ADVERTISEMENT

ಕ್ಯಾಸಾಪುರ ಖಾಸಗಿ ಪ್ರೌಢಶಾಲೆಗೆ ಬೀಗ ಹಾಕಿ ಪ್ರತಿಭಟನೆ

ಮೂಲ ಸೌಲಭ್ಯಗಳ ಕೊರತೆ; ಫಲಿತಾಂಶ ಕಳಪೆ– ಗ್ರಾಮಸ್ಥರ ಆರೋಪ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 14:46 IST
Last Updated 13 ಜೂನ್ 2025, 14:46 IST
ಕ್ಯಾಸಾಪುರ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು
ಕ್ಯಾಸಾಪುರ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು   

ಸಿರಿಗೆರೆ: ಶಿಕ್ಷಕರ ಕೊರತೆ, ಫಲಿತಾಂಶದಲ್ಲಿ ಕಳಪೆ ಸಾಧನೆ, ಸೌಲಭ್ಯಗಳ ಕೊರತೆ ಹೀಗೆ ಹಲವು ಸಮಸ್ಯೆಗಳಿದ್ದು, ಇವುಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿ ಕ್ಯಾಸಾಪುರ ಗ್ರಾಮಸ್ಥರು ಗುರುವಾರ ತಮ್ಮೂರಿನ ಖಾಸಗಿ ಪ್ರೌಢಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಶಾಲೆಯ 8, 9 ಮತ್ತು ಹತ್ತನೇ ತರಗತಿಯಲ್ಲಿ 65ಕ್ಕಿಂತ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯಲ್ಲಿ ಕೇವಲ ಮೂವರು ಶಿಕ್ಷಕರು ಮಾತ್ರ ಇದ್ದು, ಮುಖ್ಯೋಪಾಧ್ಯಾಯರೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರಿ ಅನುದಾನ ಪಡೆದು 1981ರಿಂದ ಈ ಶಾಲೆ ನಡೆಯುತ್ತಿದೆ. ಕಾಲ ಕಾಲಕ್ಕೆ ಅಗತ್ಯವಾದ ಶಿಕ್ಷಕರ ನೇಮಕಾತಿಯನ್ನು ಮಾಡಿಕೊಳ್ಳಲು ಶಾಲಾ ಆಡಳಿತ ಮಂಡಳಿ ಸಂಪೂರ್ಣ ವಿಫಲವಾಗಿದೆ’ ಎಂದು ದೂರಿದರು.

ADVERTISEMENT

ಗ್ರಾಮದ ಹೊರವಲಯದಲ್ಲಿ ಶಾಲೆ ನಿರ್ಮಾಣಗೊಂಡಿದ್ದರೂ ಇದುವರೆಗೂ ಕಾಂಪೌಂಡ್‌ ಕಟ್ಟಿಲ್ಲ. ಬಯಲಿನಲ್ಲಿ ನಿರ್ಮಿಸಿರುವ ಶೌಚಾಲಯಗಳು ವಿದ್ಯಾರ್ಥಿಗಳಿಗೆ ಬಳಸಲು ಯೋಗ್ಯವಾಗಿಲ್ಲ. ಆಟದ ಮೈದಾನದಲ್ಲಿ ಬೆಳೆದಿರುವ ಹುಲ್ಲು, ಗಿಡಗಂಟಿಗಳಿಂದ ಮಕ್ಕಳು ಅಲ್ಲಿ ಓಡಾಡಲು ಹೆದರುತ್ತಾರೆ. ಅಂತಹ ಕಡೆಯೇ ನಿರ್ಮಾಣಗೊಂಡಿರುವ ಶೌಚಾಲಯದ ಸ್ಥಿತಿ ಚಿಂತಾಜನಕವಾಗಿದೆ. ಹೀಗಿದ್ದರೂ ಆಡಳಿತ ಮಂಡಳಿ ಇತ್ತ ಕಡೆ ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ಆವರಣದಲ್ಲಿ ದನದ ಕೊಟ್ಟಿಗೆ: ಶಾಲೆಗೆ ಕಾಂಪೌಂಡ್‌ ಇಲ್ಲದೇ ಇರುವುದರಿಂದ ಗ್ರಾಮದ ಕೆಲವರು ತಮ್ಮ ದನಕರುಗಳನ್ನು ತಂದು ಶಾಲಾ ಆವರಣದಲ್ಲಿಯೇ ಮೇಯಿಸಲು ಬಿಡುತ್ತಾರೆ. ಮತ್ತೆ ಕೆಲವರು ಶೌಚಾಲಯದ ಪಕ್ಕದಲ್ಲಿಯೇ ದನಕರುಗಳಿಗೆ ಕೊಟ್ಟಿಗೆ ರೀತಿಯಲ್ಲಿ ಮಾಡಿಕೊಂಡಿದ್ದಾರೆ.

10 ವರ್ಷಗಳಿಂದ ನೇಮಕಾತಿ ಇಲ್ಲ: ಶಾಲೆಗೆ ಬೇಕಾದ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಆಡಳಿತ ಮಂಡಳಿ ನಿರಾಸಕ್ತಿ ತೋರಿದೆ. ಮೂವರು ಶಿಕ್ಷಕರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿದ್ದರೂ ಅವರಿಗೆ ಸರಿಯಾಗಿ ವೇತನ ನೀಡದ್ದರಿಂದ ಅವರು ತಮ್ಮ ಕೆಲಸದಲ್ಲಿ ಆಸಕ್ತಿ ತೋರುತ್ತಿಲ್ಲ ಎಂಬುದು ಗ್ರಾಮಸ್ಥರ ದೂರು.

ಇಷ್ಟೆಲ್ಲಾ ಸಮಸ್ಯೆಗಳ ಆಗರವಾಗಿರುವ ಶಾಲೆಯ ಪರಿಸ್ಥಿತಿಯನ್ನು ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರಿಪಡಿಸಲು ಮುಂದಾಗಿಲ್ಲ. ಗ್ರಾಮಸ್ಥರು ಪ್ರತಿಭಟನೆ ಇಳಿದಾಕ್ಷಣ ಧಾವಿಸಿ ಬಂದು ಹತ್ತು ದಿನದ ಒಳಗಾಗಿ ಸಮಸ್ಯೆ ಪರಿಹರಿಸುವುದಾಗಿ ಹೇಳುತ್ತಾರೆ. ಹತ್ತು ದಿನ ಕಾದು ನೋಡುತ್ತೇವೆ. ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಶಾಲೆಯ ಆಟದ ಮೈದಾನದಲ್ಲಿ ಬೆಳೆದಿರುವ ಹುಲ್ಲು ಗಿಡಗಂಟಿಗಳು
ಶಾಲಾ ಆವರಣದಲ್ಲಿ ದನಕರು ಕಟ್ಟಲು ಗ್ರಾಮದ ಮಾಡಿಕೊಂಡಿರುವುದು
ದುಃಸ್ಥಿತಿಯಲ್ಲಿರುವ ಶಾಲಾ ಶೌಚಾಲಯ
ಶಾಲೆಯಲ್ಲಿ ಶಿಕ್ಷಕರ ನಿವೃತ್ತಿಯಿಂದಾದ ಖಾಲಿ ಇರುವ ಹುದ್ದೆಗಳನ್ನು ಆಡಳಿತ ಮಂಡಳಿ ಭರ್ತಿ ಮಾಡಿಕೊಂಡಿಲ್ಲ. ಆಡಳಿತ ಮಂಡಳಿಯ ಜೊತೆಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಯತ್ನಿಸುವೆ
ನಾಗಭೂಷಣ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರದುರ್ಗ

ವಸತಿಯುತ ಶಾಲೆಗೆ ಹಾಸ್ಟೆಲ್‌ ಇಲ್ಲ

ಇದು ಹೆಸರಿಗೆ ಮಾತ್ರವೇ ವಸತಿಯುತ ಶಾಲೆ. ಈ ಶಾಲೆಗೆ ಹೊಂದಿಕೊಂಡಂತೆ ಹಾಸ್ಟೆಲ್‌ ಇಲ್ಲದಿದ್ದರೂ ಶಾಲಾ ನಾಮಫಲಕದಲ್ಲಿ ಮಾತ್ರ ವಸತಿಯುತ ಶಾಲೆ ಎಂದು ರಾರಾಜಿಸುತ್ತದೆ. ಇರುವ ಶಿಕ್ಷಕರೇ ಪಾಳಿಯ ಮೇಲೆ ಕೆಲಸ ಹಂಚಿಕೊಂಡು ಮಧ್ಯಾಹ್ನದ ಊಟ ನೀಡುವ ಕೆಲಸ ಮುಂದುವರಿಸಿರುವುದು ಸಮಾಧಾನಕರ ಸಂಗತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.