ಚಿತ್ರದುರ್ಗ: ‘ರಾತ್ರಿ ಮಲಗಿದ್ದಾಗ ಬೀಳುವ ಕನಸನ್ನೇ ನಿಜ ಅಂದುಕೊಂಡು ಬೆಳಿಗ್ಗೆ ಜನರಿಗೆ ಹೇಳುವುದನ್ನು ವಿಜಯೇಂದ್ರ ರೂಢಿ ಮಾಡಿಕೊಂಡಿದ್ದಾರೆ. ಏಕೆಂದರೆ ಬಿಜೆಪಿಯವರು ಹಿತವಾಗಿ ಹೇಳುವ ಸುಳ್ಳು ಇಂಪಾಗಿ ಕೇಳಿಸುತ್ತದೆ’ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಕುಟುಕಿದರು.
‘ಸದ್ಯಕ್ಕೆ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಆದರೂ ದಸರಾ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ ಎಂದು ಹೇಳುವುದು ಅವರಿಗೆ ಮಾಮೂಲಿಯಾಗಿದೆ. ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ಪರಿಣಿತರು’ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
‘ಸಿದ್ದರಾಮಯ್ಯ ಅವರೇ ಐದು ವರ್ಷ ಅಧಿಕಾರ ನಡೆಸುವುದರಿಂದ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ವಿಚಾರ ಈಗ ಪ್ರಸ್ತುತವಲ್ಲ. ದಲಿತ ನಾಯಕರು ಮುಖ್ಯಮಂತ್ರಿ, ಪ್ರಧಾನಿ, ರಾಷ್ಟ್ರಪತಿ ಸಹ ಆಗಬಹುದು. ಸತೀಶ್ ಜಾರಕಿಹೊಳಿ, ಪರಮೇಶ್ವರ್ ಭೇಟಿ ವೈಯಕ್ತಿಕವಲ್ಲ’ ಎಂದು ಸ್ಪಷ್ಟಪಡಿಸಿದರು.
‘ಮುಡಾ ಪ್ರಕರಣ ಅದರ ಪಾಡಿಗೆ ಅದು ನಡೆಯುತ್ತಿದೆ. ಬಿಜೆಪಿ, ಜೆಡಿಎಸ್ ನಾಯಕರ ನೂರಾರು ಹಗರಣಗಳಿವೆ. ಮೊದಲು ಅದರ ಬಗ್ಗೆ ಮಾತಾಡೋಣ’ ಎಂದರು.
‘ಜಾತಿ ಜನಗಣತಿ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುತ್ತದೆ. ವರದಿ ಬಂದ ಮೇಲೆ ಏನಿದೆ ಎಂಬುದು ತಿಳಿಯಲಿದೆ. ಗಣತಿಯಲ್ಲಿ ತಪ್ಪಿದ್ದರೆ ಸರಿ ಮಾಡಿಕೊಳ್ಳಬಹುದು. ಸಲಹೆಗೆ ಎಲ್ಲರಿಗೂ ಮುಕ್ತ ಅವಕಾಶವಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.