ಚಿತ್ರದುರ್ಗ: ಈರುಳ್ಳಿಗೆ ಬೆಂಬಲ ಬೆಲೆ ಘೋಷಣೆ ಹಾಗೂ ಮಳೆಯಿಂದ ಹಾನಿಯಾಗಿರುವ ಬೆಳೆಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ರೈತರು, ಜಿಲ್ಲೆಯಲ್ಲಿ ಮಳೆಯಿಂದ ಈರುಳ್ಳಿ ಬೆಳೆ ತೀವ್ರ ಹಾನಿಗೆ ತುತ್ತಾಗಿದೆ. ಆದ್ದರಿಂದ ಕೂಡಲೇ ಎಕರೆಗೆ ₹ 50,000 ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಈರುಳ್ಳಿಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ. ಎರಡು ವರ್ಷಗಳಿಂದ ಸುರಿದ ಮಳೆಗೆ ಈರುಳ್ಳಿ ಬೆಳೆ ಹಾನಿಯಾಗಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ ಎಂದು ಸಮಸ್ಯೆ ತೆರೆದಿಟ್ಟರು.
ಈ ವರ್ಷವೂ ಸಹ ಮಳೆ ಅಧಿಕವಾಗಿ ಕೊಳೆರೋಗ ಮತ್ತು ಹಳದಿ ರೋಗದಿಂದ ಇಳುವರಿ ಕುಂಠಿತವಾಗಿದೆ. ಒಂದು ಎಕರೆ ಈರುಳ್ಳಿ ಬೆಳೆಯಲು ಸುಮಾರು ₹ 40,000ದಿಂದ 50,000 ವ್ಯಯಿಸಬೇಕು. ಆದ್ದರಿಂದ ಹಾನಿಯಾಗಿರುವ ಈರುಳ್ಳಿ ಬೆಳೆಗೆ ಪರಿಹಾರವಾಗಿ ಎಕರೆಗೆ ₹ 50,000 ಘೋಷಣೆ ಮಾಡಿ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು.
ಬೆಲೆ ಕುಸಿತದ ಕಾರಣ ರೈತರು ಬೆಳೆಯನ್ನು ಕಟಾವು ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಕಟಾವುಗೊಳಿಸಿದರೆ ಆರ್ಥಿಕ ನಷ್ಟ ಹೆಚ್ಚಾಗಲಿದೆ ಎಂದು ಬೆಳೆಯನ್ನು ಜಮೀನುಗಳಲ್ಲಿಯೇ ಬಿಟ್ಟಿದ್ದಾರೆ. ಆದ್ದರಿಂದ ತುರ್ತಾಗಿ ಕರ್ನೂಲ್ ಮಾದರಿಯಲ್ಲಿ ಬೆಂಬಲ ಬೆಲೆ ಘೋಷಣೆ ಮಾಡಿ ರೈತರಿಂದ ಈರುಳ್ಳಿ ಖರೀದಿ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಘಟಕದ ಕಾರ್ಯದರ್ಶಿ ಕಬ್ಬಿಗೆರೆ ನಾಗರಾಜ್, ಜಿಲ್ಲಾ ಘಟಕದ ಅಧ್ಯಕ್ಷ ಡಿಎಸ್ ಹಳ್ಳಿ ಮಲ್ಲಿಕಾರ್ಜುನ್, ಮುಖಂಡರಾದ ನಿಜಲಿಂಗಪ್ಪ, ರವಿ, ಶಿವು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.