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕೆನಹಳ್ಳಿ ಯಲಗಟ್ಟೆ ಗೊಲ್ಲರಹಟ್ಟಿ ಕುರಿಮರಡಿ ಬಳಿ ನಾಡೋಜ ಜಾನಪದ ಹಾಡುಗಾರ್ತಿ ಸಿರಿಯಜ್ಜಿ ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ತನ್ನ ಆಗಾಧ ನೆನಪಿನ ಶಕ್ತಿ ಹೊಂದಿದ್ದ ನಾಡೋಜ ಸಿರಿಯಜ್ಜಿ ಎದೆಯಲ್ಲಿ ಸಾವಿರಾರು ಪದಗಳು ಇದ್ದವು. ಪದ ಹಾಡುತ್ತ ಹಾಡುತ್ತ ಅವುಗಳ ಅರ್ಥ ಮತ್ತು ವಿವರಣೆಯಲ್ಲಿ ವಿದ್ವಾಂಸರನ್ನು ತಬ್ಬಿಬ್ಬು ಮಾಡುತ್ತಿದ್ದಳು. ಅಜ್ಜಿಯ ಪದ ಸಂಪತ್ತು ಮಹಾಕವಿ ಪಂಪ ಹಾಗೂ ಕುಮಾರವ್ಯಾಸರಿಗೆ ಸಮ. ಹೀಗಾಗಿ ಸಿರಿಯಜ್ಜಿ ಹಾಡಿರುವ ಪ್ರಸಿದ್ಧ ಪದಗಳನ್ನು ಕಲ್ಲಿನಲ್ಲಿ ಕೆತ್ತನೆ ಮಾಡಿ ನಿಲ್ಲಿಸಬೇಕು. ತತ್ವಪದ ಸಂತ ಶಿಶುನಾಳ ಶರೀಫರ ಸ್ಮಾರಕದ ಮಾದರಿಯಲ್ಲಿ ಹಾಡುಗಾರ್ತಿ ಸಿರಿಯಜ್ಜಿ ಸ್ಮಾರಕವನ್ನು ಅಭಿವೃದ್ಧಿಪಡಿಸುವ ಚಿಂತನೆ ನಡೆಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಬುಡಕಟ್ಟು ಸಂಸ್ಕಂತಿಕ ಚಿಂತಕ ಪ್ರೊ.ಬಿ.ಪಿ. ವೀರೇಂದ್ರಕುಮಾರ್ ಮಾತನಾಡಿ, ವಿಶ್ವ ಜಾನಪದಕ್ಕೆ ಸಿರಿಯಜ್ಜಿ ಕೊಡುಗೆ ಅನನ್ಯವಾಗಿದೆ ಎಂದು ಹೇಳಿದರು.

ವನಕಲ್ಲು ಮಠದ ಬಸವ ರಮಾನಂದಸ್ವಾಮಿ, ಲಕ್ಷ್ಮೀನರಸಿಂಹಸ್ವಾಮಿ ಟ್ರಸ್ಟ್ ಉಪಾಧ್ಯಕ್ಷೆ ರಾಜೇಶ್ವರಿ, ಐಎಫ್‍ಎಸ್ ನಿವೃತ್ತ ಅಧಿಕಾರಿ ಚಿಕ್ಕಪ್ಪಯ್ಯ, ನಂದೀಶ್ ಮಾತನಾಡಿದರು.

ಜೆ.ಸಿ. ರಂಗಸ್ವಾಮಿ, ಎಂ. ಪರಮೇಶ, ರಂಗನಾಥ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಕ್ಯಾತಪ್ಪ, ದಾವಣಗೆರೆ ಮಂಜುಣ್ಣ, ಕಥೆಗಾರ ಎನ್.ಆರ್. ತಿಪ್ಪೇಸ್ವಾಮಿ, ಉಪನ್ಯಾಸ ವೆಂಕಟರಮಣ, ಪತ್ರಕರ್ತ ಬೆಳಗೆರೆ ಜಯಣ್ಣ, ಬುಡಕಟ್ಟು ಛಾಯಾಗ್ರಾಹಕ ನಿಸರ್ಗಗೋವಿಂದರಾಜ, ಚಿತ್ರಕಲಾವಿದ ಮೈಸೂರು ಚಿಕ್ಕಣ್ಣ, ಶಿಕ್ಷಕ ಕಸ್ತೂರಿ ತಿಮ್ಮನಹಳ್ಳಿ ಶ್ರೀಕಾಂತ, ನಿವೃತ್ತ ಮುಖ್ಯ ಶಿಕ್ಷಕ ಮಂಜಣ್ಣ, ಕಾಡುಗೊಲ್ಲ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ, ಗ್ರಾಮದ ಮುಖಂಡ ಭದ್ರಣ್ಣ, ಶ್ರೀನಿವಾಸ್, ವೀರೇಶ್, ತಿಪ್ಪೇಸ್ವಾಮಿ, ಮಂಜಣ್ಣ ಇದ್ದರು.

ಚಳ್ಳಕೆರೆ ತಾಲ್ಲೂಕಿನ ಯಲಗಟ್ಟೆ ಗೊಲ್ಲರಹಟ್ಟಿ ಕುರಿಮರಡಿ ಬಳಿ ನಿರ್ಮಿಸಿದ್ದ ಜಾನಪದ ಸಿರಿಯಜ್ಜಿ ಸ್ಮಾರಕಕ್ಕೆ ಖ್ಯಾತ ಜಾನಪದ ವಿದ್ವಾಂಸ ಕೃಷ್ಣಮೂರ್ತಿ ಆರತಿ ಬೆಳಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.