ADVERTISEMENT

‘ಪ್ರಜಾವಾಣಿ’ ಮತ್ತು ನಾನು

ಬಿ.ಎಲ್.ವೇಣು
Published 30 ಆಗಸ್ಟ್ 2023, 10:40 IST
Last Updated 30 ಆಗಸ್ಟ್ 2023, 10:40 IST
‘ಪ್ರಜಾವಾಣಿ’ ಓದಿನಲ್ಲಿ ಮಗ್ನರಾಗಿರುವ ಕಾದಂಬರಿಕಾರ ಬಿ.ಎಲ್‌.ವೇಣು
‘ಪ್ರಜಾವಾಣಿ’ ಓದಿನಲ್ಲಿ ಮಗ್ನರಾಗಿರುವ ಕಾದಂಬರಿಕಾರ ಬಿ.ಎಲ್‌.ವೇಣು   

ಬೆಳಗಿನ ಕಾಫಿ ಕಪ್ ಜೊತೆ ‘ಪ್ರಜಾವಾಣಿ’ ಹಿಡಿದರೇನೇ ಬೆಳಗಿಗೊಂದು ಖದರ್. ಓದುಗನಾಗಿ ‘ಪ್ರಜಾವಾಣಿ’ಯು ನನ್ನ ನಲವತ್ತು ವರ್ಷಗಳ ಸಂಗಾತಿ. ಬರಹಗಾರನಾಗಿಯೂ ಹೆಚ್ಚುಕಮ್ಮಿ ಅಷ್ಟೇ ವರ್ಷಗಳ ಗೆಳೆತನ. ಆಗೆಲ್ಲಾ ಮನೆಗೆ ಪತ್ರಿಕೆ ತರಿಸದಷ್ಟು ಬಡತನವಿತ್ತು. ‘ಪ್ರಜಾವಾಣಿ’ ಓದಲೆಂದೇ ಗೆಳೆಯ ರಾಜಣ್ಣನ ಕಟ್ಟಿಂಗ್ ಶಾಪ್‍ಗೆ ಹೋಗುತಿದ್ದೆ. ನನ್ನ ಕಥೆ ಬಂದಿದೆಯೋ ಇಲ್ಲವೋ ಎಂದು ನೋಡಲೂ ಸಹ ಕಟ್ಟಿಂಗ್ ಶಾಪ್, ಇಲ್ಲವೆ ಸರ್ಕಾರಿ ಲೈಬ್ರರಿಗೆ ಎಡತಾಕುವುದು ಅನಿವಾರ್ಯವಾಗಿತ್ತು. ಯಾರ ಯಾರದ್ದೋ ಕೈಯಲ್ಲಿ ‘ಪ್ರಜಾವಾಣಿ’, ‘ಸುಧಾ’, ‘ಮಯೂರ‘ ಇರೋವು. ತಾಳ್ಮೆಯಿಂದ ಕಾದು ನೋಡಬೇಕಿತ್ತು. ಕಥೆ ಏನಾದರೂ ಬಂದಿದ್ದರೆ ಮಾತ್ರ ಕೊಳ್ಳುವ ಸಾಹಸ. ಆಗೆಲ್ಲಾ ‘ಪ್ರಜಾವಾಣಿ’ಗೆ 25 ಪೈಸೆಯಾದರೆ ‘ಸುಧಾ’ಕ್ಕೆ ₹ 2, ‘ಮಯೂರ’ಕ್ಕೆ ₹ 3. ಆಗ ನನ್ನ ಪಾಲಿಗದು ದೊಡ್ಡ ಮೊತ್ತ. ಆದರೂ, ಓದುವ ಹವ್ಯಾಸ ಕೇಳಬೇಕಲ್ಲ. ಕಥೆ ಇದ್ದರೆ ರಾಜಣ್ಣ ತೆಗೆದಿಟ್ಟು ಸಂಜೆ ಕೊಡುತ್ತಿದ್ದದೂ ಉಂಟು. ಸರ್ಕಾರಿ ನೌಕರಿ ಸಿಕ್ಕ ಮೇಲೆಯೇ ನಾನು ಈ ಪಜೀತಿಯಿಂದ ಪಾರಾದದ್ದು.

ಎಪ್ಪತ್ತರ ದಶಕದಲ್ಲಿಯೇ ಸಾಹಿತಿ, ಚಳುವಳಿಗಾರರ, ರಾಜಕಾರಣಿಗಳ ಜನಸಾಮಾನ್ಯರ ನಂಬಿಕೆಯ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯಾಗಿ ‘ಪ್ರಜಾವಾಣಿ’ ಪ್ರಭಾವ ಬೀರಿದ್ದ ಪತ್ರಿಕೆ. ಆ ದಿನಮಾನಗಳಲ್ಲಿ ‘ಪ್ರಜಾವಾಣಿ’ಯಲ್ಲಿ ಕಥೆ ಬಂದರೇನೇ ಅವನೊಬ್ಬ ಉತ್ತಮ ಲೇಖಕನೆಂದು ಸಾಹಿತ್ಯವಲಯದಲ್ಲಿ ಗುರುತಿಸುತ್ತಿದ್ದ ಕಾಲ. ‘ಪ್ರಜಾವಾಣಿ’ ಸಾಪ್ತಾಹಿಕದಲ್ಲಿ ಕಥೆ ಬರುವುದೆಂದರೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಷ್ಟೇ ಇಮೇಜ್ ಇದ್ದ ಕಾಲವೂ ಸಹ. ನನ್ನ ಕಥೆಗಳು ‘ಸುಧಾ’, ‘ಮಯೂರ’ ಇತರೆ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದರೂ ‘ಪ್ರಜಾವಾಣಿ’ಗೆ ಕಳುಹಿಸಿದ ಕಥೆಗಳೆಲ್ಲವೂ ಗೋಡೆಗೆಸೆದ ಚೆಂಡಿನಂತೆ ವಿಷಾದ ಪತ್ರ ಹೊತ್ತು ವಾಪಾಸ್ ಬರುತ್ತಿದ್ದ ದುರ್ದಿನಗಳು.

ಆಗ ಪುರವಣಿ ಸಂಪಾದಕರಾಗಿದ್ದವರು ನಮ್ಮೂರಿನವರೇ ಆದ ಬಿ.ವಿ.ವೈಕುಂಠರಾಜು. ನಮ್ಮೂರಲ್ಲಿ ಆಗ ‘ಚಿಂತನ’ ಎಂಬ ಸಾಹಿತ್ಯಕೂಟವಿತ್ತು. ಅದರ ಅಧ್ಯಕ್ಷರು ಕೂಡ ರಾಜುವೆ. ಉಪಾಧ್ಯಕ್ಷರು ಡಾ.ಎಂ.ಎ.ಶ್ರೀನಿವಾಸ್, ಪ್ರೊ.ಲಕ್ಷ್ಮಣ ತೆಲಗಾವಿ, ಹನೂರು ಕೃಷ್ಣಮೂರ್ತಿ, ನಾನು, ಕೆ.ವೆಂಕಣ್ಣಚಾರ್ ಇತರರು ಸದಸ್ಯರು. ವಾರಕೊಮ್ಮೆ ಒಂದೆಡೆ ಸೇರಿ ಸಾಹಿತ್ಯ ಚರ್ಚೆ ನಡೆಸೋದು. ತಿಂಗಳಿಗೆ ಒಮ್ಮೆ ವೈಕುಂಠರಾಜು ಬರುತ್ತಿದ್ದುದೊಂದು ವಿಶೇಷ. ಸಾಹಿತ್ಯದ ಚರ್ಚೆಗೆ ಹಲವು ಸಲ ನಾನು ನನ್ನ ಕಥೆಗಳೂ ವಸ್ತುವಾಗುತ್ತಿದ್ದದುಂಟು. ‘ವೇಣುವಿನ ಮೂವತ್ತೋ, ಮೂವತ್ತೈದು ಕಥೆಗಳನ್ನು ವಾಪಾಸ್ ಕಳುಹಿಸಿದ್ದೀನಿ ಕಣ್ರಿ. ಆದರೂ ಭಂಡ ಕಳಿಸ್ತನೇ ಇರ್ತಾನೆ. ‘ಸುಧಾ’, ‘ಮಯೂರ’ದಲ್ಲಿ ಬರುತ್ತಲ್ಲ ಸಾಕು ಬಿಡೋ. ಪ್ರಜಾವಾಣೀಲಿ ಬರೋಕೆ ಯೋಗ್ಯತೆ ಬೇಕು” ಎಂದು ನೇರವಾಗಿಯೇ ರಾಜು ನನಗೆ ಜಾಡಿಸಿ ತಮಾಷೆ ಮಾಡೋರು.

ADVERTISEMENT

ಇಷ್ಟಾದರೂ ನಾನು ಕಥೆ ಬರೆದೊಡನೆ ಮೊದಲಿಗೆ ಕಳುಹಿಸುತಿತದ್ದುದ್ದೇ ‘ಪ್ರಜಾವಾಣಿ’ಗೆ. ಆಗೆಲ್ಲಾ ವಿಷಾದ ಪತ್ರವಿರಿಸಿ ಹಿಂದಿರುಗಿಸುವ ಸತ್ ಸಂಪ್ರಾಯದಾಯವಿತ್ತು. ಅಲ್ಲಿಂದ ವಾಪಾಸ್ ಬಂದನಂತರವೆ ಬೇರೆ ಪತ್ರಿಕೆಗಳಿಗೆ ಪ್ರಯತ್ನ ಮಾಡುತ್ತಿದ್ದೆ. ಈಗಿನ ಹಾಗೆ ಡಿಟಿಪಿ ಮಾಡಿಸಿ ಇಮೇಲ್ ಮಾಡಬೇಕೆಂಬ ಕಟ್ಟುಪಾಡುಗಳಿದ್ದಿದ್ದರೆ ನನ್ನಂಥ ಬಡವ ಕಥೆಗಾರನಾಗಲು ಸಾಧ್ಯವೇ ಇರಲಿಲ್ಲ. ಏಕೆಂದರೆ ಡಿಟಿಪಿ ಒಂದು ಪೇಜಿಗೆ ನಲವತ್ತು ರೂಪಾಯಿ. ಇದಿರಲಿ ಬಿಡಿ ಪ್ರಜಾವಾಣೀಲಿ ನನ್ನ ಕಥೆ ಬಾರದಿದ್ದರೂ ನಾನಾಗಲೇ ಸಾಕಷ್ಟು ಬರೆದು ಹೆಸರು ಮಾಡಿದ್ದು, ಕಾದಂಬರಿ ರಚನೆಯಲ್ಲೂ ತೊಡಗಿದ್ದೆ. ‘ನೆನ್ನಿ’, ‘ಪರಾಜಿತ’, ‘ಪ್ರೇಮಪರ್ವ’ ಕಾದಂಬರಿಗಳಾಗಲೇ ಚಲನಚಿತ್ರಗಳಾಗಿದ್ದು, ಚಿತ್ರರಂಗದಲ್ಲಿ ಸಂಭಾಷಣಾಕಾರನಾಗಿಯೂ ಗುರುತಿಸಿಕೊಂಡಿದ್ದರೂ ‘ಪ್ರಜಾವಾಣಿ’ಯಲ್ಲಿ ಒಂದು ಕಥೆ ಪ್ರಕಟವಾಗದ್ದರಿಂದ ಒಂತರಾ ಸೋತ ಭಾವ ಕಾಡಿದಂತಾಗಿ ಗೆಲ್ಲುವ ಹಠ ಗರಿಗೆದರದಿರಲಿಲ್ಲ. ಕಥೆಯಂತೂ ಕಳುಹಿಸಿ ಪ್ರಯತ್ನ ಮಾಡುತ್ತಲೇ ಇದ್ದೆ.

1983ರ ಭಾನುವಾರ, ನಾನು ಕಳುಹಿಸಿದ ‘ತಿಥಿ’ ಎಂಬ ಕಥೆಯೊಂದು ‘ಪ್ರಜಾವಾಣಿ’ ಪುರವಣಿಯಲ್ಲಿ ಮೊದಲ ಬಾರಿಗೆ ಪ್ರಕಟವಾದಾಗ ನನಗೆ ಆಶ್ಚರ್ಯ ಮತ್ತು ಸಂತಸ ಏಕಕಾಲದಲ್ಲುಂಟಾಗಿದ್ದು ಸುಳ್ಳಲ್ಲ. ಅಲ್ಲಿಂದ ‘ಪ್ರಜಾವಾಣಿ’ ಸಾಪ್ತಾಹಿಕದಲ್ಲಿ ನಿಧಾನವಾಗಿ ನನ್ನ ಕಥೆಗಳು ವಿಜೃಂಭಿಸಲಾರಂಭಿಸಿ ನನ್ನಲ್ಲುಂಟಾಗಿದ್ದ ಕೊರತೆಯನ್ನು ನೀಗಿಸಿದವು. ‘ಪ್ರಜಾವಾಣಿ’ ಬಳಗದ್ದು ನನ್ನದು ಇಂದಿಗೂ ಅವಿನಾಭಾವ ಸಂಬಂಧ. ‘ಸುಧಾ’ ಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ದಲಿತ ಸಮಸ್ಯೆ ಬಗೆಗಿನ ನನ್ನ ‘ಅತ್ರಂತರು’ ಕಾದಂಬರಿ ಪ್ರಥಮ ಬಹುಮಾನ ಗಳಿಸಿದರೆ, 2005ರಲ್ಲಿ ‘ಪ್ರಜಾವಾಣಿ’ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ನನ್ನದೊಂದು ಕಥೆ ‘ಸುಡುಗಾಡು ಸಿದ್ಧನ ಪ್ರಸಂಗ’ ಪ್ರಪ್ರಥಮ ಬಹುಮಾನ ಪಡೆದು ನನ್ನ ಹಠಗೆಲ್ಲಿಸಿತ್ತು.

ಚಿತ್ರಸಾಹಿತಿಯಾಗಿ ನನ್ನ ಮೊಟ್ಟ ಮೊದಲ ಸಂದರ್ಶನ ‘ಪ್ರಜಾವಾಣಿ’ಗೆ ಮಾಡಿದವರು ಗಂಗಾಧರ ಮೊದಲಿಯಾರ್. ‘ಸುಧಾ’ದಲ್ಲಿ ಧಾರವಾಹಿಯಾಗಿ ಪ್ರಕಟವಾದ ‘ಕಲ್ಲರಳಿ ಹೂವಾಗಿ’ ಕಾದಂಬರಿ ಚಲನಚಿತ್ರವಾಗಿ ಭರ್ಜರಿ ಯಶಸ್ಸು, ‘ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿ’ ಗಳಿಸಿದ್ದೊಂದು ಹೆಗ್ಗಳಿಕೆ. ಹಾಗೆ ನೋಡಿದರೆ ‘ಪ್ರಜಾವಾಣಿ’ ಸಾಪ್ತಾಹಿಕದಲ್ಲಿ ನನ್ನದೇ ಅತ್ಯಂತ ಹೆಚ್ಚು ಕಥೆಗಳು ಪ್ರಕಟವಾಗಿವೆ. ಈಗಲೂ ಪ್ರಕಟವಾಗುತ್ತಿವೆ ಎಂಬ ಹಿಗ್ಗು ಸಾಲದೆ 78 ವರ್ಷದ ಹರೆಯದ ನನಗೆ.

‘ಪ್ರಜಾವಾಣಿ’ಯ ವಿಶೇಷತೆ ಎಂದರೆ ಹೆಚ್ಚು ಕಡಿಮೆ ಎಲ್ಲಾ ಪತ್ರಿಕೆಗಳೂ ರಾಜಕೀಯ ಪಕ್ಷ ಒಂದರ ತತ್ತೂರಿಯಾಗಿರುವಾಗ ‘ಪ್ರಜಾವಾಣಿ’ ಮಾತ್ರ ತುಂಬಾ ನಿಷ್ಪಕ್ಷಪಾತವಾಗಿ ವರ್ತಿಸುತ್ತಾ ತನ್ನ ಹಿರಿತನ (75ರ ಹರೆಯ) ಕಾಯ್ದುಕೊಂಡು ಓದುಗರ ನಂಬಿಕೆ, ಜನರ ವಿಶ್ವಾಸಾರ್ಹತೆಯನ್ನು ಗೆದ್ದುಕೊಂಡಿರುವ ಬದ್ಧತೆ, ವಿಚಾರಪರತೆ, ಸಾಮಾಜಿಕ ನ್ಯಾಯ, ಧರ್ಮಾತೀತತೆ ಪಾಲಿಸುತ್ತಿರುವುದು ಸಾಮಾನ್ಯ ಸಂಗತಿಯೇನಲ್ಲ. ‘ಪ್ರಜಾವಾಣಿ’ ಮುಂದೆಯೂ ತನ್ನದೇ ಆದ ವಿಶೇಷತೆಯಿಂದ ಶತಶತಮಾನಗಳ ಕಾಲ ಓದುಗರ ಕಣ್ಮಣಿಯಾಗುಳಿದು ಬೆಳಗಲೆಂದು ಶುಭ ಹಾರೈಸುವೆ.

‘ಪ್ರಜಾವಾಣಿ’ ಓದಿನಲ್ಲಿ ಮಗ್ನರಾಗಿರುವ ಕಾದಂಬರಿಕಾರ ಬಿ.ಎಲ್.ವೇಣು
ಬಿ.ಎಲ್.ವೇಣು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.