ಹೊಸದುರ್ಗ: ಮೂರು ವಾರಗಳಿಂದ ತಾಲ್ಲೂಕಿನಲ್ಲಿ ಮಳೆ ಬಿಡುವು ಕೊಟ್ಟಿದ್ದು, ಈರುಳ್ಳಿ ಬೆಳೆ ಕೊಯ್ಲು ಜೋರಾಗಿ ನಡೆಯುತ್ತಿದೆ.
ಈ ಬಾರಿ ಸಕಾಲಕ್ಕೆ ಪೂರ್ವ ಮುಂಗಾರು ಮಳೆ ಬಂದಿದ್ದರಿಂದ ಉತ್ತಮ ಬೆಳೆ ಬೆಳೆಯಬಹುದು ಎಂಬ ನಿರೀಕ್ಷೆಯಲ್ಲಿ ತಾಲ್ಲೂಕಿನ ಹಲವು ಗ್ರಾಮಗಳ ರೈತರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದರು. ಬಿತ್ತನೆ ಮಾಡಿದ್ದ ಸಂದರ್ಭದಲ್ಲಿ ಮೂರು ವಾರ ಮಳೆ ಬಾರದ್ದರಿಂದ ಬೀಜ ಮೊಳಕೆಯೊಡೆದಿರಲಿಲ್ಲ. ಇದರಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದರು.
ತಿಂಗಳ ಬಳಿಕ ಸುರಿದ ಹದ ಮಳೆಗೆ ಬಿತ್ತನೆಯಾಗಿದ್ದ ಈರುಳ್ಳಿ ಕೆಲವೆಡೆ ಮೊಳಕೆಯೊಡೆಯಿತು. ಕೆಲವೆಡೆ ಮಳೆ ಬಂದರೂ ಬೀಜ ಮೊಳಕೆಯೊಡೆದಿರಲಿಲ್ಲ. ಕೆಲವು ರೈತರು ಮತ್ತೆ ಸಾವಿರಾರು ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೀಜ ಖರೀದಿಸಿ ಬಿತ್ತನೆ ಮಾಡಿದ್ದರು. ಕಾಲ, ಕಾಲಕ್ಕೆ ಮಳೆ ಬಂದಿದ್ದರಿಂದ ಬೆಳೆಯು ಉತ್ತಮವಾಗಿ ಬೆಳೆದಿತ್ತು. ಉತ್ತಮ ಇಳುವರಿಯ ನಿರೀಕ್ಷೆಯಲ್ಲಿ ಬೆಳೆಯ ಕಳೆ ತೆಗೆಸುವುದು, ಮೇಲುಗೊಬ್ಬರ ಹಾಕುವುದು, ಔಷಧ ಸಿಂಪಡಿಸುವ ಮೂಲಕ ಬೆಳೆಗಾರರು ಬೆಳೆಯ ಉಪಚಾರ ಮಾಡಿದ್ದರು.
ಆದರೆ, ಆಗಸ್ಟ್, ಸೆಪ್ಟೆಂಬರ್ ಮೊದಲೆರಡು ವಾರ ಸುರಿದ ಮಳೆಗೆ ತಗ್ಗು ಪ್ರದೇಶದ ಈರುಳ್ಳಿ ಬೆಳೆಗೆ ಕೊಳೆರೋಗ ತಗುಲಿತ್ತು. ರೋಗಬಾಧೆಯಿಂದ ಕೆಲವೆಡೆ ಈರುಳ್ಳಿ ಬೆಳೆ ಜಮೀನಿನಲ್ಲಿಯೇ ಕೊಳೆಯುವಂತಾಗಿತ್ತು. ಇದರಿಂದಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ರೈತರನ್ನು ಚಿಂತೆಗೀಡು ಮಾಡಿತ್ತು. ಸೆಪ್ಟೆಂಬರ್ ಮೂರನೇ ವಾರದಿಂದ ಮಳೆ ಬಿಡುವು ಕೊಟ್ಟಿದ್ದರಿಂದ ರೋಗಕ್ಕೆ ತುತ್ತಾಗಿದ್ದ ಈರುಳ್ಳಿ ಗೆಡ್ಡೆ ಕೊಂಚ ಚೇತರಿಸಿಕೊಳ್ಳಲು ನೆರವಾಗಿತ್ತು.
‘ಮಾರುಕಟ್ಟೆಯಲ್ಲಿ ಈರುಳ್ಳಿ ದರ ₹2,000ದಿಂದ ₹3,000ದವರೆಗೂ ಏರಿಕೆಯಾಗಿದೆ. ಇದರಿಂದ ಬೆಳೆ ಇರುವ ಕೆಲವು ಅಲ್ಪ ಸಮಾಧಾನಗೊಂಡಿದ್ದಾರೆ. ಮತ್ತೆ ಮಳೆ ಸುರಿದರೆ ಬೆಳೆ ಕೈಗೆ ಸಿಗುವುದಿಲ್ಲ ಎಂಬ ಉದ್ದೇಶದಿಂದ ಇರುವ ಸ್ವಲ್ಪ ಬೆಳೆಯನ್ನು ರೈತರು ಕೀಳಿಸುತ್ತಿದ್ದಾರೆ. ಕೂಲಿ ಕಾರ್ಮಿಕರ ಸಹಾಯದಿಂದ ಈರುಳ್ಳಿ ಗೆಡ್ಡೆ ಕೊಯ್ದು ಪಾಕೆಟ್ ಮಾಡಿಸಿ, ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ’ ಎನ್ನುತ್ತಾರೆ ಈರುಳ್ಳಿ ಬೆಳೆಗಾರ ವೆಂಕಟೇಶ್, ಕುಮಾರಪ್ಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.