ಹಿರಿಯೂರು: 'ಉನ್ನತ ಸ್ಥಾನಕ್ಕೇರಿದ ನಂತರ ಆ ಸ್ಥಾನಕ್ಕೇರಲು ಕಾರಣವಾದ ಏಣಿಯನ್ನು ಮರೆಯಬಾರದು’ ಎಂದು ಚಲನಚಿತ್ರ ನಟ ಪ್ರಕಾಶ್ ಬೆಳವಾಡಿ ತಿಳಿಸಿದರು.
ತಾಲ್ಲೂಕಿನ ಹೊಸಯಳನಾಡು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಶಾಲಾ ಪರಿಕರ ವಿತರಣೆ ಹಾಗೂ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು.
‘ಅಕ್ಷರ ಕಲಿಸಿದ ಶಾಲೆಯನ್ನು ಅಭಿವೃದ್ಧಿ ಪಡಿಸಬೇಕು ಎಂದು ನಾ. ತಿಪ್ಪೇಸ್ವಾಮಿಯವರು ಹಳೆಯ ವಿದ್ಯಾರ್ಥಿಗಳನ್ನೆಲ್ಲ ಒಟ್ಟುಗೂಡಿಸಿಕೊಂಡು ಶ್ರಮಿಸಿದ್ದರ ಫಲವಾಗಿ ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗೂ ಕಡಿಮೆ ಇಲ್ಲದ ರೀತಿ ಸರ್ಕಾರಿ ಶಾಲೆ ರೂಪುಗೊಂಡಿದೆ. ಉನ್ನತ ಸ್ಥಾನಕ್ಕೆ ಹೋದವರಿಗೆ ಕಲಿತ ಶಾಲೆ, ಕಲಿಸಿದ ಗುರುಗಳನ್ನು ಸ್ಮರಿಸುವ ಸಂಸ್ಕಾರ ಇದ್ದರೆ ಏನಾಗುತ್ತದೆ ಎಂಬುದಕ್ಕೆ ಈ ಶಾಲೆ ನಿದರ್ಶನ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ವರ್ಷದ ಕೊನೆಯಲ್ಲಿ ಅತ್ಯಧಿಕ ಅಂಕ ಗಳಿಸಿದಾಕ್ಷಣ ಒಬ್ಬ ವಿದ್ಯಾರ್ಥಿ ಶ್ರೇಷ್ಠ ಎನಿಸಿಕೊಳ್ಳಲಾರ. ಬದಲಿಗೆ ತನ್ನ ಸುತ್ತ ಇರುವ ಅಸಹಾಯಕರಿಗೆ ಸಹಾಯ ಮಾಡುವ, ಅನ್ಯರಿಗೆ ತೊಂದರೆ ಕೊಡದ ಮನೋಭಾವ ಬೆಳೆಸಿಕೊಂಡಲ್ಲಿ ಅವನು ಭವಿಷ್ಯದಲ್ಲಿ ದೊಡ್ಡ ವ್ಯಕ್ತಿಯಾಗುತ್ತಾನೆ. ಬಡತನ ಎಂದಿಗೂ ಶಿಕ್ಷಣಕ್ಕೆ ಅಡ್ಡಿಯಾಗಬಾರದು. ಸರ್ಕಾರಿ ಶಾಲೆಗಳಲ್ಲಿ ದೊರೆಯುವ ಉಚಿತ ಶಿಕ್ಷಣದ ಮೂಲಕ ಅಂದುಕೊಂಡಿದ್ದನ್ನು ಸಾಧಿಸಬೇಕು’ ಎಂದು ಶಾಲೆಯ ಮಹಾಪೋಷಕ ನಾ. ತಿಪ್ಪೇಸ್ವಾಮಿ ಸೂಚಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ತಿಮ್ಮಶೆಟ್ರು ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಆಕ್ಸ್‌ಫರ್ಡ್ ಕಾಲೇಜಿನ ಪ್ರಾಂಶುಪಾಲ ಬಿ. ಸುಪ್ರೀತ್, ದಯಾನಂದ ಸಾಗರ್ ದಂತ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಹೇಮಂತ್, ಅವಿನಾಶ್ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಲತಾ, ಸದಸ್ಯ ಟಿ. ನರಸಿಂಹಮೂರ್ತಿ, ನಾಗೇಂದ್ರ, ವಿನಯ್ ಕುಮಾರ್, ನಿಂಗೇಶ್ ಉಪಸ್ಥಿತರಿದ್ದರು.
ಶಾಲೆಯ ಮಹಿಳಾ ಸಿಬ್ಬಂದಿ ಹಾಗೂ ಮಹಿಳಾ ಶಿಕ್ಷಕಿಯರಿಗೆ ಶ್ರಾವಣದ ಪ್ರಯುಕ್ತ ಅರಿಶಿನ ಕುಂಕುಮ ಹಾಗೂ ಸೀರೆ ವಿತರಿಸಲಾಯಿತು. ಬೆಂಗಳೂರಿನ ಸೇಫ್ ಫೌಂಡೇಷನ್ ವೈದ್ಯರ ತಂಡ ಆರೋಗ್ಯ ತಪಾಸಣೆ ನಡೆಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.