ADVERTISEMENT

ಇಸಾಮುದ್ರ: ಮಳೆ ನೀರು ಸಂಗ್ರಹದಿಂದ ತೆರೆಯಿತು ಕೃಷಿ ಹಾದಿ

ಇಸಾಮುದ್ರ ಗ್ರಾಮದಲ್ಲಿ ರೈತ ಎಂ.ಎಸ್. ಪ್ರಭು ಅವರ ಯಶಸ್ವಿ ಅಡಿಕೆ ಬೇಸಾಯ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 6:29 IST
Last Updated 20 ಅಕ್ಟೋಬರ್ 2021, 6:29 IST
ಎಂ.ಎಸ್‌. ಪ್ರಭು
ಎಂ.ಎಸ್‌. ಪ್ರಭು   

ಇಸಾಮುದ್ರ (ಭರಮಸಾಗರ): ‘ಚನ್ನಗಿರಿ, ಗುಂಡೇರಿ ಭಾಗದ ನಮ್ಮ ಸ್ನೇಹಿತರ ತೋಟಗಳನ್ನು ನೋಡಿ ನಾನೂ ತೋಟ ಮಾಡಬೇಕೆಂಬ ಹೆಬ್ಬಯಕೆ ಉಂಟಾಯಿತು. ನಾನು ತೋಟ ಮಾಡಲು ಮುಂದಾದೆ.’

ಹೀಗೆ ಹೇಳಿದವರು ಇಸಾಮುದ್ರ ಗ್ರಾಮದ ರೈತ ಎಂ.ಎಸ್. ಪ್ರಭು. ‘ಈ ಬರದ ನಾಡಿನಲ್ಲಿ ಮಳೆ ಆಗೊಮ್ಮೆ ಈಗೊಮ್ಮ ವರ್ಷಕ್ಕೆ ಕೇವಲ 3-4 ಬಾರಿ ಬಂದರೆ ಹೆಚ್ಚು. ಮಳೆ ಬಂತು ಎಂದರೆ ಗಂಡ ಭೇರುಂಡ ಪಕ್ಷಿ ನೋಡಿದಂತೆ ಸಂತೋಷ ಆಗುತ್ತಿದ್ದ ಸಂದರ್ಭದಲ್ಲಿ ನಾನು ತೋಟ ಮಾಡಲು ಕೈಹಾಕಿ ಯಶಸ್ಸು ಗಳಿಸಿದ್ದೇನೆ.‌‌‌ ಹಿಂದೆ ನಕ್ಕವರೆಲ್ಲ ಈಗ ತೋಟ ಮಾಡಲು ಬರುತ್ತಿದ್ದಾರೆ ಎಂದು ಹೆಮ್ಮೆಯಿಂದ ತಮ್ಮ ಅನುಭವದ ಬುತ್ತಿಯನ್ನು ಬಿಚ್ಚಿಟ್ಟರು ಅವರು.

ಓದಿದ್ದು ಸ್ನಾತಕೋತ್ತರ ಪದವಿ. ಕೆಲಸಕ್ಕೆ ಪ್ರಯತ್ನಪಟ್ಟರೂ, ಕೆಲವು ಕಡೆ ಕೆಲಸಕ್ಕೆ ಸೇರಿದರೂ ಅದು ಸಂತೃಪ್ತಿ ತಂದು ಕೊಡಲಿಲ್ಲ. ಇನ್ನೊಬ್ಬರ ಕೈಕೆಳಗೆ ಜೀವನ ಮಾಡುವುದು ಬೇಡ, ತಂದೆಯವರು ಮಾಡಿದ ಜಮೀನು ಇದೆ ಅದನ್ನೇ ಅಭಿವೃದ್ಧಿ ಮಾಡೋಣ ಎಂಬ ಯೋಚನೆ ಇವರಿಗೆ ಬಂದಿದ್ದು 1995-96ರಲ್ಲಿ. ಆಗ ಈ ಭಾಗದಲ್ಲಿ ಬರಗಾಲ ಮೆರೆಯುತ್ತಿತ್ತು. ಇಂತಹ ವೇಳೆಯಲ್ಲಿ ಅಡಿಕೆ ತೋಟ ಮಾಡಬೇಕೆಂಬ ಹುಚ್ಚು ಕಲ್ಪನೆ ಮೂಡಿತು. ಆಗ ಸಹಕರಿಸಿದವರು ಇವರ ತಂದೆ–ತಾಯಿ. ಪತ್ನಿ ಹಾಗೂ ಸಹೋದರನ ಪತ್ನಿ ತಮ್ಮ ಒಡವೆಗಳನ್ನು ಒತ್ತೆ ಇಟ್ಟು ಇನ್ನಷ್ಟು ಸಾಲ ಮಾಡಿ ಕೊಳವೆಬಾವಿ ಕೊರೆಸಲು ಮುಂದಾದರು. ಬೆಂಗಳೂರು, ಚೆನೈ ಹೈದರಾಬಾದ್‌ನ ಪ್ರಖ್ಯಾತ ಕೊಳವೆ ಬಾವಿ ತಜ್ಞರು ತೋರಿಸಿದ ಸ್ಥಳಗಳಲ್ಲಿ 10 ಕೊಳವೆಬಾವಿಗಳನ್ನು 800ರಿಂದ 1,000 ಅಡಿಗಳವರೆಗೆ ತೋಡಿಸಿದರೂ ನೀರು ಬರಲಿಲ್ಲ. ಬಹಳ ಪ್ರಯತ್ನಪಟ್ಟು ಟ್ಯಾಂಕರ್ ಮೂಲಕ ನೀರು ಹರಿಸಿ ಗಿಡಗಳನ್ನು ಉಳಿಸಲು ಯತ್ನಿಸಿದರು.

ADVERTISEMENT

ಹತ್ತು ಎಕರೆ ಜಮೀನಿನಲ್ಲಿ ಮೊದಲು 5 ಎಕರೆಯಲ್ಲಿ ಎಲೆಬಳ್ಳಿ, ಅಡಿಕೆ ಹಾಕಿದರು. ಅಡಿಕೆ ಗಿಡಗಳು ದೊಡ್ಡ
ದಾದವು. ಈಗ 2,500 ಗಿಡಗಳು ಫಲ ನೀಡುತ್ತಿವೆ. ಉಳಿದ ಜಾಗದಲ್ಲಿ ಮೆಕ್ಕೆಜೋಳ, ಸ್ವಲ್ಪ ಭಾಗದಲ್ಲಿ ತೊಗರಿ, ಅವರೆ, 25 ತೆಂಗು, ಮಾವು, ಪೇರಲ, ಮನೆಗಾಗುವಷ್ಟು ತರಕಾರಿ ಮತ್ತು ಸೊಪ್ಪನ್ನು ಬೆಳೆಯುತ್ತಿದ್ದಾರೆ.

‘ಕೊಳವೆ ಬಾವಿಗಳು ವಿಫಲವಾದ್ದರಿಂದ ನೀರಿನ ಒರತೆ ಹೆಚ್ಚಿಸಲು ಮಳೆ ನೀರು ತಡೆ ಹಿಡಿಯುವ ಮಾರ್ಗ ಕಂಡು ಕೊಳ್ಳಲಾಯಿತು. ಹೊಲದಲ್ಲಿ ಅಲ್ಲಲ್ಲಿ ಬದು ನಿರ್ಮಾಣ, ಹೊಲದ ಸುತ್ತಲೂ ಏರಿ ನಿರ್ಮಾಣ, ಎರಡು ಎಕರೆ ಕರಲು ಭೂಮಿಯಲ್ಲಿ ಮಿನಿ ಚೆಕ್ ಡ್ಯಾಂ ನಿರ್ಮಾಣ ಮಾಡಿ ನೀರು ಸಂಗ್ರಹಿಸಲು ಆರಂಭಿಸಿದೆವು. ನಂತರ ಈಗ ಎರಡು ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗಿದೆ. ಮಳೆ ನೀರನ್ನು ಸಂಗ್ರಹಿಸಿದ್ದರಿಂದ ಬೋರ್‌ಗಳಲ್ಲಿ ಒಳ ಹರಿವು ಹೆಚ್ಚಾಗಿದ್ದರಿಂದ ಕೃಷಿ ಮಾಡಲು ಆಸಕ್ತಿ ಹೆಚ್ಚಾಯಿತು. ಇಂದು ನೆಮ್ಮದಿಯ ಜೀವನ ಮಾಡಲು ಭಗವಂತ ಕೃಪೆ ತೋರಿದ್ದಾನೆ’ ಎಂದು ಪ್ರಭು ವಿವರಿಸಿದರು.

‘ಈ ವರ್ಷ ಪಂಜಯ್ಯನ ಹಟ್ಟಿಯ ಬಳಿ ಎರಡು ಎಕರೆ ಜಮೀನು ಖರೀದಿಸಿದ್ದೇವೆ. 4 ವರ್ಷಗಳಿಂದ ಮಾರಾಟ ಮಾಡದೇ ಸಂಗ್ರಹಿಸಿದ್ದ ಅಡಿಕೆಯನ್ನು ಕ್ವಿಂಟಲ್‌ಗೆ ₹ 44 ಸಾವಿರದಂತೆ ಮಾರಾಟ ಮಾಡಿದ್ದೇವೆ. ಇದರಿಂದ ₹ 29 ಲಕ್ಷ ಆದಾಯ ಗಳಿಸಿದ್ದೇವೆ. ಕಳೆದ ವರ್ಷ ನಾನು ಮತ್ತು ನನ್ನ ಸಹೋದರ, ನಮ್ಮೆಲ್ಲ ಕುಟುಂಬದವರೂ ಸೇರಿ ಅಡಿಕೆ ಕೊಯ್ಲು ಮಾಡುತ್ತಿದ್ದೆವು. ಈ ವರ್ಷ ಕೊರೊನಾ ಇದ್ದ ಕಾರಣ ₹ 14 ಲಕ್ಷಕ್ಕೆಖೇಣಿ ಕೊಟ್ಟಿದ್ದೇವೆ. ಅಡಿಕೆ ಬೆಳೆ ಉತ್ತಮವಾಗಿದೆ. ಮುಂದೆ ಎರಡು ಎಕರೆಯಲ್ಲಿ ಇಸಾಮುದ್ರ ಕೆರೆಯಲ್ಲಿಯ ಹೂಳು ತೆಗೆಯುವ ಮಣ್ಣನ್ನು ಹಾಕಿಸಿ ಆ ಜಾಗದಲ್ಲಿ ನುಗ್ಗೆ ಹಾಕಬೇಕು ಎಂಬ ಯೋಜನೆ ಇದೆ. ಇದು ಕಡಿಮೆ ವೆಚ್ಚ ಹಾಗೂ ಒಳ್ಳೆಯ ಆದಾಯ ದಾಯಕ ಬೆಳೆಯಾಗಿದೆ’ ಎಂದು ಹೇಳಿದರು.

ತಂದೆ ಸಿದ್ದಪ್ಪ, ತಾಯಿ ಕಮಲಮ್ಮ, ಪತ್ನಿ ವಿಜಯಲಕ್ಷ್ಮೀ, ಸಹೋದರ ಎಂ.ಎಸ್. ಶಿವಪ್ರಕಾಶ್, ಅವರ ಪತ್ನಿ ಎಲ್.ಜಿ. ಶೋಭಾ, ಶಿವರಾಜ್ ಪಾಟೀಲ್ ಇವರೆಲ್ಲರ ಸಹಕಾರ ನನಗೆ ಬಹಳ ಇದ್ದ ಕಾರಣ ಈ ಸಾಧನೆ ಆಯಿತು ಎಂದು ಹರ್ಷದಿಂದ
ಹೇಳಿಕೊಂಡರು.

‘ಇನ್ನು ಕೊಳವೆಬಾವಿಗೆ ಹಣ ಹಾಕಬೇಕೆಂದಿಲ್ಲ’

ಸಿರಿಗೆರೆ ಸ್ವಾಮೀಜಿಯವರ ಕೃಪೆಯಿಂದ ಭರಮಸಾಗರದ ಕೆರೆಗೆ ನೀರು ಬಂದಿರುವುದರಿಂದ ಇನ್ನು ಕೊಳವೆ ಬಾವಿಗಳು ಲೀಲಾಜಾಲವಾಗಿ ನೀರು ಎತ್ತುತ್ತವೆ. ಇನ್ನು ಮುಂದೆ ಕೊಳವೆಬಾವಿಗೆಂದು ಹಣ ಹಾಕುವ ಗೋಜು ಇಲ್ಲ. ಅದೇ ಹಣದಿಂದ ತೋಟಕ್ಕೆ ಬೇಕಾದ ಗೊಬ್ಬರ, ಮಣ್ಣು ಹಾಗೂ ಇತರ ವಾಣಿಜ್ಯ ಬೆಳೆಗಳಿಗೆ ವಿನಿಯೋಗಿಸುತ್ತೇವೆ.

– ಎಂ.ಎಸ್. ಪ್ರಭು,ಇಸಾಮುದ್ರ ಗ್ರಾಮ

(ಎಂ.ಎಸ್‌. ಪ್ರಭು, ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ– 9632930035)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.