
ಹೊಸದುರ್ಗ: ‘ದಾಸ ಶ್ರೇಷ್ಠರು, ಕೀರ್ತನೆಗಳ ಮೂಲಕ, ಬಸವಾದಿ ಶಿವಶರಣರು ವಚನಗಳ ಮೂಲಕ ಸಾಹಿತ್ಯ ನೀಡಿದ್ದಾರೆ. ಆ ಶ್ರೇಷ್ಠ ಸಾಹಿತ್ಯವನ್ನು ಉಳಿಸಿ, ಬೆಳೆಸುವ ಕಾರ್ಯವಾಗಬೇಕು’ ಎಂದು ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹೆಗ್ಗೆರೆ ಗಳಗೇಶ್ವರ ಸ್ವಾಮಿ ಸೇವಾ ಸಮಿತಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಅನಿಕೇತನ ಬಳಗ, ಜಿಲ್ಲಾ ಕನ್ನಡ ಜಾನಪದ ಪರಿಷತ್ ವತಿಯಿಂದ ತಾಲ್ಲೂಕಿನ ಶ್ರೀರಾಂಪುರ ಹೋಬಳಿಯ ಗವಿರಂಗಾಪುರದ ಗವಿರಂಗನಾಥಸ್ವಾಮಿ ಬೆಟ್ಟದಲ್ಲಿ ಭಾನುವಾರ ಆಯೋಜಿಸಿದ್ದ ‘ಅಂತರ್ ಜಿಲ್ಲಾ ಸಂಸ್ಕೃತಿ ಉತ್ಸವ, ತ್ಯಾಗರಾಜರು, ಪುರಂದರದಾಸರು, ಕನಕದಾಸರು ಹಾಗೂ ಬಸವಾದಿ ಶಿವಶರಣರ ಆರಾಧನಾ ಮಹೋತ್ಸವ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ದಾಸಪರಂಪರೆಯ ಮಹನೀಯರು, ಬಸವಾದಿ ವಚನಕಾರರು ಸಾಹಿತ್ಯ ಮತ್ತು ಸಂಗೀತದ ಮೂಲಕ ಜನ ಸಾಮಾನ್ಯರ ಸಾಂಸ್ಕೃತಿಕ, ಸಮೃದ್ಧಿಯ ಬದುಕು ಕಟ್ಟಲು ಶ್ರಮಿಸಿದ್ದಾರೆ’ ಎಂದು ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಹೇಳಿದರು.
ಕುಂಚೀಟಿಗ ಮಠದ ಶಾಂತವೀರ ಸ್ವಾಮೀಜಿ, ‘ಸಂಗೀತಕ್ಕೂ, ಆಧ್ಯಾತ್ಮಕ್ಕೂ ಅವಿನಭಾವ ಸಂಬಂಧವಿದೆ. ಮಾನವನ ಬದುಕಿನ ಅವಿಭಾಜ್ಯ ಅಂಗ ಸಂಗೀತ, ಅದಕ್ಕೆ ಅಪಾರವಾದ ಶಕ್ತಿ ಇದೆ’ ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ‘ಆರಾಧನಾ ಮಹೋತ್ಸವದ ಮೂಲಕ ನಾಡಿನ ಶಾಸ್ತ್ರೀಯ ಸಂಗೀತ ವಿದ್ವಾಂಸರು ಮತ್ತು ಸ್ಥಳೀಯ ಕಲಾವಿದರು ಕಲೆಯ ಪ್ರದರ್ಶನ ನೀಡುತ್ತಿರುವುದು ಸಂತಸದ ವಿಷಯ. ಇಂದಿನ ಯುವ ಪೀಳಿಗೆ ಸಾಂಸ್ಕೃತಿಕವಾಗಿ ಬದುಕು ಕಟ್ಟಿಕೊಳ್ಳಲು ಇಂತಹ ವೇದಿಕೆಗಳು ಅಗತ್ಯವಾಗಿದೆ’ ಎಂದು ಹೇಳಿದರು.
ಈ ವೇಳೆ ಪಂಚರತ್ನ ಕೀರ್ತನೆಗಳ ಗಾಯನ, ಕರ್ನಾಟಕ ಶಾಸ್ತ್ರೀಯ ಗಾಯನ, ವೀಣಾವಾದನ, ದಾಸರ ಪದಗಳ ಗಾಯನ, ರಂಗಗೀತೆಗಳ ಗಾಯನ, ವಚನಗಾಯನ, ಭರತನಾಟ್ಯ, ಜಾನಪದ ಸಂಗೀತ, ಭಜನೆ ಹಾಗೂ ಕೋಲಾಟ ಪ್ರದರ್ಶನ ನಡೆಯಿತು.
ಅನಿಕೇತನ ಬಳಗ ಮುಖ್ಯಸ್ಥ ಪಿ.ಎಲ್. ಲೋಕೇಶ್ವರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಎಸ್. ಶಿವಣ್ಣ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ಆರ್. ಶಾಂತಪ್ಪ, ಆರಾಧನಾ ಸಮಿತಿ ಅಧ್ಯಕ್ಷ ಹೆಗ್ಗೆರೆ ರಂಗಪ್ಪ, ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮೈಲಾರಪ್ಪ, ಮುಖಂಡರಾದ ಕೃಷ್ಣಮೂರ್ತಿ, ಕೃಷ್ಣನಾಯ್ಕ, ಕೈನಡು ಚಂದ್ರಪ್ಪ, ಹೆಗ್ಗೆರೆ ಶಂಕರಪ್ಪ, ದೊಡ್ಡಘಟ್ಟ ಎಂ. ಲಕ್ಷ್ಮಣ್, ಎಚ್. ಸ್ವಾಮಿ, ಆರ್.ಕಂಠೇಶ್ ಸೇರಿದಂತೆ ಹಲವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.