
ಪುರುಷೋತ್ತಮಾನಂದಪುರಿ ಸ್ವಾಮೀಜಿ
ಹೊಸದುರ್ಗ: ಪಟ್ಟಣದಿಂದ 6 ಕಿ.ಮೀ ದೂರದ ಮಧುರೆ ಗ್ರಾಮದ ಬಳಿ ಬಲಕ್ಕೆ ತಿರುಗಿ 2 ಕಿ.ಮೀ ಸಾಗಿದರೆ, ಬೆಟ್ಟಗುಡ್ಡಗಳ ನಡುವೆ ಹಚ್ಚಹಸಿರಿನಿಂದ ಕಂಗೊಳಿಸುವ ಭಗೀರಥ ಗುರುಪೀಠ ನೋಡುಗರನ್ನು ತನ್ನತ್ತ ಸೆಳೆಯುತ್ತದೆ. ಬ್ರಹ್ಮ ವಿದ್ಯಾನಗರದ ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನದ ಭಗೀರಥ ಗುರುಪೀಠಾಧ್ಯಕ್ಷ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಅವರು ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಫೆ.10 ರಂದು ಅವರ ಪಟ್ಟಾಭಿಷೇಕ ಮಹೋತ್ಸವದ 27ನೇ ವಾರ್ಷಿಕೋತ್ಸವ ನಡೆಯಲಿದೆ.
ಈ ಕಾರ್ಯಕ್ರಮದ ಅಂಗವಾಗಿ ಶ್ರೀ ಮಠವನ್ನು ವಿಶೇಷವಾಗಿ ಅಲಂಕರಿಸಲಾಗಿದೆ.
ಕೆರೆಗಳ ಅಭಿವೃದ್ಧಿ:
ಪುರುಷೋತ್ತಮಾನಂದಪುರಿ ಸ್ವಾಮೀಜಿಗಳು ಮಠದ ಸಮೀಪ ದೊಡ್ಡದಾದ ಕೆರೆ ನಿರ್ಮಿಸಿದ್ದಾರೆ. ಮಧುರೆ ಗ್ರಾಮದ ಕೆರೆಯನ್ನು ದತ್ತು ಪಡೆದು, ಶ್ರೀಮಠದ ವತಿಯಿಂದ ₹ 1 ಲಕ್ಷ, ಗ್ರಾಮಸ್ಥರು ಮತ್ತು ಭಕ್ತರ ಸಹಕಾರ ಪಡೆದು ₹ 40 ಲಕ್ಷ ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿ ಮಾಡಿದ್ದಾರೆ. ಇಲ್ಲಿಯ ಜನರ ನೀರಿನ ಬವಣೆ ನಿವಾರಿಸಿರುವ ಸ್ವಾಮೀಜಿ ‘ಆಧುನಿಕ ಭಗೀರಥ’ ಎನ್ನಿಸಿದ್ದಾರೆ.
ಭಗೀರಥ ಗುರುಪೀಠದ ಎದುರು ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆ ಹಾದುಹೋಗಿದೆ. ಈ ಕಾಲುವೆಗೆ ಭಗೀರಥ ಮಹರ್ಷಿಯವರ ಹೆಸರು ಇರಿಸಿ, ಭಗೀರಥ ಗುರುಪೀಠವನ್ನು ಒಂದು ಸುಂದರ ಪ್ರವಾಸಿ ತಾಣವನ್ನಾಗಿಸಬೇಕು ಎಂಬುದು ಸ್ವಾಮೀಜಿಯವರ ಬಯಕೆಯಾಗಿದೆ.
ಗುರುಪೀಠ ಆರಂಭ:
ಮೊದಲು ಚಿತ್ರದುರ್ಗದಲ್ಲಿ ಮಠವಿತ್ತು. ನಂತರ ಚಳ್ಳಕೆರೆ ತಾಲ್ಲೂಕು ಉಪ್ಪಾರಹಟ್ಟಿಗೆ ಸ್ಥಳಾಂತರವಾಯಿತು. ಲೇಪಾಕ್ಷಿ ಸ್ವಾಮೀಜಿಯವರ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಮಠದ ಅಭಿವೃದ್ಧಿಗೆ ಮಧುರೆಯ ಬಳಿಯಿರುವ ಬ್ರಹ್ಮ ವಿದ್ಯಾನಗರದಲ್ಲಿ 500 ಎಕರೆ ಭೂಮಿ ಮಂಜೂರು ಮಾಡಿದ್ದರು. ಲೇಪಾಕ್ಷಿ ಸ್ವಾಮೀಜಿ ಇದರಲ್ಲಿ ಸಹಕಾರ ಬೇಸಾಯ ಪದ್ಧತಿ ಅಳವಡಿಸಿಕೊಂಡು, ಇಲ್ಲಿಯ ಜನತೆಗೆ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿದ್ದಾರೆ.
ಸಮಾಜದ ಅಭಿವೃದ್ಧಿಗಾಗಿ ಶಿಕ್ಷಣ, ಕೃಷಿ, ಸೇರಿದಂತೆ ಹಲವು ಕ್ಷೇತ್ರಗಳ ಸಾಧನೆಯನ್ನು ಪರಿಗಣಿಸಿ ಪುರುಷೋತ್ತಮಾನಂದ ಪುರಿ ಸ್ವಾಮಿಜಿಗೆ ಅಪಾರ ಪ್ರಶಸ್ತಿ ನೀಡಲಾಗಿದೆ. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಧಾರ್ಮಿಕ ಕ್ಷೇತ್ರದಲ್ಲಿ ಜೀವಮಾನವ ಸಾಧನಾ ಪ್ರಶಸ್ತಿ, ಗೋಕಾಕ್ ಸಂಸ್ಥೆಯಿಂದ ಕಾಯಕ ಯೋಗಿ ಪ್ರಶಸ್ತಿ ಸೇರಿ ಸಂಘ–ಸಂಸ್ಥೆಗಳು ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
ಹಿಂದಿನ ಜಗದ್ಗುರುಗಳಂತೆ ಈಗಿನ ಸ್ವಾಮೀಜಿ ಸಹ ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮಠದ ಜಮೀನಿನಲ್ಲೇ ಸಮಗ್ರ ಕೃಷಿ ಕಾಯಕ ಮಾಡುತ್ತಿದ್ದಾರೆ. ತೆಂಗು, ಅಡಿಕೆ, ದಾಳಿಂಬೆ, ಬಾಳೆ, ರಾಗಿ ಸೇರಿದಂತೆ ಇತರೆ ಬೆಳೆ ಬೆಳೆಯುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಜಮೀನಿನ ಕೆಲಸದಲ್ಲಿ ತೊಡಗಿರುತ್ತಾರೆ.
ಉನ್ನತ ವಿದ್ಯಾಭ್ಯಾಸಕ್ಕಾಗಿ ಬೇರೆಡೆ ತೆರಳುವ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಉಪ್ಪಾರರ ವಸತಿ ನಿಲಯ ಆರಂಭಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತರಬೇತಿ ಕೇಂದ್ರ ಹಾಗೂ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ತೆರೆಯಬೇಕು ಎಂದು ಆಗ್ರಹಿಸಿರುವ ಸ್ವಾಮೀಜಿ, ಶ್ರೀಮಠದಲ್ಲೇ ಕೇಂದ್ರ ಸ್ಥಾಪಿಸುವ ಕನಸನ್ನು ಹೊಂದಿದ್ದಾರೆ.
ಸ್ವಾಮಿಗಳು ನಾಡಿನ ಎಲ್ಲಾ ಮಠಾಧೀಶರೊಂದಿಗೆ ಉತ್ತಮ ಸಂಬಂಧ ಹೊಂದಿದ್ದು, ಸಮಾರಸ್ಯ ಕಾಪಾಡುವಲ್ಲಿ ನಿಪುಣರಾಗಿದ್ದಾರೆ. ಸಮಾಜದ ಸಂಘಟನೆ ಹಾಗೂ ಅಭಿವೃದ್ಧಿ ಮಂತ್ರ ಪಠಿಸಲು ಹಲವು ಬಾರಿ ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.
‘ಮಠದ ಆವರಣದಲ್ಲಿ ಒಂದು ಥೀಮ್ ಪಾರ್ಕ್ ನಿರ್ಮಿಸಿ, ಜನತೆಗೆ ಉಪ್ಪಾರರ ಹಿನ್ನೆಲೆ, ಸೂರ್ಯವಂಶದ ಮಹನೀಯರ ಬಗ್ಗೆ ಮಾಹಿತಿ ಹಾಗೂ ಮಠದ ಎಲ್ಲಾ ಜಗದ್ಗುರುಗಳ ಬಗ್ಗೆ ಜನರಿಗೆ ತಿಳಿಸುವ ಉದ್ದೇಶವಿದೆ. ಇಲ್ಲಿಯೇ ಭುವನೇಶ್ವರಿ ರಥ ನಿರ್ಮಿಸಿ, ಅದರಲ್ಲಿ ಎಲ್ಲಾ ಸಾಧು ಸಂತರ ಮತ್ತು ದಾರ್ಶನಿಕರನ್ನು ಪರಿಚಯಿಸುವ ಕನಸಿದೆ. ಮಠದಲ್ಲಿ ಈಗಾಗಲೇ ಭಗೀರಥ ಮೂರ್ತಿಯ ಏಕಶಿಲಾ ವಿಗ್ರಹ ಪ್ರತಿಷ್ಠಾಪಿಸಲಾಗಿದೆ ಎಂದು ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ತಿಳಿಸಿದ್ದಾರೆ.
ಭಗೀರಥ ಪೀಠದ ಗುರುಪರಂಪರೆ
ಶ್ರೀಚೆಲುವರಾಯ ಸ್ವಾಮಿ, ಜಯದೇವ ಸ್ವಾಮಿ, ತಾವರೆತಿಮ್ಮರಾಯ ಸ್ವಾಮಿ, ವೆಂಕಟಪ್ಪ ಸ್ವಾಮಿ, ಚಪ್ಪರದಪ್ಪ ಸ್ವಾಮಿ, ತಿಮ್ಮಪ್ಪ ಸ್ವಾಮಿ, ದಾಸಪ್ಪ ಸ್ವಾಮಿ, ಹನುಮಂತಪ್ಪ, ಬಂಗಾರದಪ್ಪ, ಚಪ್ಪರದಪ್ಪ ಲೇಪಾಕ್ಷಿ ಸ್ವಾಮಿಯವರು ಸೇರಿದಂತೆ 12 ಸ್ವಾಮೀಜಿಗಳ ನಂತರ 13ನೇ ಜಗದ್ಗುರುಗಳಾಗಿ ಪುರುಷೋತ್ತಮಾನಂದ ಪುರಿ ಸ್ವಾಮೀಜಿಗಳಿಗೆ 2000 ಅಕ್ಟೋಬರ್ 10ರಂದು ಪಟ್ಟಾಭಿಷೇಕ ನಡೆಯಿತು.
‘ಮಠ ನಮ್ಮ ಹೆಮ್ಮೆ’
ಭಗೀರಥ ಮಹರ್ಷಿಗಳು ಘೋರ ತಪ್ಪಿಸ್ಸಿನ ಮೂಲಕ ಗಂಗೆಯನ್ನು ಧರೆಗೆ ಕರೆತಂದರು. ಈಗ ಪುರುಷೋತ್ತಮಾನಂದ ಪುರಿ ಸ್ವಾಮೀಜಿಗಳು ನಾಡಿನೆಲ್ಲೆಡೆ ಸಂಚರಿಸಿ ಹರಿದು ಹಂಚಿದ್ದ ಸಮಾಜವನ್ನು ಒಂದುಗೂಡಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ಮಠದ ಭಕ್ತರೆಂಬುದು ನಮ್ಮ ಹೆಮ್ಮೆ. ಸದಾ ಮಠವನ್ನು, ಶ್ರೀಗಳನ್ನು ಗೌರವಿಸುವ ಕಾರ್ಯವಾಗಬೇಕುಆರ್ ಲಕ್ಷ್ಮಯ್ಯ, ಶ್ರೀಮಠದ ಭಕ್ತರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.