ಹೊಸದುರ್ಗ: ತಾಲ್ಲೂಕಿನಲ್ಲಿ ರಾಗಿ ಬಿತ್ತನೆಗೆ ರೈತರು ಭರದ ಸಿದ್ಧತೆ ನಡೆಸಿದ್ದಾರೆ. ಕೆಲವೆಡೆ ಈಗಾಗಲೇ ಬಿತ್ತನೆ ಕಾರ್ಯ ಶುರುವಾಗಿದೆ. ಆಗಾಗ ತುಂತುರು ಮಳೆ ಬೀಳುತ್ತಿರುವುದರಿಂದ ಕೃಷಿಕರು ಜಮೀನು ಹದಗೊಳಿಸಿಕೊಂಡಿದ್ದಾರೆ.
ಜುಲೈ ಮೊದಲ ವಾರದಿಂದ ಆಗಸ್ಟ್ ಕೊನೆಯ ವಾರದವರೆಗೂ ರಾಗಿ ಬಿತ್ತನೆ ಕಾರ್ಯ ನಡೆಯಲಿದೆ. ಕೃಷಿ ಇಲಾಖೆಯು 30,000ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯ ಗುರಿ ಹೊಂದಿದೆ. ಕಳೆದ ಬಾರಿ 26,487 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ನಡೆದಿತ್ತು.
ತಾಲ್ಲೂಕಿನ 4 ಹೋಬಳಿಗಳಲ್ಲಿ ಬಿತ್ತನೆ ಆರಂಭವಾಗಿದೆ. ಯಾಂತ್ರೀಕರಣದ ಕಾರಣಕ್ಕೆ ರಾಗಿ ಕೃಷಿ ಸುಲಭವಾಗುತ್ತಿದೆ. ಬಿತ್ತನೆ, ಕಟಾವು, ಹುಲ್ಲು ಜೋಡಿಸಿ ಕಟ್ಟುವ ಕಾರ್ಯಕ್ಕೆ ಯಂತ್ರಗಳು ನೆರವಾಗುತ್ತಿವೆ. ಕಟಾವಿನ ದಿನವೇ ಯಂತ್ರದ ಸಹಾಯದಿಂದ ರಾಗಿ ಪಡೆಯಬಹುದಾಗಿದೆ. ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆಯೂ ಇದೆ.
‘ಜುಲೈ ತಿಂಗಳಲ್ಲಿ ಬಿತ್ತನೆ ಮಾಡುವವರು ಎಂ.ಆರ್. 1, ಎಂ.ಎಲ್. 365 ರಾಗಿ ಬೀಜ ಬಳಸಬಹುದು. ಆಗಸ್ಟ್ ತಿಂಗಳಲ್ಲಿ ಬಿತ್ತನೆ ಮಾಡುವವರು ಕೆ.ಎಂ.ಆರ್ 630, ಎಂ.ಎಲ್ 322, ಪಿಆರ್ 202 ತಳಿಯ ಬೀಜ ಬಳಸಬಹುದು. ಬಿತ್ತನೆಗೂ ಮುನ್ನ ಕೊಟ್ಟಿಗೆ ಗೊಬ್ಬರ ಹಾಕಿ ಭೂಮಿ ಹದ ಮಾಡಿಕೊಳ್ಳಬೇಕು. ತಳಗೊಬ್ಬರವಾಗಿ ಸಾರಜನಕ, ಪೊಟ್ಯಾಷ್ ಮತ್ತು ರಂಜಕ ಸಂಯುಕ್ತ ರಸಗೊಬ್ಬರ ಬಳಸಬೇಕು. ಬಿತ್ತನೆಯಾದ 25 ರಿಂದ 30 ದಿನ ಹಾಗೂ 40 ರಿಂದ 45 ದಿನಗಳಲ್ಲಿ ಮೇಲುಗೊಬ್ಬರವಾಗಿ ನ್ಯಾನೊ ಯೂರಿಯಾ ಬಳಸಬಹುದು. ಎಲ್ಲಾ ರೈತರು ಬೆಳೆ ವಿಮೆ ಪಾವತಿಸುವುದು ಸೂಕ್ತ’ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶ ತಿಳಿಸಿದರು.
‘ಹವಾಮಾನ ವೈಪರೀತ್ಯದಿಂದ ನಷ್ಟವಾದರೆ ಬೆಳೆ ವಿಮೆ ಯೋಜನೆ ರೈತರಿಗೆ ಆರ್ಥಿಕ ಬಲ ಒದಗಿಸಲಿದೆ. ಆಗಸ್ಟ್ 16ರೊಳಗೆ ರಾಗಿ ಬೆಳೆಗೆ ಎಕರೆಗೆ ₹850 ಬೆಳೆ ವಿಮೆ ಪಾವತಿಸಬಹುದು’ ಎಂದು ಹೇಳಿದರು.
‘ಜಮೀನುಗಳಿಗೆ ಯೂರಿಯಾ ಗೊಬ್ಬರ ಬಳಸುವುದರಿಂದ ಭೂಮಿಯ ಫಲವತ್ತತೆ ಹಾಳಾಗುತ್ತದೆ. ಎಲ್ಲಾ ಸಸಿಗಳಿಗೂ ಈ ಗೊಬ್ಬರ ತಲುಪುವುದಿಲ್ಲ. ಹಾಗಾಗಿ ನ್ಯಾನೊ ಯೂರಿಯಾ ಬಳಸುವುದು ಉತ್ತಮ. ಇದು ಭೂಮಿಯ ಫಲವತ್ತತೆ ಹೆಚ್ಚಿಸುವ ಜೊತೆಗೆ ಎಲ್ಲಾ ಬೆಳೆಗೂ ತಾಗಿ ಉತ್ತಮ ಇಳುವರಿಗೆ ಸಹಕರಿಸುತ್ತದೆ. ಒಂದು ಲೀಟರ್ ನೀರಿಗೆ 4 ಎಂ.ಎಲ್ ನ್ಯಾನೊ ಯೂರಿಯಾ ಹಾಕಿ ಸಿಂಪಡಿಸಬೇಕು. ನ್ಯಾನೊ ಡಿಎಪಿ ಗೊಬ್ಬರವೂ ಬಂದಿದ್ದು, ರೈತರು ಇವೆರಡನ್ನೂ ಉಪಯೋಗಿಸಬಹುದು’ ಎಂದು ತಿಳಿಸಿದರು.
ರಾಗಿ ಬೀಜಗಳ ದಾಸ್ತಾನು
ತಾಲ್ಲೂಕಿನ ನಾಲ್ಕು ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ರಾಗಿ ಬೀಜಗಳ ದಾಸ್ತಾನು ಇದೆ. ಈಗಾಗಲೇ 600 ಕ್ವಿಂಟಲ್ ರಾಗಿ ಬೀಜವನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗಿದೆ. ಇನ್ನೂ 800 ಕ್ವಿಂಟಲ್ ದಾಸ್ತಾನು ಇದೆ. ಆಗಸ್ಟ್ ಕೊನೆಯ ವಾರದವರೆಗೂ ವಿತರಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.