ADVERTISEMENT

ಚಿತ್ರದುರ್ಗ: ರಂಗಯ್ಯನದುರ್ಗ ಡ್ಯಾಂ ಭರ್ತಿಗೆ ಕ್ಷಣಗಣನೆ

ಭರ್ತಿಗೆ ಅರ್ಧ ಅಡಿ ಬಾಕಿ, ಹರಿದು ಆಂಧ್ರ ಸೇರುವ ನೀರು

ಕೊಂಡ್ಲಹಳ್ಳಿ ಜಯಪ್ರಕಾಶ
Published 30 ಆಗಸ್ಟ್ 2025, 7:46 IST
Last Updated 30 ಆಗಸ್ಟ್ 2025, 7:46 IST
ಮೊಳಕಾಲ್ಮುರು ತಾಲ್ಲೂಕಿನ ರಂಗಯ್ಯನದುರ್ಗ ಜಲಾಶಯ ಭರ್ತಿಯಾಗಿರುವುದು
ಮೊಳಕಾಲ್ಮುರು ತಾಲ್ಲೂಕಿನ ರಂಗಯ್ಯನದುರ್ಗ ಜಲಾಶಯ ಭರ್ತಿಯಾಗಿರುವುದು   

ಮೊಳಕಾಲ್ಮುರು: ‘ತಾಲ್ಲೂಕಿನ ಜೀವನಾಡಿ’ ಎಂದು ಕರೆಸಿಕೊಳ್ಳುವ ರಂಗಯ್ಯನದುರ್ಗ ಜಲಾಶಯ ಭರ್ತಿಗೆ ಕ್ಷಣಗಣನೆ ಅರಂಭವಾಗಿದ್ದು, ಯಾವ ಕ್ಷಣದಲ್ಲೂ ಬೇಕಾದರೂ ನೀರು ಹೊರಬಿಡಲು ಸಿದ್ಧತೆ ನಡೆದಿದೆ. 

ಯಾವುದೇ ಶಾಶ್ವತ ನೀರಿನ ಮೂಲ ಹೊಂದದ ಈ ಜಲಾಶಯ ಜಗಳೂರು ಹಾಗೂ ಕೂಡ್ಲಿಗಿ ತಾಲ್ಲೂಕಿನ ಹಳ್ಳಕೊಳ್ಳಗಳ ನೀರನ್ನು ಆಶ್ರಯಿಸಿದೆ. ಈ ವರ್ಷ ಜಲಾಶಯದ ಹಿಂಬದಿ ಪಾತ್ರದಲ್ಲಿ ಉತ್ತಮ ಮಳೆಯಾಗಿರುವ ಜತೆಗೆ ಕೂಡ್ಲಿಗಿ, ಜಗಳೂರು ತಾಲ್ಲೂಕಿನ ಕೆರೆಗಳು ನೀರು ತುಂಬಿಸುವ ಯೋಜನೆಗೆ ಒಳಗಾದ ಪರಿಣಾಮ ಅವಧಿಗೂ ಮುನ್ನ ಜಲಾಶಯ ಭರ್ತಿಯಾಗುತ್ತಿದೆ. 

33 ಅಡಿ ಎತ್ತರವಿರುವ ಈ ಜಲಾಶಯದಲ್ಲಿ ಶುಕ್ರವಾರ 32.5 ಅಡಿ ನೀರು ಶೇಖರಣೆಯಾಗಿದೆ. ಅರ್ಧ ಟಿಎಂಸಿ ಅಡಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಗುಡೇಕೋಟೆ ಮತ್ತು ಜಗಳೂರು ಭಾಗದ ಹಳ್ಳಗಳ ಮೂಲಕ ನೀರು ಹರಿದುಬರುತ್ತದೆ. ಒಳಹರಿವು ಮುಂದುವರಿದರೆ ಶುಕ್ರವಾರ ರಾತ್ರಿಯಿಂದಲೇ ಗೇಟ್‌ ಎತ್ತಿ ನೀರು ಹೊರ ಬಿಡಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ ರಮೇಶ್‌ ಮಾಹಿತಿ ನೀಡಿದರು.

ADVERTISEMENT

ಜಲಾಶಯದಿಂದ ಹೊರಹರಿಯುವ ನೀರು ಅಮಕುಂದಿ, ಅಶೋಕ ಸಿದ್ದಾಪುರ, ನಾಗಸಮುದ್ರ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ಹರಿಯಲಿದೆ. ಹಲವು ಕೆರೆಗಳಿಗೆ ನೀರು ಹರಿಯಲಿದೆ ಎಂದು ತಿಳಿಸಿದರು.

ಕೆರೆ ತುಂಬಿಸಲು ಬಳಸಿ: ‘ಕಳೆದ ವರ್ಷ ಜಲಾಶಯದಿಂದ ಸತತ ಒಂದು ತಿಂಗಳು ನೀರು ಹೊರಹರಿದು ಆಂಧ್ರಪ್ರದೇಶ ಪಾಲಾಯಿತು. ಈ ನೀರನ್ನು ತಾಲ್ಲೂಕಿನ ಕೆರೆಗಳಿಗೆ ಹರಿಸಲು ಕ್ರಮ ಕೈಗೊಂಡರೆ ಅನುಕೂಲವಾಗುತ್ತಿತ್ತು. ಈ ಬಗ್ಗೆ ಪರಿಶೀಲಿಸಿ ಎಂಬ ಮನವಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ’ ಎಂದು ರೈತಸಂಘದ ಮುಖಂಡರು ದೂರಿದ್ದಾರೆ.

ಜಲಾಶಯದ ಹಿಂಭಾಗಲ್ಲಿರುವ ತಾಯನಕನಹಳ್ಳಿ- ಹೂಡೇಂ ಬಳಿಯ ಜಿನಗಿಹಳ್ಳದಿಂದ ಕಾಲುವೆ ನಿರ್ಮಿಸಿ ಸೂರಮ್ಮನಹಳ್ಳಿ ಮೂಲಕ ಮುತ್ತಿಗಾರಹಳ್ಳಿ ಕೆರೆಗೆ ನೀರು ಹರಿಸಬಹುದು. ಈ ಕೆರೆ ತುಂಬಿದ ನಂತರ ಹಳ್ಳದ ಮೂಲಕ ತಳಕು ಹೋಬಳಿಯ ಗೌರಸಮುದ್ರ ಕೆರೆಗೆ ನೀರು ಹರಿಯಲಿದೆ. ಈ ಮೂಲಕ ದೊಡ್ಡ ಪ್ರಮಾಣದಲ್ಲಿ ಅಂತರ್ಜಲ ಹೆಚ್ಚಳ ಕಾರ್ಯಕ್ಕೆ ಅನುಕೂಲವಾಗಲಿದೆ. 20 ವರ್ಷದ ಹಿಂದೆ ಜಿನಗಿಹಳ್ಳ ಯೋಜನೆ ಜಾರಿಗಾಗಿ ಬಿಜೆಪಿಯವರು ಪಾದಯಾತ್ರೆ ಮೂಲಕ ಜಾಗೃತಿ ಮೂಡಿಸಿದ್ದರು. ನಂತರ ಹೋರಾಟ ನನೆಗುದಿಗೆ ಬಿದ್ದಿದೆ ಎಂದು ಪಕ್ಷದ ಮುಖಂಡ ಪಿ.ಇ. ವೆಂಕಟಸ್ವಾಮಿ ಹೇಳಿದರು. 

ಜಲಾಶಯ ನಿರ್ವಹಣೆ: ಜಲಾಶಯವು ನಿರ್ವಹಣೆ ಸಮಸ್ಯೆಯನ್ನು ಎದುರಿಸುತ್ತಿದೆ. ಇಲ್ಲಿಂದ ಮೊಳಕಾಲ್ಮುರಿಗೆ ಕುಡಿಯುವ ನೀರು ಪೂರೈಕೆ ಆಗುತ್ತಿರುವ ಕಾರಣ ಪಟ್ಟಣ ಪಂಚಾಯಿತಿಯು ಕಾವಲುಗಾರನನ್ನು ನೇಮಕ ಮಾಡಿದೆ. ಹೊಣೆ ಹೊತ್ತಿರುವ ಸಣ್ಣ ನೀರಾವರಿ ಇಲಾಖೆಯು ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ. ಕಳೆದ ವರ್ಷ ಕೆಲವರು ಗೇಟ್‌ಗೆ ಹಾನಿ ಮಾಡಿ ಬೇಕಾಬಿಟ್ಟಿ ನೀರು ಹಾಯಿಸಿಕೊಂಡ ಪರಿಣಾಮ 7 ಅಡಿಯಷ್ಟು ನೀರು ವ್ಯರ್ಥವಾಗಿ ಹೊರ ಹರಿದಿತ್ತು. ಈ ಬಾರಿ ಇದಕ್ಕೆ ಅವಕಾಶ ನೀಡಬಾರದು ಎಂಬುದು ರೈತಸಂಘದ ಮುಖಂಡರ ಮನವಿ.

ಗೇಟ್‌ ಮೇಲೆ ನೀರು ಹೊರ ಚೆಲ್ಲುತ್ತಿರುವುದು
ಜಲಾಶಯದಿಂದ ಗೇಟ್‌ಗೆ ಹಾನಿ ಮಾಡಿ ನೀರು ಬಿಟ್ಟುಕೊಳ್ಳಲು ಬಾರದಂತೆ ಮತ್ತು ಇಲಾಖೆಯವರು ಮಾತ್ರ ಗೇಟ್‌ ಎತ್ತಲು ಸಾಧ್ಯವಾಗುವಂತೆ ತಾಂತ್ರಿಕ ಕ್ರಮ ತೆಗೆದುಕೊಳ್ಳಲಾಗಿದೆ.
– ಜಿ.ರಮೇಶ್‌, ಎಂಜಿನಿಯರ್‌ ಸಣ್ಣ ನೀರಾವರಿ ಇಲಾಖೆ
ಜಲಾಶಯ ಮುಂಭಾಗ ಸಾಕಷ್ಟು ಸ್ಥಳವಿದೆ. ಇಲ್ಲಿ ಉದ್ಯಾನ ಅಭಿವೃದ್ಧಿ ಮಾಡಿದರೆ ಪ್ರವಾಸಿ ತಾಣವನ್ನಾಗಿಸಬಹುದು. ಹಲವು ಬಾರಿ ಮನವಿ ಮಾಡಿದರೂ ಸ್ಪಂದನೆ ದೊರೆತಿಲ್ಲ.
– ತಿಪ್ಪೇಸ್ವಾಮಿ, ನಾಗರಿಕ ಮೊಳಕಾಲ್ಮುರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.