ADVERTISEMENT

ಅಲೆಮಾರಿ ಹಾಗೂ ಅಲಕ್ಷಿತ ಸಮುದಾಯದ ಸಮಸ್ಯೆ ಆಲಿಸಿದ ರಾಹುಲ್

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2022, 13:06 IST
Last Updated 10 ಅಕ್ಟೋಬರ್ 2022, 13:06 IST
   

ಹಿರಿಯೂರು (ಚಿತ್ರದುರ್ಗ): ರಾಜ್ಯದ ಅಲೆಮಾರಿ ಹಾಗೂ ಅಲಕ್ಷಿತ ಸಮುದಾಯದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕುಂದುಕೊರತೆಗಳನ್ನು ಆಲಿಸಿದರು. ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಆಶ್ವಾಸನೆ ನೀಡಿದರು.

ಹುಳಿಯಾರು ಮಾರ್ಗವಾಗಿ ಹಿರಿಯೂರು ತಾಲ್ಲೂಕು ಪ್ರವೇಶಿಸಿದ ಜೋಡೊ ಯಾತ್ರೆಯ ಯಾತ್ರಾರ್ಥಿಗಳು ನಗರದ ಹೊರವಲಯದಲ್ಲಿ ಸೋಮವಾರ ವಿಶ್ರಾಂತಿ ಪಡೆದರು. ಬಿಡುವಿನ ಸಮಯದಲ್ಲಿ ಲಂಬಾಣಿ, ದಕ್ಕಲಿಗ, ಸುಡುಗಾಡು ಸಿದ್ದರು, ದೊಂಬಿದಾಸರು, ಕೊರಮರು, ಶಿಳ್ಳೆಕ್ಯಾತ ಹಾಗೂ ಹಂದಿಜೋಗಿ ಸಮುದಾಯದ 25ಕ್ಕೂ ಹೆಚ್ಚು ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು. ದೈನಂದಿನ ಜೀವನದ ಸ್ಥಿತಿ-ಗತಿ, ಪ್ರಸ್ತುತ ಸಮಾಜದಲ್ಲಿ ಅನುಭವಿಸುತ್ತಿರುವ ಕಷ್ಟ ನಷ್ಟಗಳ ಕುರಿತು ಸಮಾಲೋಚನೆ ನಡೆಸಿದರು.

'ಬ್ರಿಟಿಷರ ಕಾಲದಲ್ಲಿ ಲಂಬಾಣಿ ಸಮುದಾಯವನ್ನು ಘೋಷಿತ 'ಅಪರಾಧಿ ಬುಡಕಟ್ಟು' ಎಂಬುದಾಗಿ ಗುರುತಿಸಲಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಮೀಸಲಾತಿ ನೀಡಲಾಗುತ್ತಿದೆ. ಆದರೂ ಸಮುದಾಯ ಸಂಕಷ್ಟಗಳಿಂದ ಹೊರ ಬಂದಿಲ್ಲ. ತಾಂಡಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡುವ ಪ್ರಯತ್ನ ತೆವಳುತ್ತ ಸಾಗುತ್ತಿದೆ. ಉದ್ಯೋಗ ಅರಸಿ ಗುಳೆ ಹೊಗುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿರುವುದಕ್ಕೆ ಸಂಬಂಧಿಸಿದಂತೆ ಸಂವಾದ ನಡೆಸಲಾಯಿತು' ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾನಾಯ್ಕ್ ಮಾಹಿತಿ ನೀಡಿದರು.

ADVERTISEMENT

'ಅಲೆಮಾರಿ ಸಮುದಾಯಕ್ಕೆ ಪಡಿತರ ಚೀಟಿ ಹೊರತುಪಡಿಸಿ ಯಾವುದೇ ಸೌಲಭ್ಯ ಸಿಕ್ಕಿಲ್ಲ. ವಸತಿ, ಉದ್ಯೋಗ, ನಿವೇಶನ ಸೇರಿ ಹಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಹುಳಿಯಾರು ಪಟ್ಟಣದ ಕೆರೆ ಅಂಗಳದಲ್ಲಿ ಹಾಕಿಕೊಂಟಿದ್ದ ಟೆಂಟ್ ಗಳು ಜಲಾವೃತವಾಗಿವೆ. ಶಾಶ್ವತ ವಸತಿ ಸೌಲಭ್ಯಕ್ಕೆ ಒತ್ತಾಯಿಸಿ ನಾಡಕಚೇರಿ ಎದುರು ನಡೆಸುತ್ತಿರುವ ಹೋರಾಟದ ಬಗ್ಗೆ ರಾಹುಲ್ ಗಮನ ಸೆಳೆದೆವು' ಎಂದು ಹಂದಿಜೋಗಿ ಸಮುದಾಯದ ಮುಖಂಡ ಹುಳಿಯಾರು ರಾಜಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.