ADVERTISEMENT

ಹೆದ್ದಾರಿ ತಡೆ: ಸಂಚಾರ ಅಸ್ತವ್ಯಸ್ತ

ಕೃಷಿ ಕಾಯ್ದೆ ವಿರುದ್ಧ ರೈತರ ಆಕ್ರೋಶ, ದೆಹಲಿ ಚಳವಳಿಗೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 15:59 IST
Last Updated 6 ಫೆಬ್ರುವರಿ 2021, 15:59 IST
ಚಿತ್ರದುರ್ಗದ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರು ಶನಿವಾರ ವಾಹನ ತಡೆದು ಪ್ರತಿಭಟನೆ ನಡೆಸಿದರು.
ಚಿತ್ರದುರ್ಗದ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರು ಶನಿವಾರ ವಾಹನ ತಡೆದು ಪ್ರತಿಭಟನೆ ನಡೆಸಿದರು.   

ಚಿತ್ರದುರ್ಗ: ಕೇಂದ್ರ ಸರ್ಕಾರದ ಕೃಷಿ ಸಂಬಂಧಿ ಕಾಯ್ದೆಗಳನ್ನು ವಿರೋಧಿಸಿ ಕರೆ ನೀಡಿದ್ದ ಹೆದ್ದಾರಿ ತಡೆಗೆ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ರೈತರು ಆಕ್ರೋಶ ಹೊರಹಾಕಿದ್ದಾರೆ.

ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಹೊಳಲ್ಕೆರೆ ಸೇರಿದಂತೆ ಜಿಲ್ಲೆಯ ಎಲ್ಲೆಡೆ ರೈತರು ಬೀದಿಗೆ ಇಳಿದಿದ್ದರು. ರಸ್ತೆ ತಡೆ ನಡೆಸಿದ ಪ್ರತಿಭಟನಕಾರರಲ್ಲಿ ಕೆಲವರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.

ಚಿತ್ರದುರ್ಗದಲ್ಲಿ ಹಾದು ಹೋಗಿರುವ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪ್ರಗತಿಕೃಷ್ಣ ಗ್ರಾಮೀಣ ಬ್ಯಾಂಕಿನ ಸಮೀಪ ರೈತ, ಕಾರ್ಮಿಕ, ದಲಿತ, ವಿದ್ಯಾರ್ಥಿ, ಯುವಜನ ಹಾಗೂ ಮಹಿಳಾ ಸಂಘಟನೆಗಳ ಸಂಯುಕ್ತ ಹೋರಾಟ ಸಮಿತಿ ಕಾರ್ಯಕರ್ತರು ವಾಹನ ತಡೆದು ಧರಣಿ ನಡೆಸಿದರು. ಚಿತ್ರದುರ್ಗ ತಾಲ್ಲೂಕಿನ ಜಿ.ಆರ್. ಹಳ್ಳಿ ಬಳಿಯ ಸೊಲ್ಲಾಪುರ–ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಚಿಕ್ಕಬ್ಬಿಗೆರೆ ನಾಗರಾಜ್ ಹಾಗೂ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್ ನೇತೃತ್ವದ ರೈತರು ತಡೆದರು.

ADVERTISEMENT

ಮಧ್ಯಾಹ್ನ 12ಕ್ಕೆ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಜಮಾಯಿಸಿದ ಪ್ರತಿಭಟನಕಾರರು ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು. ಕೃಷಿ ಸಂಬಂಧಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿದರು. ಇಲ್ಲವಾದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಅರ್ಧ ಗಂಟೆಗೂ ಹೆಚ್ಚು ಹೊತ್ತು ಹೆದ್ದಾರಿ ತಡೆದಿದ್ದರಿಂದ ಕಿ.ಮೀ ದೂರ ವಾಹನ ಸಾಲುಗಟ್ಟಿ ನಿಂತಿದ್ದವು.

ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜೆ. ಯಾದವರೆಡ್ಡಿ, ‘ಜ.26ರಂದು ರೈತರ ಹೆಸರಿನಲ್ಲಿ ಕೆಂಪುಕೋಟೆಗೆ ನುಗ್ಗಿ ದಾಂದಲೆ ನಡೆಸಿದವರನ್ನು ಬಂಧಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಬದಲಿಗೆ ರೈತರ ಹೋರಾಟವನ್ನು ದಮನಿಸಲು ಪ್ರಯತ್ನಿಸುತ್ತಿದೆ. ಧರಣಿ ನಡೆಸುತ್ತಿರುವ ಹೆದ್ದಾರಿಯಲ್ಲಿ ಮುಳ್ಳಿನ ಬೇಲಿ ನಿರ್ಮಿಸಿ ರಣರಂಗ ಸೃಷ್ಟಿಸಲಾಗಿದೆ’ ಎಂದು ಕಿಡಿಕಾರಿದರು.

‘ರೈತರ ಹೋರಾಟ ನಿರಂತರವಾಗಿ ನಡೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದಾರೆ. ದೇಶದ ಇತರರೊಂದಿಗೆ ಮಾತನಾಡುವ ಪ್ರಧಾನಿಗೆ ರೈತರೊಂದಿಗೆ ಚರ್ಚಿಸಲು ಸಮಯ ಹೊಂದಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರೈತರನ್ನು ಕೂಡಲೇ ಮಾತುಕತೆಗೆ ಆಹ್ವಾನಿಸಿ ಕಾಯ್ದೆಗಳನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ಬಸ್ತಿಹಳ್ಳಿ ಸುರೇಶಬಾಬು, ಜಿಲ್ಲಾ ಕಾರ್ಯದರ್ಶಿ ಹೊರಕೇರಪ್ಪ, ಎಸ್‌ಯುಸಿಐ ಮುಖಂಡ ರವಿಕುಮಾರ್‌, ಕಾರ್ಮಿಕ ಮುಖಂಡ ಸಿ.ಕೆ. ಗೌಸ್‍ಪೀರ್ ಇದ್ದರು.

***

ದಾರಿಯಲ್ಲಿ ಬಿದ್ದ ಮುಳ್ಳು ಎತ್ತಿ ಬದಿಗೆ ಹಾಕುವುದು ರೈತರ ಸಂಸ್ಕೃತಿ. ರೈತರ ಹೋರಾಟ ದಮನಿಸಲು ರಸ್ತೆಗೆ ಮುಳ್ಳಿನ ಬೇಲಿ ಹಾಕಿಸುವುದು ಪ್ರಧಾನಿ ಮನಸ್ಥಿತಿ.

– ನುಲೇನೂರು ಎಂ. ಶಂಕ್ರಪ್ಪ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ

***

ರೈತರ ಹೋರಾಟಕ್ಕೆ ಸ್ಪಂದಿಸದಿದ್ದರೆ ದೇಶದ ಜೈಲುಗಳು ಭರ್ತಿಯಾಗುತ್ತವೆ. ಪ್ರತಿಯೊಬ್ಬರು ಅನ್ನ ತಿನ್ನುತ್ತಾರೆಯೇ ಹೊರತು ಮಣ್ಣಲ್ಲ. ಈ ಅರಿವು ಸರ್ಕಾರಕ್ಕೆ ಇರಬೇಕು.

–ಸುರೇಶ್‍ಬಾಬು, ಕಾರ್ಮಿಕ ಸಂಘಟನೆ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.