ADVERTISEMENT

ಹೊಸದುರ್ಗ: ಮಹಿಳೆಯರಲ್ಲಿ ಜಾಗೃತವಾಗಿದ್ದ ಬಂಡಾಯಪ್ರಜ್ಞೆ

ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 4:10 IST
Last Updated 10 ಆಗಸ್ಟ್ 2021, 4:10 IST
ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಿಂದ ನಡೆಯುತ್ತಿರುವ ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಸೋಮವಾರ ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದೆ ವಚನ ನೃತ್ಯ ಪ್ರದರ್ಶಿಸಿದರು
ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಿಂದ ನಡೆಯುತ್ತಿರುವ ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಸೋಮವಾರ ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದೆ ವಚನ ನೃತ್ಯ ಪ್ರದರ್ಶಿಸಿದರು   

ಸಾಣೇಹಳ್ಳಿ (ಹೊಸದುರ್ಗ): ‘12ನೇ ಶತಮಾನದ ಮಹಿಳಾ ಲೋಕ ಅತ್ಯಂತ ಪ್ರಖರ ವೈಚಾರಿಕತೆ, ಆಧ್ಯಾತ್ಮಿಕತೆ ಮತ್ತು ಬಂಡಾಯ ಪ್ರಜ್ಞೆಯನ್ನು ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಂಡಿತ್ತು. ಅವರ್‍ಯಾರೂ ವಿಶ್ವವಿದ್ಯಾಲಯದ ಮೆಟ್ಟಿಲು ತುಳಿದವರಲ್ಲ. ಕೆಲವರಿಗೆ ಅಕ್ಷರದ ಅರಿವೂ ಇದ್ದಿರಲಾರದು’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಿಂದ ಆಯೋಜಿಸಿರುವ ‘ಮತ್ತೆ ಕಲ್ಯಾಣ’ ಅಂತರ್ಜಾಲ ಕಾರ್ಯಕ್ರಮದ 9ನೇ ದಿನವಾದ ಸೋಮವಾರ ನಡೆದ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಕಲ್ಯಾಣದ ಅನುಭವ ಮಂಟಪದ ಸಂಪರ್ಕಕ್ಕೆ ಬಂದ ಮಹಿಳೆಯರು ತಮ್ಮೊಳಗಿನ ಅರಿವನ್ನೇ ಗುರುವನ್ನಾಗಿಸಿಕೊಂಡು ಪೂರ್ವಜನ್ಮವಳಿದು ಪುನರ್‌ಜನ್ಮ ತಾಳಿದವರು. ಜ್ಯೋತಿ ಮುಟ್ಟಿದ ಜ್ಯೋತಿಯಂತೆ ಆದವರು. ಅಂಥವರಲ್ಲಿ ಅನುಭಾವಿ ಮುಕ್ತಾಯಕ್ಕ ಕೂಡ ಒಬ್ಬಳು. ಅಣ್ಣ ಅಜಗಣ್ಣ ಗುಪ್ತ ಭಕ್ತ. ಅಣ್ಣ-ತಂಗಿಯರು ದೇಹವೆರಡು ಆತ್ಮವೊಂದೆಂಬಂತೆ ಬುದುಕಿದ್ದವರು. ಮುಕ್ತಾಯಕ್ಕ ಅಜಗಣ್ಣನನ್ನೇ ತನ್ನ ಗುರುವಾಗಿ ಸ್ವೀಕಾರ ಮಾಡಿ ಅಜಗಣ್ಣನನ್ನೇ ಅಂಕಿತವಾಗಿಸಿಕೊಂಡಿದ್ದಾಳೆ’ ಎಂದು ತಿಳಿಸಿದರು.

ADVERTISEMENT

‘ಮುಕ್ತಾಯಕ್ಕ ವಚನಗಳಲ್ಲಿ ತನ್ನ ಅಣ್ಣನ ವ್ಯಕ್ತಿತ್ವ, ಲೋಕಾನುಭವ ಮತ್ತು ಶಿವಾನುಭವ ಕುರಿತು ಅಲ್ಲಮನೊಡನೆ ನಡೆಸಿದ ಸಂವಾದಗಳಿವೆ. ಈಕೆಗೆ ಬಸವಾದಿ ಶಿವಶರಣರ ತತ್ವಸಿದ್ಧಾಂತಗಳ ಅರಿವಿದ್ದರೂ ಅವರನ್ನು ಕಲ್ಯಾಣದಲ್ಲಿ ಪ್ರತ್ಯಕ್ಷ ನೋಡಿದ ದಾಖಲೆಗಳಿಲ್ಲ. ಅಣ್ಣನ ಸಾವಿನಿಂದ ತುಂಬ ದುಃಖಿತಳಾಗಿದ್ದ ಸಂದರ್ಭದಲ್ಲಿ ನಡೆದ ಮುಕ್ತಾಯಕ್ಕ ಮತ್ತು ಅಲ್ಲಮನ ಭೇಟಿ, ಸಂವಾದ ಮಾರ್ಮಿಕ ಚಿಂತನೆಯನ್ನು ಒಳಗೊಂಡಿವೆ. ಇಲ್ಲಿ ಮುಕ್ತಾಯಕ್ಕ ಅಲ್ಲಮನನ್ನೇ ಪ್ರಶ್ನಿಸುವ, ಸಂವಾದಿಸುವ ರೀತಿ ಅನನ್ಯವಾದುದು’ ಎಂದು ಸ್ಮರಿಸಿದರು.

ಮುಕ್ತಾಯಕ್ಕ ವಿಷಯ ಕುರಿತು ಮಾತನಾಡಿದ ಬೆಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕಿ ಸುಮಂಗಲಾ ಎಸ್. ಮುಮ್ಮಿಗಟ್ಟಿ, ‘12ನೇ ಶತಮಾನದಲ್ಲಿ ಮಹಿಳೆಗೆ ದೊರೆತ ಧಾರ್ಮಿಕ ಹಕ್ಕು ಮಹತ್ವದ್ದು. ಈ ಕಾರಣ ವಿಭಿನ್ನವಾಗಿ ಕಾಣುವಾಕೆ ಮುಕ್ತಾಯಕ್ಕ. ಈಕೆ ಕಲ್ಯಾಣ ಮತ್ತು ಅನುಭವ ಮಂಟಪದ ನೇರ ಸಂಪರ್ಕಕ್ಕೆ ಬಂದಿರಲಿಲ್ಲ. ಅನಿರೀಕ್ಷಿತವಾಗಿ ಅಲ್ಲಮನ ಸಂಪರ್ಕಕ್ಕೆ ಬಂದಿದ್ದರಿಂದ ಆಕೆಯ ಸಾಧನೆಯ ಅರಿವು ಇಂದು ನಮಗಾಗಿದೆ. ಆಕೆ ಎತ್ತರದ ಅನುಭಾವಿಕ ನೆಲೆಯಲ್ಲಿ ನಿಂತವಳು. ಈಕೆ ಮಹಾಜ್ಞಾನಿಯಾದ ಅಲ್ಲಮನನ್ನು ಪ್ರಶ್ನಿಸುವುದು ಸ್ವಾರಸ್ಯಕರವಾದ ವಿಷಯ. ಮುಕ್ತಾಯಕ್ಕನ ಸಿಕ್ಕ 37 ವಚನಗಳು ಅಲ್ಲಮನೊಡನೆ ಮಾಡಿದ ಸಂವಾದದ ಸಂದರ್ಭದಲ್ಲಿ ಮೂಡಿದವೇ ಆಗಿವೆ. ಆಕೆ ತಾನು ಪರಿಪೂರ್ಣಜ್ಞಾನಿ ಅಜಗಣ್ಣನ ತಂಗಿ ಎನ್ನುವುದನ್ನು ಅಲ್ಲಮನಿಗೆ ಕಾವ್ಯಮಯವಾಗಿ ಹೇಳುವುದು ಆಕೆಯ ಬೌದ್ಧಿಕ ಎತ್ತರವನ್ನು ಸೂಚಿಸುತ್ತದೆ’ ಎಂದು ವಿವರಿಸಿದರು.

ಬೀದರ್‌ನಿಂದ ಚನ್ನಬಸವ ಹೇಡೆ ಸ್ವಾಗತಿಸಿದರು. ಶಿವಸಂಚಾರದ ಕೆ.ಜ್ಯೋತಿ, ಕೆ.ದಾಕ್ಷಾಯಣಿ, ಎಚ್.ಎಸ್.ನಾಗರಾಜ್ ಮತ್ತು ತಬಲಸಾಥಿ ಶರಣ್ ತಂಡ ವಚನಗೀತೆಗಳನ್ನು ಹಾಡಿದರು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ವಚನ ನೃತ್ಯ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.