ADVERTISEMENT

ಚಿತ್ರದುರ್ಗ: ಕನಿಷ್ಠ ₹ 21 ಸಾವಿರ ವೇತನಕ್ಕೆ ಆಗ್ರಹ

ಬೇಡಿಕೆಗಳ ಈಡೇರಿಕೆಗೆ ಎಐಟಿಯುಸಿ ಕಾರ್ಯಕರ್ತೆಯರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 3:38 IST
Last Updated 25 ಸೆಪ್ಟೆಂಬರ್ 2021, 3:38 IST
ಕನಿಷ್ಠ ₹ 21 ಸಾವಿರ ವೇತನ ಸೇರಿ ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿ ಎಐಟಿಯುಸಿ ಕಾರ್ಯಕರ್ತೆಯರು ಚಿತ್ರದುರ್ಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು
ಕನಿಷ್ಠ ₹ 21 ಸಾವಿರ ವೇತನ ಸೇರಿ ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿ ಎಐಟಿಯುಸಿ ಕಾರ್ಯಕರ್ತೆಯರು ಚಿತ್ರದುರ್ಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು   

ಚಿತ್ರದುರ್ಗ: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ, ಐಸಿಡಿಎಸ್‌ ಕಾರ್ಮಿಕರಿಗೆ ಮಾಸಿಕ ಕನಿಷ್ಠ ₹ 21 ಸಾವಿರ ವೇತನ ನಿಗದಿಗೊಳಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಜಿಲ್ಲಾ ಮಂಡಳಿ ಕಾರ್ಯಕರ್ತೆಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರಮುಖ ಮಾರ್ಗಗಳಲ್ಲಿ ಮೆರವಣಿಗೆ ನಡೆಸಿದರು. ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ಮುಖ್ಯಮಂತ್ರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ. ಸುರೇಶ್‌ಬಾಬು, ‘ಕೋವಿಡ್ ವೇಳೆ ಜೀವವನ್ನು ಲೆಕ್ಕಿಸದೇ ಕೆಲಸ ಮಾಡಿ ಮೃತಪಟ್ಟವರಿಗೆ ಪರಿಹಾರವನ್ನು ತ್ವರಿತವಾಗಿ ನೀಡಬೇಕು. ಕಾರ್ಯಕರ್ತೆಯರು, ಸಹಾಯಕಿಯರಿಗೆ ನಿರ್ದಿಷ್ಟ ಅವಧಿಯೊಳಗೆ ಲಸಿಕೆ ನೀಡಬೇಕು. ಕೋವಿಡ್ ಸುರಕ್ಷತಾ ಪರಿಕರಗಳನ್ನು ವಿತರಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಸೇವಾ ಹಿರಿತನ, ದೀರ್ಘಾವಧಿ ಸೇವೆ ಹಾಗೂ ಹೊಸ ನೇಮಕಾತಿ ಎಂಬ ತಾರತಮ್ಯ ನಿವಾರಿಸಿ, ಗೌರವಧನ ಹೆಚ್ಚಿಸಬೇಕು. ನಿವೃತ್ತಿ ಅವಧಿ ಬಳಿಕ ಪಿಂಚಣಿಯಾಗಿ ಮಾಸಿಕ ₹ 10 ಸಾವಿರ, ಇಎಸ್‌ಐ ಭವಿಷ್ಯನಿಧಿ ಸೌಲಭ್ಯ ನೀಡಬೇಕು’ ಎಂದು ಒತ್ತಾಯಿಸಿದರು.

ಫೆಡರೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮುನಾಬಾಯಿ, ಉಪಾಧ್ಯಕ್ಷೆ ಭಾಗ್ಯಮ್ಮ, ಖಜಾಂಚಿ ವಿನೋದಮ್ಮ, ಸಾವಿತ್ರಮ್ಮ, ರಾಧಮ್ಮ, ರತ್ನಮ್ಮ, ಸಂಘಟನಾ ಕಾರ್ಯದರ್ಶಿ ಕೆ.ಇ. ಸತ್ಯಕೀರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.