ADVERTISEMENT

ಮಳೆಯ ಕೊರತೆ; ಮುದುಡಿದ ರಾಗಿ ಬೆಳೆ

ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಕ್ಕಿಲ್ಲ ಎಂಬ ಆತಂಕದಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 5:26 IST
Last Updated 20 ಸೆಪ್ಟೆಂಬರ್ 2025, 5:26 IST
ಹೊಸದುರ್ಗದ ಕಸಬಾ ಹೋಬಳಿಯ ದೇವಿಗೆರೆ ಗ್ರಾಮದ ಜಮೀನೊಂದರಲ್ಲಿ ಮಳೆಯಿಲ್ಲದೆ ಮುದುಡಿರುವ ರಾಗಿ
ಹೊಸದುರ್ಗದ ಕಸಬಾ ಹೋಬಳಿಯ ದೇವಿಗೆರೆ ಗ್ರಾಮದ ಜಮೀನೊಂದರಲ್ಲಿ ಮಳೆಯಿಲ್ಲದೆ ಮುದುಡಿರುವ ರಾಗಿ   

ಹೊಸದುರ್ಗ: ಎರಡು ವಾರಗಳಿಂದ ತಾಲ್ಲೂಕಿನಾದ್ಯಂತ ಮಳೆಯಾಗದ ಕಾರಣ ಹುಲುಸಾಗಿ ಬೆಳೆದಿದ್ದ ರಾಗಿ ಬೆಳೆ ಬಾಡುತ್ತಿದ್ದು, ರೈತರು ಮಳೆಗಾಗಿ ಮತ್ತೆ ಮುಗಿಲಿನತ್ತ ದೃಷ್ಟಿ ನೆಟ್ಟಿದ್ದಾರೆ.

ಜಮೀನುಗಳಲ್ಲಿ ಹುಲುಸಾಗಿ ಬೆಳೆದಿದ್ದ ರಾಗಿಬೆಳೆ ನಳನಳಿಸುತ್ತಿತ್ತು. ರೈತರು ಸಹ ಕಾಲ ಕಾಲಕ್ಕೆ ಬೆಳೆಗಳಿಗೆ ಬೇಕಾದ ಗೊಬ್ಬರ, ಪೌಷ್ಟಿಕಾಂಶ ಒದಗಿಸಿದ್ದು, ಉತ್ತಮ ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ, ಬಿಸಿಲಿನ ತಾಪ 27ರಿಂದ 30 ಡಿಗ್ರಿ ಸೆಲ್ಸಿಯಸ್‌ ತಲುಪಿದ್ದು, ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ತುರ್ತಾಗಿ ಮಳೆ ಬಂದರೆ ಮಾತ್ರ ಬೆಳೆ ಪಡೆಯಬಹುದು. ಇಲ್ಲದಿದ್ದರೆ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಬಹುದು.

ಜೂನ್ ತಿಂಗಳ ಕೊನೆಯ ವಾರದಿಂದ 35,000 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ. ಕಳೆದ ವರ್ಷ 25,000 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿತ್ತು.

ADVERTISEMENT

‘ಹದವಾದ ಮಳೆಯಾಗಿದ್ದರೆ ದಸರಾದೊಳಗೆ ರಾಗಿ ತೆನೆ ಒಡೆಯಬೇಕಿತ್ತು. ಆದರೆ, ಮಳೆ ಬೀಳದ ಕಾರಣ ರಾಗಿ ಬೆಳವಣಿಗೆಯಲ್ಲಿ ಕುಂಠಿತವಾಗಿದೆ. ಈ ವಾರವೂ ಮಳೆಯಾಗದಿದ್ದರೆ ರಾಗಿ ಫಸಲು ಬರುವುದಿಲ್ಲ. ಮುಂದಿನ ಜನವರಿ ನಂತರ ಜಾನುವಾರುಗಳ ಮೇವಿಗೂ ಸಮಸ್ಯೆ ಎದುರಾಗಬಹುದು’ ಎನ್ನುತ್ತಾರೆ ಮಲ್ಲಪ್ಪನಹಳ್ಳಿ ಗ್ರಾಮದ ರೈತ ಕೆ. ಕಾಂತರಾಜ್.

‘ಮುಂಗಾರು ಕೈಕೊಟ್ಟಿದ್ದರಿಂದ ಸಾವೆಯನ್ನೂ ನೀರಿಕ್ಷಿತ ಪ್ರಮಾಣದಲ್ಲಿ ಪಡೆಯಲಾಗಲಿಲ್ಲ. ತೆಂಗಿಗೆ ಬೆಂಕಿರೋಗ ಕಾಣಿಸಿದ್ದು, ಅಡಿಕೆ ಬೆಳೆಗೂ ಮಳೆ ಇಲ್ಲ. ರೈತರಿಗೆ ತಮ್ಮ ಮಕ್ಕಳಿಗೆ ಶಾಲೆ– ಕಾಲೇಜುಗಳ ಶುಲ್ಕ, ಆಸ್ಪತ್ರೆ ಸೇರಿದಂತೆ ಹಲವು ವೆಚ್ಚಗಳಿಗಾಗಿ ಬೇರೆಯವರ ಬಳಿ ಕೈ ಚಾಚುವ ಪರಿಸ್ಥಿತಿ ಎದುರಾಗಿದೆ’ ಎಂದು ಅವರು ತಿಳಿಸಿದರು.

‘ರಾಗಿ ಬೆಳೆಗೆ ಯೂರಿಯಾ ಬಳಕೆ ಕಡಿಮೆ ಮಾಡಿ, ಇದು ಮಣ್ಣಿನ ಫಲವತ್ತತೆ ಹಾಳು ಮಾಡುವುದರ ಜೊತೆಗೆ, ಬೆಳೆಗೆ ಬೆಂಕಿರೋಗ ಸೇರಿದಂತೆ ಇತರೆ ರೋಗಗಳಿಗೂ ಆಹ್ವಾನ ನೀಡುತ್ತದೆ. ರೈತರು ಬೆಳೆಗಳನ್ನು ವಾತಾವರಣಕ್ಕೆ ಹೊಂದಿಕೊಂಡು ಬೆಳೆಯಲು ಅವಕಾಶ ಮಾಡಿಕೊಡಿ. ವೇಗವಾಗಿ ಬೆಳೆಯಬೇಕೆಂದು ವಿವಿಧ ಗೊಬ್ಬರಗಳನ್ನು ಹಾಕಬೇಡಿ. ಹೀಗೆ ಮಾಡುವುದರಿಂದ ಮಳೆಯಿಲ್ಲದಿದ್ದರೆ ಬೆಳೆ ಬಾಡುತ್ತದೆ. ಸದ್ಯ ಉತ್ತರೆ ಮಳೆಯಾಗಬೇಕು. ಇನ್ನೂ 15 ದಿನಗಳ ನಂತರ ರಾಗಿ ಕಾಳು ಕಟ್ಟುವ ಹಂತದಲ್ಲಿರುತ್ತದೆ. ಈ ಸಮಯದಲ್ಲಾದರೂ ಮಳೆಯಾದರೆ ಈ ಬಾರಿ ಹೊಸದುರ್ಗದಲ್ಲಿ ಉತ್ತಮ ರಾಗಿ ಇಳುವರಿ ಪಡೆಯಬಹುದು’ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.