ಚಿತ್ರದುರ್ಗ: ‘ನಗರದಲ್ಲಿ ಜರುಗುವ ವಿಎಚ್‌ಪಿ ಮಹಾಗಣಪತಿ ವಿಸರ್ಜನೆ ಹಾಗೂ ಶೋಭಾಯಾತ್ರೆ ಮೆರವಣಿಗೆ ವೇಳೆ ಜನದಟ್ಟಣೆ ಹಾಗೂ ವಿಪತ್ತು ನಿರ್ವಹಣೆಗೆ ಪೊಲೀಸರ ಜೊತೆಗೆ ಅಗ್ನಿಶಾಮಕ, ಗೃಹ ರಕ್ಷಕದಳ, ನಗರಸಭೆ, ಆರೋಗ್ಯ, ಸಾರಿಗೆ ಇಲಾಖೆ ಸಿಬ್ಬಂದಿ, ಎನ್‌ಸಿಸಿ, ಎನ್‌ಎಸ್‌ಎಸ್ ಸ್ವಯಂ ಸೇವಕರು ಸಮನ್ವಯ ಅವಶ್ಯಕವಾಗಿದೆ’ ಎಂದರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಹೇಳಿದರು.
ನಗರದ ಜಿಲ್ಲಾ ಕವಾಯತು ಮೈದಾನದಲ್ಲಿ ಸೋಮವಾರ ಮಹಾಗಣಪತಿ ಶೋಭಾಯಾತ್ರೆ ಸಿದ್ಧತೆ ಹಾಗೂ ವಿಪತ್ತು ನಿರ್ವಹಣೆ ಅಣಕು ಪ್ರದರ್ಶನದ ವೇಳೆ ಅವರು ಮಾತನಾಡಿದರು.
‘ಈ ಬಾರಿಯ ಮೆರವಣಿಗೆಯಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ. ವಿಪತ್ತು ನಿರ್ವಹಣೆ ಹಾಗೂ ಜನರ ಜೀವರಕ್ಷಣೆ ಕಾರ್ಯಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅತಿಯಾದ ಜನದಟ್ಟಣೆಯಿಂದ ನೂಕು ನುಗ್ಗಲು, ಕಾಲ್ತುಳಿತ, ವಿದ್ಯುತ್ ಹಾಗೂ ಅಗ್ನಿ ಅವಘಡದಂತಹ ವಿಪತ್ತು ಉಂಟಾಗಬಹದು. ಕೆಲವರಿಗೆ, ರಕ್ತದೊತ್ತಡ, ಹೃದಯಾಘಾತ ಸೇರಿದಂತೆ ವೈದ್ಯಕೀಯ ತುರ್ತು ಎದುರಾಗಬಹುದು. ಈ ವೇಳೆ ಸ್ಥಳದಲ್ಲಿರುವ ಪೊಲೀಸರು, ವೈದ್ಯಕೀಯ ಸಿಬ್ಬಂದಿ ಮೊದಲಿಗೆ ಸ್ಪಂದಿಸಬೇಕು’ ಎಂದು ತಿಳಿಸಿದರು.
ಜಿಲ್ಲಾ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಮಾತನಾಡಿ, ‘ಜಿಲ್ಲಾಸ್ಪತ್ರೆ, ಬಸವೇಶ್ವರ ಹಾಗೂ ವೇದಾಂತ ಆಸ್ಪತ್ರೆಗಳು ಮೆರವಣಿಗೆ ಹಾದಿ ಸಾಗುವ ಹತ್ತಿರದ ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭಕ್ಕಾಗಿ 200 ಬೆಡ್‍ಗಳನ್ನು ಮೀಸಲಿರಿಸಲಾಗುವುದು. 10 ಸರ್ಕಾರಿ 10 ಖಾಸಗಿ ಆಂಬುಲೆನ್ಸ್‌ಗಳನ್ನು ಸಿದ್ಧಗೊಳಿಸಲಾಗುವುದು. ಎಲ್ಲಾ ತಜ್ಞ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಕೆಲಸಕ್ಕೆ ನಿಯೋಜಿಸಲಾಗುವುದು’ ಎಂದರು.
ನಗರಸಭೆ ಎಂಜಿನಿಯರ್ ರಾಜು ಮಾತನಾಡಿ ‘ಶೋಭಾಯಾತ್ರೆ ದಿನ ನಗರ ಸಂಪರ್ಕಿಸುವ 6 ಮುಖ್ಯ ರಸ್ತೆಗಳಲ್ಲಿ ಚೆಕ್ ಪೋಸ್ಟ್, ಮೆರವಣಿಗೆ ಸಾಗುವ ಹಾದಿಯುದ್ದಕ್ಕೂ 18 ಕಡೆ ಪೊಲೀಸ್ ವಾಚ್ ಟವರ್ ನಿರ್ಮಿಸಲಾಗುವುದು. ಮುಂಜಾಗ್ರತಾ ಕ್ರಮವಾಗಿ 161 ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಇದರೊಂದಿಗೆ 20 ವಿಡಿಯೊಗ್ರಾಫರ್‌ಗಳನ್ನು ನಿಯೋಜಿಸಲಾಗುವುದು’ ಎಂದು ಹೇಳಿದರು.
ಶೋಭಾಯಾತ್ರೆ ಜನದಟ್ಟಣೆ ನಡುವೆ ರಕ್ಷಣಾ ಕಾರ್ಯ ನಡೆಸುವ ಕುರಿತು ಚಿತ್ರದುರ್ಗ ನಗರದ ಗಾಂಧಿ ವೃತ್ತದಲ್ಲಿ ಸೋಮವಾರ ಸಂಜೆ ಅಣಕು ಪ್ರದರ್ಶನ ನಡೆಸಲಾಯಿತು. ಈ ವೇಳೆ ವಿಪತ್ತಿಗೆ ತುತ್ತಾದ ವ್ಯಕ್ತಿಗಳನ್ನು ಅಗ್ನಿಶಾಮಕ ಹಾಗೂ ಸ್ವಯಂ ಸೇವಕರು ಆಂಬ್ಯುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ರವಾನಿಸಿದರು.
ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉಮೇಶ್ ಈಶ್ವರ್ ನಾಯ್ಕ್, ಡಿವೈಎಸ್‌ಪಿ ಶ್ರೀನಿವಾಸ್, ದಿನಕರ್, ಡಿಡಿಪಿಐ ಎಂ.ಆರ್. ಮಂಜುನಾಥ, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.