ADVERTISEMENT

ಚಿಕ್ಕಜಾಜೂರು: ನಿವೃತ್ತ ಜೀವನಕ್ಕೆ ಪುಷ್ಟಿ ನೀಡಿದ ‘ಸಿಹಿಕುಂಬಳ’

ಕೃಷಿಯಿಂದ ಉತ್ತಮ ಆದಾಯ ಗಳಿಸುತ್ತಿರುವ ನೀಲಕಂಠಪ್ಪ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 8:45 IST
Last Updated 2 ನವೆಂಬರ್ 2022, 8:45 IST
   

ಚಿಕ್ಕಜಾಜೂರು: ಸರ್ಕಾರಿ ನೌಕರಿಯಿಂದ ನಿವೃತ್ತಿಯಾದ ನಂತರ ಬರುವ ಪೆನ್ಷನ್‌ ಹಣದಿಂದ ಪಟ್ಟಣಗಳಲ್ಲೇ ನೆಲೆಸಿ, ಸುಖ ಜೀವನ ನಡೆಸುವವರೇ ಹೆಚ್ಚು. ಆದರೆ, ಇಲ್ಲೊಬ್ಬರು ನಿವೃತ್ತಅಧಿಕಾರಿ ಕೃಷಿಯತ್ತ ಗಮನ ಹರಿಸಿ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಕೂಲಿಗಳ ಜತೆ, ತಾವೂ ಕೃಷಿ ಕೆಲಸಗಳಲ್ಲಿ ನಿರತರಾಗಿ ಇತರರಿಗೆ ಮಾದರಿಯಾಗಿದ್ದಾರೆ. ಅಂತಹವರ ಸಾಲಿನಲ್ಲಿ ಕಾಳಘಟ್ಟ ಗ್ರಾಮದ ಪತ್ರಾಂಕಿತ ವ್ಯವಸ್ಥಾಪಕ ಅಧಿಕಾರಿಯಾಗಿ ನಿವೃತ್ತರಾಗಿರುವ ಕೆ.ಎಂ. ನೀಲಕಂಠಪ್ಪ ಒಬ್ಬರು.

ನೀಲಕಂಠಪ್ಪ ತಮ್ಮ ಎರಡು ಎಕರೆ ಪ್ರದೇಶದಲ್ಲಿ ಸಿಹಿ ಕುಂಬಳವನ್ನು ಬಿತ್ತನೆ ಮಾಡಿ, ಅಧಿಕ ಮಳೆಯಲ್ಲೂ ಉತ್ತಮ ಇಳುವರಿಯನ್ನು ಪಡೆದು, ಉತ್ತಮ ಬೆಲೆ ದೊರೆತಿದ್ದರಿಂದ ₹ 3 ಲಕ್ಷಕ್ಕೂ ಅಧಿಕ ಆದಾಯವನ್ನು ಗಳಿಸಿದ್ದಾರೆ.

ADVERTISEMENT

‘ಜುಲೈ ತಿಂಗಳಿನಲ್ಲಿ ಅರ್ಜುನ್‌ ತಳಿಯ ಕುಂಬಳವನ್ನು ಬಿತ್ತನೆ ಮಾಡಿದ್ದೆ. ಆರಂಭದಲ್ಲಿ ಭೂಮಿ ಹಸನುಗೊಳಿಸಿ ಸಾಲು ಮಾಡಿ ತಳ ಗೊಬ್ಬರವನ್ನು ಹಾಕಿ ನಾಟಿ ಮಾಡಿದ್ದೆವು. ನಂತರ, ಮೂರು ಬಾರಿ ಮೇಲು ಗೊಬ್ಬರ ನೀಡಿದ್ದೆವು. ಆಗಾಗ ಮಳೆ ಬರುತ್ತಿದ್ದುದರಿಂದ ಯಾವುದೇ ಸಸಿಗಳು ಒಣಗಲಿಲ್ಲ’ ಎಂದು ರೈತ ನೀಲಕಂಠಪ್ಪ ತಿಳಿಸಿದರು.

‘ಬಿತ್ತನೆಪೂರ್ವ ಬೇಸಾಯದಲ್ಲಿ ಸಾಲು ಮಾಡಿಸಿದ್ದು, ತಳಗೊಬ್ಬರ ಹಾಕಿಸಿದ್ದು, ಬೀಜ ನಾಟಿ ಮಾಡಿದ್ದು, ಎರಡು ಬಾರಿ ಮೇಲುಗೊಬ್ಬರ, ನಾಲ್ಕು ಬಾರಿ ಔಷಧಿ ಸಿಂಪಡಣೆ, ಕೂಲಿ ಸೇರಿ ₹ 52,000 ಖರ್ಚು ಮಾಡಿದ್ದೆ. ಒಂದು ಕಾಯಿ ಸರಾಸರಿ 4–5 ಕೆ.ಜಿ ತೂಗುತ್ತಿತ್ತು. ಈ ವಾರ ಕೊಯ್ಲು ಮಾಡಿ, ಕೆ.ಜಿ. ಒಂದಕ್ಕೆ ₹ 14ರಂತೆ ಮಾರಾಟ ಮಾಡಿದೆ. 23 ಟನ್‌ ಇಳುವರಿ ಬಂದಿತ್ತು. ₹ 3.02 ಲಕ್ಷ ಆದಾಯ ಬಂದಿದ್ದು, ಖರ್ಚು ಕಳೆದು ಒಟ್ಟು ₹ 2.50 ಲಕ್ಷ ಉಳಿದಿದೆ’ ಎಂದು ಅವರು ಹೇಳಿದರು.

ವರ್ಷದಲ್ಲಿ ಉತ್ತಮ ಆದಾಯ ಗಳಿಕೆ:

‘ಇನ್ನೂ ಎರಡುವರೆ ಎಕರೆಯಲ್ಲಿ ಕಳೆದ ಜುಲೈನಲ್ಲಿ ಎಲೆಕೋಸನ್ನು ಬೆಳೆದಿದ್ದು, 45 ಟನ್‌ ಇಳುವರಿ ಬಂದಿತ್ತು. ಕೆ.ಜಿ.ಗೆ ₹ 14 ರಂತೆ ಮಾರಾಟ ಮಾಡಿದ್ದು, ಒಟ್ಟು ₹ 5.10 ಲಕ್ಷ ಆದಾಯ ಬಂದಿತ್ತು. ಆಗ ಬಿತ್ತನೆ ಸಸಿ, ಗೊಬ್ಬರ, ಔಷಧ, ಕಳೆ, ಕೂಲಿಗೆ ₹ 1.80 ಲಕ್ಷ ಖರ್ಚಾಗಿ, ₹ 3.30 ಲಕ್ಷ ಆದಾಯ ದೊರೆತಿತ್ತು. ಒಂದೇ ವರ್ಷದಲ್ಲಿ ಬೇರೆ ಬೇರೆ ಬೆಳೆ ಬೆಳೆದಿದ್ದರಿಂದ ಉತ್ತಮ ಆದಾಯವನ್ನು ಬಂದಿತ್ತು. ಉತ್ತಮ ಇಳುವರಿ ಹಾಗೂ ಬೆಲೆ ಸಿಗುತ್ತಿರುವುದು ಸಮಾದಾನಕರ ಸಂಗತಿ’ ಎಂದು ನೀಲಕಂಠಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.