ಚಿಕ್ಕಜಾಜೂರು: ಕಳೆದ ವಾರದಿಂದ ಬಿಟ್ಟು ಬಿಡದೆ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಹರ್ಷ ತುಂಬಿದೆ.
ಚಿಕ್ಕಜಾಜೂರು ಸೇರಿ ಬಿ.ದುರ್ಗ ಹೋಬಳಿಯಾದ್ಯಂತ ಬಿಟ್ಟು ಬಿಡದ ಮಳೆಯಾಗುತ್ತಿದ್ದು, ಬಿತ್ತನೆ ಮಾಡಿರುವ ಮೆಕ್ಕೆಜೋಳ, ಅವರೆ, ಹತ್ತಿ ಬೆಳೆಗಳಿಗೆ ಹದವಾದ ಹಸಿಯಾಗಿದ್ದು, ಪೈರುಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಒಂದೂವರೆ ತಿಂಗಳ ಹಿಂದೆ ಬಿತ್ತನೆ ಮಾಡಿದ್ದ ಮೆಕ್ಕೆಜೋಳಕ್ಕೆ ರೈತರು ಸೋಮವಾರ ಹಾಗೂ ಮಂಗಳವಾರ ಮಳೆ ಸಿಂಚನದ ನಡುವೆಯೇ ಕೂಲಿ ಕಾರ್ಮಿಕರೊಂದಿಗೆ ಮೇಲು ಗೊಬ್ಬರವನ್ನು ಹಾಕುತ್ತಿದ್ದುದು ಕಂಡು ಬಂದಿತು.
ಈಗಾಗಲೇ ಎರಡು ಅಡಿಗೂ ಎತ್ತರ ಬೆಳೆದು ನಿಂತಿರುವ ಮೆಕ್ಕೆಜೋಳಕ್ಕೆ, ಬುಡಗುಂಟೆ ಹೊಡೆಯುವ ಯೋಜನೆಯಲ್ಲಿದ್ದ ರೈತರಿಗೆ ಕಳೆದ ಮೂರು ದಿನಗಳಿಂದ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಿನ್ನೆಡೆಯಾಗಿದೆ. ಈ ಮಳೆ ಹೀಗೆ ಮುಂದುವರಿದಲ್ಲಿ, ಕಳೆಯನ್ನು ತೆಗೆಯುವುದು ಕಷ್ಟವಾಗಬಹುದು ಎಂಬುದು ರೈತರ ಲೆಕ್ಕಾಚಾರವಾಗಿದೆ.
ಸೋಮವಾರ ರಾತ್ರಿ ಹಾಗೂ ಮಂಗಳವಾರ ಮುಂಜಾನೆಯಿಂದ ಎಡಬಿಡದೆ ಸೋನೆ ಮಳೆ ಜತೆ ಬಿರುಸಿನ ಮಳೆಯೂ ಸುರಿಯುತ್ತಿದ್ದು, ತೋಟಗಳ ಬೆಳೆಗಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕಳೆದೊಂದು ವಾರದಿಂದ ಮಳೆ ಆಗುತ್ತಿರುವುದರಿಂದ ಅಡಿಕೆ ಹಾಗೂ ತೆಂಗು ಬೆಳೆಗಾರರು ತಮ್ಮ ತೋಟಗಳಲ್ಲಿ ಗುಣಿ ಮಾಡಿ, ಗೊಬ್ಬರ ಹಾಕುತ್ತಿದ್ದಾರೆ.
‘ಕಳೆದ ವರ್ಷ ಸರಿಯಾದ ಮಳೆಯಾಗದೆ, ಗೊಬ್ಬರ ಹಾಕುವುದು ತಡವಾಯಿತು. ಹಾಕಿದರೂ ನಂತರ, ಉತ್ತಮ ಮಳೆ ಆಗದೆ ಅಡಿಕೆ ಹಾಗೂ ತೆಂಗಿನ ಈಚು ಹಾಗೂ ಹರಳುಗಳು ಉದುರಿ, ಇಳುವರಿ ಕುಂಠಿತವಾಗಿತ್ತು. ಆದರೆ, ಈ ಬಾರಿ ಜೂನ್ ತಿಂಗಳಲ್ಲಿ ಸ್ವಲ್ಪ ಬಿಡುವು ನೀಡಿದ್ದ ಮಳೆ ಈಗ ನಿತ್ಯವೂ ಬರುತ್ತಿದೆ. ಅದರಲ್ಲೂ ಮೇಲು ಗೊಬ್ಬರ ಹಾಕಿದ ಮೇಲೆ ಮಳೆ ಆಗುತ್ತಿರುವುದು ತೃಪ್ತಿ ತಂದಿದೆ’ ಎನ್ನುತ್ತಾರೆ ರೈತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.