ADVERTISEMENT

ನೇರ ರೈಲು ಮಾರ್ಗ ಅನುಷ್ಠಾನಕ್ಕೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 16:13 IST
Last Updated 12 ಆಗಸ್ಟ್ 2021, 16:13 IST

ಚಿತ್ರದುರ್ಗ: ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ದಾವಣಗೆರೆ - ಚಿತ್ರದುರ್ಗ - ತುಮಕೂರು ನೇರ ರೈಲು ಮಾರ್ಗದ ಅನುಷ್ಠಾನಕ್ಕೆ ರೈಲ್ವೆ ಮಂಡಳಿ ಅನುಮೋದನೆ ನೀಡಿದ್ದು, ₹ 1,801 ಕೋಟಿ ವೆಚ್ಚದ ಕಾಮಗಾರಿ ಕೈಗೆತ್ತಿಕೊಳ್ಳುವ ಒಪ್ಪಿಗೆ ಸೂಚಿಸಿದೆ.

ಈ ಸಂಬಂಧ ರೈಲ್ವೆ ಮಂಡಳಿಯ ಕಾಮಗಾರಿ ವಿಭಾಗದ ನಿರ್ದೇಶಕರು ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಕಿತ್ತೂರು ಮೂಲಕ ಬೆಳಗಾವಿ - ಧಾರವಾಡ ಸಂಪರ್ಕಿಸುವ ₹ 927 ಕೋಟಿ ವೆಚ್ಚದ ನೂತನ ಮಾರ್ಗ ಹಾಗೂ ₹ 994 ಕೋಟಿ ವೆಚ್ಚದ ಶಿವಮೊಗ್ಗ - ಶಿಕಾರಿಪುರ- ರಾಣೆಬೆನ್ನೂರು ಹೊಸ ಮಾರ್ಗಗಳಿಗೂ ಒಪ್ಪಿಗೆ ಸಿಕ್ಕಿದೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್‍ ಅವರನ್ನು ಈಚೆಗೆ ಭೇಟಿ ಮಾಡಿ ದಾವಣಗೆರೆ -ಚಿತ್ರದುರ್ಗ - ತುಮಕೂರು ನೇರ ರೈಲು ಸೇರಿ ಕರ್ನಾಟಕದಲ್ಲಿ ನನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ರೈಲ್ವೆ ಮಂಡಳಿ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿದೆ.

ADVERTISEMENT

192 ಕಿ.ಮೀ ದೂರದ ದಾವಣಗೆರೆ–ಚಿತ್ರದುರ್ಗ–ತುಮಕೂರು ನೇರ ರೈಲು ಮಾರ್ಗದಿಂದ ದಾವಣಗೆರೆ–ತುಮಕೂರು ನಡುವಿನ ಅಂತರ 53 ಕಿ.ಮೀ ಕಡಿಮೆಯಾಗಲಿದೆ. ಹುಬ್ಬಳ್ಳಿ, ಬೆಳಗಾವಿ, ಗೋವಾ, ಮುಂಬೈಗೆ ಸಂಚರಿಸುವ ರೈಲು ಒಂದು ಗಂಟೆ ಮುಂಚಿತವಾಗಿ ಗಮ್ಯ ತಲುಪಲು ನೆರವಾಗಲಿದೆ. ಈ ಯೋಜನೆಗೆ 2009ರಲ್ಲಿ ಒಪ್ಪಿಗೆ ಸೂಚಿಸಿದ ರಾಜ್ಯ ಸರ್ಕಾರ ಶೇ 50ರಷ್ಟು ಯೋಜನಾ ವೆಚ್ಚವನ್ನು ಭರಿಸುವುದಾಗಿ ಆಶ್ವಾಸನೆ ನೀಡಿತ್ತು.

ದಾವಣಗೆರೆ ಜಿಲ್ಲೆಯ 237 ಎಕರೆ, ಚಿತ್ರದುರ್ಗ ಜಿಲ್ಲೆಯ 1,028 ಎಕರೆ ಹಾಗೂ ತುಮಕೂರು ಜಿಲ್ಲೆಯ 1,005 ಎಕರೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ರೈಲು ಮಾರ್ಗದ ವಿನ್ಯಾಸ ಹಲವು ಬಾರಿ ಬದಲಾಗಿದ್ದರಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಭೂಸ್ವಾಧೀನ ವಿಳಂಬವಾಗಿದೆ. ಮಾರ್ಚ್ ಅಂತ್ಯದ ವೇಳೆಗೆ ಭೂಸ್ವಾಧೀನ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.