ADVERTISEMENT

ತಿಂಗಳಾಂತ್ಯದೊಳಗೆ ದುರ್ಗೋತ್ಸವದ ದಿನಾಂಕ ಘೋಷಿಸಿ: ಕರುನಾಡ ವಿಜಯಸೇನೆ ಜಿಲ್ಲಾ ಘಟಕ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 14:28 IST
Last Updated 20 ಜೂನ್ 2025, 14:28 IST
ಚಿತ್ರದುರ್ಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಕರುನಾಡ ವಿಜಯಸೇನೆ ಜಿಲ್ಲಾ ಘಟಕ
ಚಿತ್ರದುರ್ಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಕರುನಾಡ ವಿಜಯಸೇನೆ ಜಿಲ್ಲಾ ಘಟಕ   

ಚಿತ್ರದುರ್ಗ: ಜೂನ್‌ ತಿಂಗಳ ಅಂತ್ಯದೊಳಗೆ ಐತಿಹಾಸಿಕ ಚಿತ್ರದುರ್ಗದಲ್ಲಿ ದುರ್ಗೋತ್ಸವ ಆಚರಣೆಗೆ ದಿನಾಂಕ ಘೋಷಿಸಬೇಕೆಂದು ಆಗ್ರಹಿಸಿ ಕರುನಾಡ ವಿಜಯಸೇನೆ ಜಿಲ್ಲಾ ಘಟಕದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಮದಕರಿ ನಾಯಕ, ಒನಕೆ ಓಬವ್ವ ವೃತ್ತದಲ್ಲಿ ದುರ್ಗೋತ್ಸವ ಆಚರಣೆ ಸಂಬಂಧ ಜಿಲ್ಲೆಯ ಸಂಸದರು, ಸಚಿವರು, ಶಾಸಕರನ್ನು ಪ್ರಶ್ನಿಸುವ ಭಿತ್ತಿಪತ್ರ ಅಂಟಿಸಿದ ಪ್ರತಿಭಟನಕಾರರು, ಸರ್ಕಾರ ಜಿಲ್ಲೆಯನ್ನು ಎಲ್ಲ ವಿಚಾರದಲ್ಲಿ ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಎಲ್ಲ ಜಿಲ್ಲೆಯಲ್ಲೂ ವಿವಿಧ ರೀತಿಯ ಉತ್ಸವ ಆಚರಿಸಲಾಗುತ್ತಿದೆ. ಆದರೆ, ಚಿತ್ರದುರ್ಗದಲ್ಲಿ ಮಾತ್ರ ದುರ್ಗೋತ್ಸವ ಆಚರಣೆ ಮಾಡಲು ಮುಂದಾಗುತ್ತಿಲ್ಲ. ಮೈಸೂರು ದಸರಾ, ಹಂಪಿ ಉತ್ಸವ, ಕೊಡಗು, ಕಿತ್ತೂರು ಉತ್ಸವದಂತೆ ದುರ್ಗೋತ್ಸವ ಆಚರಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಐತಿಹಾಸಿಕ ಹಿನ್ನೆಲೆಯ ಚಿತ್ರದುರ್ಗವನ್ನು ಸರ್ಕಾರ, ಜಿಲ್ಲಾಡಳಿತ ಮತ್ತು ಜಿಲ್ಲೆಯ ಶಾಸಕರು ಕಡೆಗಣಿಸುತ್ತಿದ್ದಾರೆ. ವರ್ಷಕ್ಕೊಮ್ಮೆ ಉತ್ಸವ ಮಾಡಿದರೆ ಪ್ರವಾಸಿತಾಣಗಳು ಅಭಿವೃದ್ಧಿ ಹೊಂದಲು ಮತ್ತು ಪ್ರವಾಸಿಗರು ಜಿಲ್ಲೆಯ ಐತಿಹಾಸಿಕ ಸ್ಥಳ ವೀಕ್ಷಣೆ ಅವಕಾಶ ಕಲ್ಪಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಶೀಘ್ರ ಕ್ರಮವಹಿಸಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಶಿವಕುಮಾರ್‌, ಮಹಿಳಾ ಘಟಕದ ಅಧ್ಯಕ್ಷೆ ವೀಣಾಗೌರಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಿನಾಥ್‌, ಜಿಲ್ಲಾ ಉಪಾಧ್ಯಕ್ಷ ಮುಜಾಯಿದ್‌, ಜಿಲ್ಲಾ ಕಾರ್ಯದರ್ಶಿಗಳಾದ ಅಣ್ಣಪ್ಪ, ಜಗದೀಶ್‌, ನಗರ ಘಟಕದ ಅಧ್ಯಕ್ಷ ಅವಿನಾಶ್‌, ಕಾರ್ಮಿಕ ಘಟಕದ ಅಧ್ಯಕ್ಷ ಹರೀಶ್‌ ಕುಮಾರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.