ADVERTISEMENT

ರಘು ಆಚಾರ್‌ಗೆ ಕಾಳಜಿ ಇಲ್ಲ: ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಆರೋಪ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2018, 11:59 IST
Last Updated 9 ಅಕ್ಟೋಬರ್ 2018, 11:59 IST

ಚಿತ್ರದುರ್ಗ: ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನುದಾನ ಬಿಡುಗಡೆ ಮಾಡುವಲ್ಲಿ ಉಂಟಾಗುತ್ತಿರುವ ವಿಳಂಬದಿಂದ ಬೇಸತ್ತು ರಾಜೀನಾಮೆಗೆ ಮುಂದಾಗಿರುವ ವಿಧಾನಪರಿಷತ್‌ ಸದಸ್ಯ ರಘು ಆಚಾರ್‌ ನಿರ್ಧಾರವನ್ನು ಖಂಡಿಸಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಅಭಿವೃದ್ಧಿ ಹೋರಾಟ ಸಮಿತಿ, ‘ಜಿಲ್ಲೆಯ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು’ ಎಂದು ಪ್ರಶ್ನಿಸಿದೆ.

‘ವೈದ್ಯಕೀಯ ಕಾಲೇಜು ಕುರಿತು ಮಾತನಾಡಲು ರಘು ಆಚಾರ್‌ ನೈತಿಕತೆ ಉಳಿಸಿಕೊಂಡಿಲ್ಲ. ರಾಜಕೀಯ ಉದ್ದೇಶ ಈಡೇರಿಸಿಕೊಳ್ಳಲು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ಜಿಲ್ಲೆ ಹಾಗೂ ಜನರ ಬಗ್ಗೆ ನೈಜ ಕಾಳಜಿ ಇಲ್ಲ’ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್‌.ರಮಾ ನಾಗರಾಜ್‌ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಚಿತ್ರದುರ್ಗದಲ್ಲಿ ವಾಸವಾಗಿರುವುದಾಗಿ ವಿಧಾನಪರಿಷತ್‌ ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡಿದ್ದರು. ಆದರೆ, ಈವರೆಗೆ ಅವರು ಇಲ್ಲಿ ನೆಲೆಸಿಲ್ಲ. ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಗೆ ಒಮ್ಮೆಯೂ ಭಾಗವಹಿಸಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರಿಗೂ ಇವರ ಮುಖ ಪರಿಚಯವಿಲ್ಲ. ಜಿಲ್ಲೆಯ ಜನರ ಸಮಸ್ಯೆಗಳ ಕುರಿತು ವಿಧಾನಮಂಡಲ ಅಧಿವೇಶನದಲ್ಲಿ ಒಮ್ಮೆಯೂ ಧ್ವನಿ ಎತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ವಿಧಾನಪರಿಷತ್‌ ಸದಸ್ಯರ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವುದಾಗಿ ಆಶ್ವಾಸನೆ ನೀಡಿದ್ದರು. ಸಕಾಲಕ್ಕೆ ಅನುದಾನ ಬಿಡುಗಡೆಯಾಗದಿದ್ದರೆ ತಾವೇ ವೆಚ್ಚ ಭರಿಸುವುದಾಗಿ ಪ್ರಕಟಿಸಿದ್ದರು. ಆದರೆ, ಈವರೆಗೆ ಇಂತಹ ಪ್ರಯತ್ನ ಮಾಡಿಲ್ಲ. ಹೆಲಿಕಾಪ್ಟರ್‌ನಲ್ಲಿ ಬಂದು ಕೆಲವೇ ಜನರನ್ನು ಭೇಟಿ ಮಾಡಿ ಬೆಂಗಳೂರಿಗೆ ಮರಳುತ್ತಾರೆ. ಇಂಥವರಿಗೆ ಜಿಲ್ಲೆಯ ಬಗ್ಗೆ ನೈಜ ಕಾಳಜಿ ಇರಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ಹೋರಾಟ ಸಮಿತಿಯ ನಿರ್ದೇಶಕರಾದ ಕೆ.ಆರ್‌.ನಾಗಪ್ಪ, ಎಲ್‌.ತಿಪ್ಪೇಸ್ವಾಮಿ, ಶುಭಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.