ADVERTISEMENT

ಮೊಳಕಾಲ್ಮುರು: ವಿದ್ಯಾರ್ಥಿಗಳಿಗೆ ಸಾರಿಗೆ ಸಮಸ್ಯೆ

ಕ್ರಮ ಕೈಗೊಳ್ಳದ ಸಾರಿಗೆ ಇಲಾಖೆ, ಭವಿಷ್ಯಕ್ಕೆ ಕುತ್ತು

ಕೊಂಡ್ಲಹಳ್ಳಿ ಜಯಪ್ರಕಾಶ
Published 26 ಮೇ 2025, 6:44 IST
Last Updated 26 ಮೇ 2025, 6:44 IST
ಮೊಳಕಾಲ್ಮುರು ತಾಲ್ಲೂಕಿನ ರಾಂಪುರದಿಂದ ಬಳ್ಳಾರಿಗೆ ಕಾಲೇಜುಗಳಿಗೆ ತೆರಳಲು ಬಸ್ಸು ಹತ್ತುತ್ತಿರುವ ವಿದ್ಯಾರ್ಥಿಗಳು
ಮೊಳಕಾಲ್ಮುರು ತಾಲ್ಲೂಕಿನ ರಾಂಪುರದಿಂದ ಬಳ್ಳಾರಿಗೆ ಕಾಲೇಜುಗಳಿಗೆ ತೆರಳಲು ಬಸ್ಸು ಹತ್ತುತ್ತಿರುವ ವಿದ್ಯಾರ್ಥಿಗಳು   

ಮೊಳಕಾಲ್ಮುರು: ತಾಲ್ಲೂಕಿನ ದೇವಸಮದ್ರ ಹೋಬಳಿಯಿಂದ ಬಳ್ಳಾರಿಗೆ ವಿದ್ಯಾಭಾಸಕ್ಕಾಗಿ ತೆರಳುವ ವಿದ್ಯಾರ್ಥಿಗಳಿಗೆ ಸಾರಿಗೆ ಸಂಸ್ಥೆ ಬಸ್‌ ಸೌಲಭ್ಯವಿಲ್ಲದೇ ಸಮಸ್ಯೆ ಎದುರಾಗಿದೆ.

ದೇವಸಮದ್ರ ಹಾಗೂ ಹೋಬಳಿ ವ್ಯಾಪ್ತಿಯ ರಾಂಪುರ, ಅಶೋಕ ಸಿದ್ದಾಪುರ, ನಾಗಸಮುದ್ರ, ಕಣಕುಪ್ಪೆ, ಶಿರೇಕೊಳ, ತಮ್ಮೇನಹಳ್ಳಿ, ಬಾಂಡ್ರಾವಿ, ಸಂತೇಗುಡ್ಡ ಮುಂತಾದ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ನಂತರ ವಿದ್ಯಾಭ್ಯಾಸಕ್ಕೆ ಪಕ್ಕದ ಬಳ್ಳಾರಿಗೆ ಹೋಗುತ್ತಾರೆ. ಬೆಳಿಗ್ಗೆ ಸಮರ್ಪಕವಾಗಿ ಸಾರಿಗೆ ಸಂಸ್ಥೆಯ ಬಸ್‌ ವ್ಯವಸ್ಥೆ ಇಲ್ಲದ ಪರಿಣಾಮ ಮೊದಲ ತರಗತಿಗಳನ್ನು ಕಳೆದುಕೊಳ್ಳುವುದು ಅನಿವಾರ್ಯವಾಗಿದೆ.

‘ಈ ಹೋಬಳಿಯಲ್ಲಿ ರಾಂಪುರ ಪ್ರಮುಖ ಕೇಂದ್ರ ಸ್ಥಳವಾಗಿದ್ದು, 15,000 ಜನಸಂಖ್ಯೆ ಹೊಂದಿದೆ. ಸುತ್ತಮುತ್ತಲ ಗ್ರಾಮಗಳ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಬಸ್‌ ಹತ್ತಬೇಕಿದೆ. ಇಲ್ಲಿ ಎಸ್‌ಎಸ್‌ಎಲ್‌ಸಿ ನಂತರದ ಶಿಕ್ಷಣಕ್ಕೆ ಸರ್ಕಾರಿ ಕಾಲೇಜುಗಳಿಲ್ಲ. ಪಿಯುಸಿ, ಪದವಿ, ತಾಂತ್ರಿಕ ಶಿಕ್ಷಣ, ಪದವಿ ಶಿಕ್ಷಣಕ್ಕಾಗಿ ಬಳ್ಳಾರಿಯನ್ನು ಅವಲಂಬಿಸಿದ್ದಾರೆ. ನಿತ್ಯ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಳ್ಳಾರಿಗೆ ತೆರಳುತ್ತಾರೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ತಿಪ್ಪೇಶ್‌ ಮಾಹಿತಿ ನೀಡಿದರು.

ADVERTISEMENT

‘ಪದವಿಪೂರ್ವ ಕಾಲೇಜುಗಳು ಬೆಳಿಗ್ಗೆ 8ಕ್ಕೆ, ಪದವಿ ಕಾಲೇಜುಗಳು 9 ಗಂಟೆಗೆ ಆರಂಭವಾಗುತ್ತವೆ. ರಾಂಪುರದಿಂದ ಬಳ್ಳಾರಿ ತಲುಪಲು 60ರಿಂದ 75 ನಿಮಿಷ ಬೇಕು. ಈ ಸಮಯವನ್ನು ಗಮನದಲ್ಲಿ ಇಟ್ಟುಕೊಂಡು 3-4 ಬಸ್‌ ಓಡಿಸಿದರೆ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲ ಆಗಲಿದೆ’ ಎಂದು ಅವರು ಕೋರಿದರು.

‘2 ವರ್ಷದ ಹಿಂದೆ ಕಾಲೇಜು ಸಮಯಕ್ಕೆ ಬಸ್‌ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಲಾಗಿತ್ತು. ಗ್ರಾಮದಲ್ಲಿದ್ದ ರಾಜ್ಯಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ನಂತರ ಬೈಪಾಸ್‌ ನಿರ್ಮಿಸಲಾಗಿದೆ. ಸಾರಿಗೆ ಸಂಸ್ಥೆಯ ಅನೇಕ ಬಸ್‌ಗಳು ಗ್ರಾಮದ ಒಳಗಡೆ ಬರುತ್ತಿಲ್ಲ. ಇದರಿಂದಲೂ ಸಮಸ್ಯೆ ಹೆಚ್ಚಿದೆ’ ಎಂದು ವಿದ್ಯಾರ್ಥಿಗಳು ದೂರಿದರು.

‘ಬಳ್ಳಾರಿ ಡಿಪೋದಿಂದ ಬಸ್‌ಗಳನ್ನು ಬಿಡಿಸಲಾಗಿತ್ತು. ಆದರೆ, ಬಸ್‌ಗಳು ನಷ್ಟದಲ್ಲಿ ಓಡಾಡುತ್ತವೆ ಎಂಬ ಸಬೂಬು ಹೇಳಿ ನಿಲ್ಲಿಸಲಾಯಿತು. ವಿದ್ಯಾರ್ಥಿ ಪಾಸ್‌ಗಳಿಂದ ಆದಾಯ ನಿರೀಕ್ಷೆ ಮಾಡಬಾರದು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕಾಲೇಜು ಸಮಯಕ್ಕೆ ಬಸ್‌ ವ್ಯವಸ್ಥೆ ಮಾಡಬೇಕು’ ಎಂದು ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಎಚ್.ಟಿ. ನಾಗೀರೆಡ್ಡಿ ಹೇಳಿದರು.

ರಾಂಪುರ ಮೊಳಕಾಲ್ಮುರು ತಾಲ್ಲೂಕಿನ ದೊಡ್ಡಗ್ರಾಮ ಹಾಗೂ ರಾಜಕೀಯ ಶಕ್ತಿಕೇಂದ್ರ ಎಂದು ಗುರುತಿಸಿಕೊಂಡಿದೆ. ಬಳ್ಳಾರಿ-ರಾಂಪುರ ಮಾರ್ಗವಾಗಿ ಕೂಡಲೇ ಬಸ್‌ ವ್ಯವಸ್ಥೆ ಮಾಡದಿದ್ದಲ್ಲಿ ಹೋರಾಟ ನಡೆಸಬೇಕಾಗುತ್ತದೆ
ಕೊಂಡಾಪುರ ಪರಮೇಶ್ವರಪ್ಪ ದಸಂಸ ಜಿಲ್ಲಾ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.