ADVERTISEMENT

ಪಿಟಿಸಿಎಲ್ ಕಾಯ್ದೆ ತಿದ್ದುಪಡಿಗೆ ಆಗ್ರಹ

ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ.ಎಂ. ವೆಂಕಟಸ್ವಾಮಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 11:46 IST
Last Updated 9 ಫೆಬ್ರುವರಿ 2020, 11:46 IST
ಡಾ.ಎಂ.ವೆಂಕಟಸ್ವಾಮಿ
ಡಾ.ಎಂ.ವೆಂಕಟಸ್ವಾಮಿ   

ಚಿತ್ರದುರ್ಗ: ‘ಪಿಟಿಸಿಎಲ್ ಕಾಯ್ದೆ ಕುರಿತು ದಲಿತ ಸಂಘಟನೆಗಳ ಒಕ್ಕೂಟವೂ ತಿದ್ದುಪಡಿ ಮಸೂದೆಯ ಕರಡನ್ನು ಸಿದ್ಧಗೊಳಿಸಿದ್ದು, ಅದನ್ನೇ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಫೆ. 10ರಂದು ಮನವಿ ಸಲ್ಲಿಸುತ್ತಿದ್ದೇವೆ’ ಎಂದು ಒಕ್ಕೂಟದ ಅಧ್ಯಕ್ಷ ಡಾ.ಎಂ. ವೆಂಕಟಸ್ವಾಮಿ ತಿಳಿಸಿದರು.

‘ರಾಜ್ಯದಲ್ಲಿ ಜಾರಿಯಲ್ಲಿರುವ ‘ಭೂಪರಭಾರ ನಿಷೇಧ ಕಾಯ್ದೆ’ಯಲ್ಲಿನ ಲೋಪಗಳಿಂದ ಇಡೀ ದಲಿತ ಸಮುದಾಯಗಳ ಜನತೆ ಜಮೀನುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ದಲಿತರಿಗೆ ಅನ್ಯಾಯವಾಗುತ್ತಿದ್ದು, ಈ ಕುರಿತು ಸಾಕಷ್ಟು ಹೋರಾಟ ಕೂಡ ಮಾಡಿದ್ದೇವೆ. ಆದ್ದರಿಂದ ಪಿಟಿಸಿಎಲ್ ಕಾಯ್ದೆಗೆ ಸಮಗ್ರ ತಿದ್ದುಪಡಿ ತರಬೇಕು ಎಂಬುದು ನಮ್ಮ ಒತ್ತಾಯವಾಗಿದೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ರಾಜ್ಯದ ಮುಖ್ಯಮಂತ್ರಿ, ಕಂದಾಯ ಮತ್ತು ಸಮಾಜ ಕಲ್ಯಾಣ ಸಚಿವರು ವಿಧಾನಮಂಡಲ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಬೇಕು. ಇಲ್ಲದಿದ್ದರೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಚಿವರು ಕಂಡಲೆಲ್ಲಾ ಘೇರಾವ್‌ ಹಾಕುತ್ತೇವೆ’ ಎಂದು ಎಚ್ಚರಿಸಿದರು.

ADVERTISEMENT

ಗಣಮೇಳಕ್ಕೆ ಒಕ್ಕೂಟದ ಬೆಂಬಲ: ‘ಬುದ್ಧ, ಬಸವ, ಅಂಬೇಡ್ಕರ್ ಅವರ ಆಶಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಫೆ. 16ರಂದು ನಡೆಯುತ್ತಿರುವ ಅಸಂಖ್ಯ ಪ್ರಮಥ ಗಣಮೇಳಕ್ಕೆ ದಲಿತ ಸಂಘಟನೆಗಳ ಒಕ್ಕೂಟ ಬೆಂಬಲಿಸುತ್ತಿದೆ’ ಎಂದು ತಿಳಿಸಿದರು.

‘ಇದು ರಾಷ್ಟ್ರಮಟ್ಟದ ಕಾರ್ಯಕ್ರಮವಾಗಿದ್ದು, ಅನೇಕ ಧಾರ್ಮಿಕ ಮುಖಂಡರು, ಸಂತರು, ಸರ್ವ ಜನಾಂಗದ ಸ್ವಾಮೀಜಿಗಳು, ಜನನಾಯಕರು, ಚಿಂತಕರು ಹಾಗೂ ಕಲಾವಿದರು ಭಾಗವಹಿಸುತ್ತಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 30ಸಾವಿರ ಮಂದಿ ದಲಿತ ಸಮುದಾಯದವರು ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

‘ಬಹುಜನ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಆರ್‌.ಎಂ.ಎನ್. ರಮೇಶ್, ದಲಿತ ಸಮುದಾಯ ಮೊದಲಿನಿಂದಲೂ ತುಳಿತಕ್ಕೆ ಒಳಗಾಗಿದೆ. ಆದ್ದರಿಂದ ಸಮುದಾಯಕ್ಕೆ ನ್ಯಾಯ ಸಿಗಬೇಕು. ದಲಿತರ ಭೂಮಿಯನ್ನು ಬೇರೆಯವರು ಕಬಳಿಸುವ ಕಾರ್ಯ ಎಂದಿಗೂ ಆಗಬಾರದು. ಅದಕ್ಕಾಗಿ ಒಕ್ಕೂಟದ ಮೂಲಕ ಹೋರಾಟ ನಡೆಸುತ್ತಿದ್ದೇವೆ’ ಎಂದರು.

‘ನಾವು ಯಾವ ಧರ್ಮವನ್ನು ವಿರೋಧಿಸುವುದಿಲ್ಲ. ಕೆಲ ಧರ್ಮಗಳಲ್ಲಿ ಇರುವಂಥ ಮೌಢ್ಯ, ಕಂದಾಚಾರ ಹೋಗಲಾಡಿಸಲು ಶ್ರಮಿಸುತ್ತಿದ್ದೇವೆ. ಅಸಮಾನತೆ ತೊಲಗಿಸಲು 12ನೇ ಶತಮಾನದ ಬಸವಾದಿ ಶರಣರಂತೆ 21ನೇ ಶತಮಾನದಲ್ಲಿ ಜಾಗೃತಿ ಮೂಡಿಸುತ್ತಿರುವ ಶಿವಮೂರ್ತಿ ಮುರುಘಾ ಶರಣರ ಕಾರ್ಯಗಳಿಗೆ ನಮ್ಮೆಲ್ಲರ ಬೆಂಬಲವೂ ಇದೆ’ ಎಂದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಎಂ. ವೆಂಕಟೇಶ್, ಸಮತಾ ಸೈನಿಕ ದಳ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಚ್. ಮಂಜುನಾಥ್, ರಿಪಬ್ಲಿಕನ್ ಪಾರ್ಟಿ ಆಫ್‌ ಇಂಡಿಯಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಆರ್. ಶ್ರೀರಾಮ್, ರಾಜ್ಯ ಸಮಿತಿ ಸದಸ್ಯ ಜಿಗಣಿ ನಾಗರಾಜ್, ಬಿಡಿಎಸ್‌ಎಸ್‌ ಉಪಾಧ್ಯಕ್ಷ ಪಿಳ್ಳರಾಜು, ಎಚ್. ಚನ್ನಿಗರಾಯ್ಯ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.