ADVERTISEMENT

ಚಿತ್ರದುರ್ಗ | ರಾಗಿ ಖರೀದಿ: ದಲ್ಲಾಳಿಗಳ ಹಾವಳಿ

ಕ್ರಮ ಕೈಗೊಳ್ಳಲು ಶಾಸಕ ಗೂಳಿಹಟ್ಟಿ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಮೇ 2022, 3:56 IST
Last Updated 10 ಮೇ 2022, 3:56 IST
ಹೊಸದುರ್ಗ ರಾಗಿ ಖರೀದಿ ಕೇಂದ್ರದ ಬಳಿ ಶಾಸಕ ಗೂಳಿಹಟ್ಟಿ ಶೇಖರ್‌ ಸರತಿಯಲ್ಲಿ ನಿಂತಿದ್ದವರಿಂದ ಮಾಹಿತಿ ಪಡೆದರು
ಹೊಸದುರ್ಗ ರಾಗಿ ಖರೀದಿ ಕೇಂದ್ರದ ಬಳಿ ಶಾಸಕ ಗೂಳಿಹಟ್ಟಿ ಶೇಖರ್‌ ಸರತಿಯಲ್ಲಿ ನಿಂತಿದ್ದವರಿಂದ ಮಾಹಿತಿ ಪಡೆದರು   

ಹೊಸದುರ್ಗ: ಹೊಸದುರ್ಗ ರಾಗಿ ಖರೀದಿ ಕೇಂದ್ರದ ಬಳಿ ರೈತರಲ್ಲದವರು ದಲ್ಲಾಳಿ ಅಂಗಡಿಯವರಿಂದ ಹಣ ಪಡೆದು ನೋಂದಣಿಗಾಗಿ ಸರದಿ‌ ಸಾಲಿನಲ್ಲಿ ನಿಂತಿದ್ದನ್ನು ಪರಿಶೀಲಿಸಿದ ಶಾಸಕಗೂಳಿಹಟ್ಟಿ ಡಿ. ಶೇಖರ್ ದಲ್ಲಾಳಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನರಾಗಿ ಖರೀದಿ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ರೈತರ ದಾಖಲಾತಿ ಪರಿಶೀಲಿಸಿದರು.

ಬೆಂಬಲ ಬೆಲೆ ಯೋಜನೆಯಡಿ 1.4 ಲಕ್ಷ ಟನ್ ರಾಗಿ ಖರೀದಿಸಲು ಸರ್ಕಾರ ಹಿಂದೆ ಅವಕಾಶ ಕಲ್ಪಿಸುತ್ತು. ಪುನಃ 2 ಲಕ್ಷ ಟನ್ ರಾಗಿ ಖರೀದಿಸಲು ಅವಕಾಶ ಕಲ್ಪಿಸಿದೆ. ಆದರೆ ದಲ್ಲಾಳಿಗಳು ರೈತರಿಂದ ಕಡಿಮೆ ಬೆಲೆಗೆ ರಾಗಿ ಖರೀದಿಸಿ ಗೋಡೌನ್‌ನಲ್ಲಿ ಇಟ್ಟಿರಬಹುದು. ಒಬ್ಬೊಬ್ಬ ದಲ್ಲಾಳಿಯು ರೈತರ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದಾರೆ. ಇದರಿಂದ ನಿಜವಾದ ರೈತರಿಗೆ ತೊಂದರೆಯಾಗಿದೆ. ಪಡಿತರ ಚೀಟಿಯವರಿಗೆ ಕೊಡುವ ರಾಗಿಯನ್ನೂ ದಲ್ಲಾಳಿಗಳು ಖರೀದಿಸುತ್ತಿದ್ದಾರೆ. ರೈತರ ಹೆಸರಲ್ಲಿ ಪಹಣಿ ಪಡೆದು ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರನ್ನು ನೋಂದಣಿಗಾಗಿ ಸಾಲಿನಲ್ಲಿ ನಿಲ್ಲಿಸಿದ್ದಾರೆ. ನೋಂದಣಿಯಾಗಿರುವವರ ಬಗ್ಗೆ ಮಾಹಿತಿ ಪಡೆದು, ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ADVERTISEMENT

ಸರತಿ ಸಾಲಿನಲ್ಲಿ ನಿಂತಿದ್ದವರನ್ನು ವಿಚಾರಿಸಿದ ಶಾಸಕರು ಮಾಹಿತಿ ಕೇಳಿದಾಗ ಕೆಲವರು ತಡವರಿಸಿದರು. ‘ದಲ್ಲಾಳಿ ಅಂಗಡಿಯವರು ಹೇಳಿದ ಕಾರಣ ಇಲ್ಲಿಗೆ ಬಂದಿದ್ದೇವೆ’ ಎಂದು ಕೆಲ ಮಹಿಳೆಯರು ಒಪ್ಪಿಕೊಂಡರು.

ಬಗೆಹರಿಯದ ಸರ್ವರ್ ಸಮಸ್ಯೆ: ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗಾಗಿ ನೋಂದಣಿ ಪ್ರಕ್ರಿಯೆ ಶುಕ್ರವಾರದಿಂದ ಆರಂಭವಾಗಿದ್ದರೂ ಸರ್ವರ್ ಸಮಸ್ಯೆ ಇನ್ನೂ ಬಗೆಹರಿದಿಲ್ಲ.

‘ಸರ್ಕಾರ ಸಣ್ಣ ಮತ್ತು ದೊಡ್ಡ ರೈತರು ಎಂಬ ಭೇದ ತೋರದೆ ಎಲ್ಲ ರೈತರ ರಾಗಿ ಖರೀದಿಸಬೇಕು. ಮೊದಲೇ ಹೇಳಿದ್ದರೆ ದೊಡ್ಡ ರೈತರು ಕಾಯುವುದು ತಪ್ಪುತ್ತಿತ್ತು’ ಎಂದು ರೈತ ನಾಗರಾಜ್ ಹುರುಳಿಹಳ್ಳಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.