ADVERTISEMENT

ಉರುಮೆ, ಕಹಳೆ ಕಲಾವಿದನಿಗೆ ರಾಜ್ಯೋತ್ಸವ ಗೌರವ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 5:45 IST
Last Updated 31 ಅಕ್ಟೋಬರ್ 2025, 5:45 IST
ತಮಗೆ ಬಂದಿರುವ ಪ್ರಶಸ್ತಿ, ಫಲಕಗಳ ಜೊತೆ ಉರುಮೆ ಹನುಮಂತಪ್ಪ
ತಮಗೆ ಬಂದಿರುವ ಪ್ರಶಸ್ತಿ, ಫಲಕಗಳ ಜೊತೆ ಉರುಮೆ ಹನುಮಂತಪ್ಪ   

ಸಿರಿಗೆರೆ: ಕಳೆದ 60 ವರ್ಷಗಳಿಂದಲೂ ಉರುಮೆ, ಕಹಳೆ ನುಡಿಸಾಣಿಕೆಯನ್ನೇ ಬದುಕಿನ ಭಾಗವಾಗಿಸಿಕೊಂಡಿದ್ದ ಅಪರೂಪದ ಜಾನಪದ ಕಲಾವಿದ, ತಾಲ್ಲೂಕಿನ ಚೀಳಂಗಿ ಗ್ರಾಮದ ಹನುಮಂತಪ್ಪ ಮಾರಪ್ಪ ಅವರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.

81 ವರ್ಷ ವಯಸ್ಸಿನ ಹನುಮಂತಪ್ಪ ಸದ್ಯ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ. ಇಂತಹ ಸಂದರ್ಭದಲ್ಲಿ ಹನುಮಂತಪ್ಪ ಅವರ ಸೇವೆಯನ್ನು ಸರ್ಕಾರ ಗುರುತಿಸಿರುವುದು ಜಿಲ್ಲೆಯ ಕಲಾ ಬಳಗಕ್ಕೆ ಸಂತಸ ತಂದಿದೆ.

ದೇವತಾ ಕಾರ್ಯಗಳಲ್ಲಿ ಚರ್ಮವಾದ್ಯ ಉರುಮೆಗೆ ವಿಶಿಷ್ಟ ಸ್ಥಾನವಿದೆ. ಬಾಲ್ಯದಿಂದಲೇ ಉರುಮೆ ಮತ್ತು ಕಹಳೆ ನುಡಿಸುವತ್ತ ತಮ್ಮ ಚಿತ್ತ ಹರಿಸಿದರು. ವಾದ್ಯಗಳನ್ನೇ ತಮ್ಮ ಬದುಕು ಮಾಡಿಕೊಂಡರು. ಈ ಕಾರಣಕ್ಕೆ ಅವರು ‘ಉರುಮೆ ಹನುಮಂತಪ್ಪ’ ಎಂದೇ ಪ್ರಸಿದ್ಧಿ ಪಡೆದರು.

ADVERTISEMENT

ರಾಜ್ಯದ ಹಲವು ಕಡೆ ಜಾನಪದ ಕಲಾಮೇಳ, ಜಾನಪದ ಸ್ಪರ್ಧೆಗಳಲ್ಲಿ ಭಾಗಿಯಾಗಿ ಹಲವು ಬಹುಮಾನ ಗಳಿಸಿದ್ದಾರೆ. ಹಳ್ಳಿಯ ಪರಿಸರದಲ್ಲಿ ಹಲವು ಬಾಲಕರಿಗೆ ಉರುಮೆ ಬಾರಿಸುವ ಕಲೆಯನ್ನು ಕಲಿಸಿದ್ದಾರೆ. ಉರುಮೆ ಮತ್ತು ಕಹಳೆಯನ್ನು ಬ್ಯಾಂಡ್‌ಸೆಟ್‌ ಕಾರ್ಯಕ್ರಮಗಳಲ್ಲೂ ನುಡಿಸಿ ಪ್ರಯೋಗ ಮಾಡಿದ್ದಾರೆ. ವಾದ್ಯಗಳನ್ನೇ ನಂಬಿ ಬದುಕುತ್ತಿರುವ ಅವರು ಬದುಕಿನ ರಥ ಸಾಗಿಸಲು ಕೂಲಿ ಕೆಲಸವನ್ನೂ ಮಾಡುತ್ತಿದ್ದರು. ಕಾರ್ಯಕ್ರಮಗಳು ಇಲ್ಲದಿದ್ದಾಗ ಕೂಲಿ ಕೆಲಸವೇ ಆಧಾರವಾಗಿತ್ತು.

ಜಾನಪದ ಕ್ಷೇತ್ರದಲ್ಲಿನ ಅವರ ಸಾಧನೆಗೆ ಹಲವು ಸಂಘಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ ಅವರನ್ನು ಅರಸಿ ಬಂದಿವೆ.

‘60 ವರ್ಷಗಳ ಕಾಲದ ನನ್ನ ಕಲೆಯನ್ನು ಗುರುತಿಸಿ ಸರ್ಕಾರವು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಇಂದು ನನಗೆ ಬಹಳ ಸಂತೋಷವಾಗಿದೆ. ಉರುಮೆ ಮತ್ತು ಕಹಳೆ ಕಲೆಯನ್ನು ರಾಜ್ಯದ ಹಲವು ಕಡೆ ಪ್ರದರ್ಶಿಸಿದ್ದೇನೆ, ಜನರು ನನ್ನ ಕಲೆಯಿಂದ ಖುಷಿಪಟ್ಟಿದ್ದಾರೆ’ ಎಂದು ಹೇಳುತ್ತಾ ಹನುಮಂತಪ್ಪ ಭಾವುಕರಾದರು.

ಬೆಂಗಳೂರಿನ ಬಸವೇಶ್ವರ ಪ್ರತಿಮೆ ಮುಂಬದಿ ಉರುಮೆ ನುಡಿಸುತ್ತಿರುವ ಹನುಮಂತಪ್ಪ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.