ಹೊಳಲ್ಕೆರೆ: ‘ನಮ್ಮ ಗ್ರಾಮದ ಅಜ್ಜಯ್ಯ ಎಂಬುವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪೊಲೀಸರೇ ಕಾರಣ’ ಎಂದು ಆರೋಪಿಸಿ ತಾಲ್ಲೂಕಿನ ಗಿಲಿಕೇನಹಳ್ಳಿ ಗ್ರಾಮಸ್ಥರು ಸೋಮವಾರ ಪಟ್ಟಣದ ಪೊಲೀಸ್ ಠಾಣೆ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸಿದರು.
ಹತ್ತು ದಿನಗಳ ಹಿಂದೆ ಗಿಲಿಕೇನಹಳ್ಳಿ ಗ್ರಾಮದ ಅಜ್ಜಯ್ಯ ಎಂಬುವರ ಮಗಳು ಗುಂಡೇರಿ ಕಾವಲು ಗ್ರಾಮದ ಯುವಕನ ಜತೆ ಹೋಗಿ ಅಂತರ್ಜಾತಿ ವಿವಾಹ ಆಗಿದ್ದರು. ಇದರಿಂದ ಮನನೊಂದ ಅಜ್ಜಯ್ಯ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದರು. ಹುಡುಗಿಗೆ 18 ವರ್ಷ ತುಂಬಿಲ್ಲ, ಆದ್ದರಿಂದ ಹುಡುಗನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿ ಎಂದು ಕೇಳಿದ್ದಾರೆ. ಆದರೆ, ಪೊಲೀಸರು ಒಪ್ಪಿಲ್ಲ. ನಿತ್ಯವೂ ದೂರು ತೆಗೆದುಕೊಳ್ಳಿ ಎಂದು ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದ ಅಜ್ಜಯ್ಯ ಭಾನುವಾರ ಸಂಜೆ ಠಾಣೆಯ ಮುಂದೆಯೇ ವಿಷ ಸೇವಿಸಿದ್ದಾರೆ. ಚಿತ್ರದುರ್ಗದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಇದರಿಂದ ಆಕ್ರೋಶಗೊಂಡ ಗಿಲಿಕೇನಹಳ್ಳಿ ಗ್ರಾಮದ ನೂರಾರು ಜನ ಶವವನ್ನು ಅಂಬುಲೆನ್ಸ್‌ನಲ್ಲಿ ಇಟ್ಟು ಪೊಲೀಸ್ ಠಾಣೆಗೆ ತರಲು ಮುಂದಾಗಿದ್ದಾರೆ. ಪೊಲೀಸರು ಗಿಲಿಕೇನಹಳ್ಳಿ ಗೇಟ್‌ನಲ್ಲೇ ಆಂಬುಲೆನ್ಸ್ ತಡೆದಿದ್ದರಿಂದ ಕೋಪಗೊಂಡ ಜನ ರಸ್ತೆಯಲ್ಲೇ ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ರಾಷ್ಟ್ರೀಯ ಹೆದ್ದಾರಿ–13ರಲ್ಲಿ ಕಿ.ಮೀ. ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ನಂತರ ಪಟ್ಟಣದ ಪೊಲೀಸ್ ಠಾಣೆ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸಲಾಯಿತು.
ಪೊಲೀಸ್ ಠಾಣೆಯ ಮುಂದೆ ಗ್ರಾಮಸ್ಥರಿಗೂ ಪೊಲೀಸರಿಗೂ ವಾಗ್ವಾದ ನಡೆದಾಗಿ ರೊಚ್ಚಿಗೆದ್ದ ಜನ ಶವವನ್ನು ಮುಖ್ಯವೃತ್ತಕ್ಕೆ ತಂದು ರಸ್ತೆ ತಡೆ ನಡೆಸಿ ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಟ್ರಾಫಿಕ್ ಜಾಮ್ ಆಗುತ್ತಿದ್ದಂತೆ ಎಚ್ಚರಗೊಂಡ ಪೊಲೀಸರು ಲಾಠಿ ಚಾರ್ಜ್ ಮಾಡಿ ಜನರನ್ನು ಚದುರಿಸಿ ಕೆಳಗಿದ್ದ ಶವವನ್ನು ಅಂಬುಲೆನ್ಸ್‌ಗೆ ಇಟ್ಟು ಠಾಣೆಯ ಮುಂದೆ ತಂದರು. ಅಲ್ಲಿಗೂ ಜಮಾಯಿಸಿದ ಜನ ಪೊಲೀಸರ ವಿರುದ್ಧ ಘೋಷಣೆ ಕೂಗಿದರು.
‘ಪೊಲೀಸರು ಹತ್ತು ದಿನಗಳಾದರೂ ದೂರು ದಾಖಲಿಸದೆ ಇರುವುದರಿಂದ ಮನನೊಂದು ಅಜ್ಜಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿಗೆ ಪೊಲೀಸರೇ ನೇರ ಹೊಣೆ. ಅಜ್ಜಯ್ಯ ಅವರಿಗೆ 18 ಲಕ್ಷ ಸಾಲ ಇದೆ. ಅದನ್ನು ತೀರಿಸುವವರು ಯಾರು? ನಿಮ್ಮ ಮನೆಯಲ್ಲಿ ಇಂತಹ ಘಟನೆ ನಡೆದಿದ್ದರೆ ಸುಮ್ಮನಿರುತ್ತಿದ್ದಿರೇ? ಪೊಲೀಸರು ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ. ರೈತರು, ಬಡವರು ಪೊಲೀಸ್ ಠಾಣೆಗೆ ಹೋದರೆ ಕೀಳಾಗಿ ಕಾಣುತ್ತಾರೆ’ ಎಂದು ಆಕ್ರೋಶ ಹೊರಹಾಕಿದರು.
ಪೋಕ್ಸೊ ದೂರು ದಾಖಲಿಸಲು ಗೊಂದಲ:
ಜುಲೈ 12ರಂದು ಹುಡುಗ ಹುಡುಗಿ ಮದುವೆಯಾಗಿದ್ದಾರೆ. ಜುಲೈ 13ರಂದು ಹುಡುಗಿಯ ತಂದೆ ಪೊಲೀಸ್ ಠಾಣೆಗೆ ಮಗಳು ಕಾಣೆಯಾಗಿರುವುದಾಗಿ ದೂರು ನೀಡಿದ್ದಾರೆ. ಜುಲೈ 15ರಂದು ಮದುವೆಯಾದ ದಂಪತಿ ಬಂದು ‘ನಾವು ಮೇಜರ್ ಆಗಿದ್ದು ಪರಸ್ಪರ ಒಪ್ಪಿಗೆಯಿಂದಲೇ ಮದುವೆ ಆಗಿದ್ದೇವೆ’ ಎಂದು ತಿಳಿಸಿದ್ದಾರೆ. ಹುಡುಗಿಯ ತಂದೆ ಅಜ್ಜಯ್ಯ ನಂತರ ಬಂದು ಪೋಕ್ಸೊ ದೂರು ದಾಖಲಿಸುವಂತೆ ಒತ್ತಾಯಿಸಿದರು. ಎಸ್ಎಸ್ಎಲ್‌ಸಿ ಅಂಕಪಟ್ಟಿ ಹಾಗೂ ಶಾಲಾ ದಾಖಲಾತಿ ಪರಿಶೀಲಿಸಿದ ಪೊಲೀಸರು ಹುಡುಗಿಯ ವಯಸ್ಸು 18 ವರ್ಷ ತುಂಬಿದೆ. ಆದ್ದರಿಂದ ಪೋಕ್ಸೊ ದೂರು ದಾಖಲಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಹುಡುಗಿಯ ತಂದೆ ಮಗಳ ಜನನ ಪ್ರಮಾಣ ಪತ್ರ ತಂದು ತೋರಿಸಿದ್ದು ಅದರಲ್ಲಿ ಹುಡಿಗಿಗೆ 17 ವರ್ಷ 8 ತಿಂಗಳು ಆಗಿದೆ. ಆದರೂ ಪೋಕ್ಸೊ ಪ್ರಕರಣ ದಾಖಲಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.