ADVERTISEMENT

ಕೋವಿಡ್ ಕೇಂದ್ರ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

ಆದರ್ಶ ಶಾಲೆಯಲ್ಲಿ ಸ್ವಚ್ಛತೆ ಮರೀಚಿಕೆ, ತಪ್ಪಿಸಿಕೊಂಡು ಹೊರ ಹೋಗುವ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2021, 3:33 IST
Last Updated 2 ಜೂನ್ 2021, 3:33 IST
ಮೊಳಕಾಲ್ಮುರಿನ ಆದರ್ಶ ಕೋವಿಡ್ ಕೇಂದ್ರದಲ್ಲಿ ಮಂಗಳವಾರ ಕೊರೊನಾ ಸೋಂಕಿತರು ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದರು.
ಮೊಳಕಾಲ್ಮುರಿನ ಆದರ್ಶ ಕೋವಿಡ್ ಕೇಂದ್ರದಲ್ಲಿ ಮಂಗಳವಾರ ಕೊರೊನಾ ಸೋಂಕಿತರು ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದರು.   

ಮೊಳಕಾಲ್ಮುರು: ಪಟ್ಟಣದ ಹಾನಗಲ್ ರಸ್ತೆಯಲ್ಲಿರುವ ಆದರ್ಶ ಶಾಲೆ ಕೋವಿಡ್ ಕೇಂದ್ರದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ ಎಂದು ಆರೋಪಿಸಿ ಮಂಗಳವಾರ ಬೆಳಿಗ್ಗೆ ಸೋಂಕಿತರು ತೀವ್ರ ಪ್ರತಿಭಟನೆ ನಡೆಸಿದರು.

‘ಕೇಂದ್ರದಲ್ಲಿ ಸಮಯಕ್ಕೆ ಸರಿಯಾಗಿ ತಿಂಡಿ, ಊಟ ನೀಡುತ್ತಿಲ್ಲ, ಗುಣಮಟ್ಟವೂ ಸರಿ ಇರುವುದಿಲ್ಲ. ತಿಂಡಿ, ಊಟ ಕೊಡಲಾಗುತ್ತಿದೆ ಎಂದು ತಿಳಿಸುವುದಿಲ್ಲ. ಪರಿಣಾಮ ಮಲಗಿಕೊಂಡವರಿಗೆ ಮಾಹಿತಿ ಇಲ್ಲದೇ ಕೆಲವು ಬಾರಿ ಊಟ ಸಿಗುವುದಿಲ್ಲ. ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಊಟ ನೀಡದ ಕಾರಣ ಕಡಿಮೆ ಬಂದು ತೊಂದರೆಯಾಗುತ್ತಿದೆ’ ಎಂದು ನೇರ್ಲಹಳ್ಳಿಯ ಪ್ರಸನ್ನಕುಮಾರ್ ದೂರಿದರು.

‘ಔಷಧವನ್ನು ಹೊರಗಡೆ ಬರೆದುಕೊಡುತ್ತಾರೆ. ಇದನ್ನು ತಂದುಕೊಡಲು ನಮಗೆ ದ್ವಿಚಕ್ರ ವಾಹನವಿಲ್ಲ. ಸ್ನಾನಗೃಹ, ಶೌಚಾಲಯ ಸ್ವಚ್ಛತೆ ಮಾಡುತ್ತಿಲ್ಲ. ಸ್ಯಾನಿಟೈಜಿಂಗ್ ಮಾಡದ ಕಾರಣ ಸೋಂಕು ಇಲ್ಲಿಯೇ ಹೆಚ್ಚು ಹಬ್ಬುವ ಆತಂಕ ಎದುರಾಗಿದೆ. ಐದು ದಿನಗಳಿಗೆ ಮಾತ್ರ ಔಷಧ ನೀಡಿ 10 ದಿನ ಇಟ್ಟುಕೊಳ್ಳುತ್ತಾರೆ. ರೋಗಿ ಡಿಸ್ಚಾರ್ಜ್ ಆದ ನಂತರ ಹಾಸಿಗೆ ಬದಲಾವಣೆ ಮಾಡದೇ ಹೊಸ ರೋಗಿಗಳಿಗೆ ಅದನ್ನೇ ನೀಡಲಾಗುತ್ತಿದೆ’ ಎಂದರು.

ADVERTISEMENT

‘ಅವ್ಯವಸ್ಥೆ ಬಗ್ಗೆ ತಹಶೀಲ್ದಾರ್ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ ಅವ್ಯವಸ್ಥೆ ಮುಂದುವರಿದಿದೆ. ಇದು ಹೀಗೆ ನಡೆದಲ್ಲಿ ನಾವು ಇಲ್ಲಿಂದ ತಪ್ಪಿಸಿಕೊಂಡು ಹೋಗುತ್ತೇವೆ. ಹೆಚ್ಚೆಂದರೆ ಪೊಲೀಸರು ಬಂಧಿಸುತ್ತಾರೆ. ಅಷ್ಟೇ ತಾನೆ?’ ಎಂದು ಸೋಂಕಿತರು ಅಳಲು ತೋಡಿಕೊಂಡರು.

ಅಹವಾಲು ಆಲಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಲಕ್ಷ್ಮಣ ಕರೆ ಮಾಡಿ ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ತಾಕೀತು ಮಾಡಿದ ಕಾರಣ ಅಧಿಕಾರಿಗಳು ಸ್ಥಳಕ್ಕೆ ಬಂದರು.

ತಹಶೀಲ್ದಾರ್ ಸುರೇಶ್ ಕುಮಾರ್ ಮಾತನಾಡಿ, ‘ಕೇಂದ್ರಕ್ಕೆ ನೀರು ಸರಬರಾಜು ಮಾಡುವ ಮೋಟರ್ ಹಾಳಾಗಿದ್ದರಿಂದ ಸರಬರಾಜಿನಲ್ಲಿ ತೊಂದರೆಯಾಗಿತ್ತು. ಸರಿಪಡಿಸಲಾಗಿದ್ದು, ಸಮಸ್ಯೆ ಪರಿಹಾರವಾಗಲಿದೆ’ ಎಂದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಧಾ, ‘ಸರದಿ ಪ್ರಕಾರ ಸಿಬ್ಬಂದಿ ಕೆಲಸ ಮಾಡುತ್ತಾರೆ. ಇಂದು ಹೊಸ ಸರದಿ ಬಂದಿರುವ ಕಾರಣ ಕೆಲವು ಮಾತ್ರೆ ನೀಡುವಿಕೆಯಲ್ಲಿ ವ್ಯತ್ಯಯವಾಗಿದೆ. ಕೂಡಲೇ ಸರಿಪಡಿಸಲಾಗುವುದು. ರೋಗಿಗಳಿಗೆ ಸಕಾಲಕ್ಕೆ ಸಿಬ್ಬಂದಿ ಲಭ್ಯವಾಗುವಂತೆ ಸೂಚಿಸಲಾಗುವುದು’ ಎಂದರು.

‘ಡಿಸ್ಚಾರ್ಜ್‌ ವೇಳೆ ಪರೀಕ್ಷೆ ಮಾಡುತ್ತಿಲ್ಲ’

ಸೋಂಕಿತರು ಕ್ಯಾರಂಟೈನ್ ಅವಧಿ ಮುಗಿಸಿ ಮನೆಗೆ ಹೋಗುವಾಗ ನೆಗೆಟಿವ್ ಪರೀಕ್ಷೆ ಮಾಡುತ್ತಿಲ್ಲ. ಮನೆಗೆ ಹೋಗಿ 5ನೇ ದಿನಕ್ಕೆ ಮಾಡಿಸಿಕೊಳ್ಳಿ ಎಂದು ಹೇಳುತ್ತಾರೆ. ಮನೆಗೆ ಹೋಗಿ ಮನೆಯವರಿಗೆ ಸೋಂಕು ಹಬ್ಬಿಸುತ್ತೇವೋ ಎಂಬ ಭೀತಿ ಉಂಟು ಮಾಡಿದೆ ಎಂದು ಕೇಂದ್ರದಲ್ಲಿರುವ ಸೋಂಕಿತರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.