
ಚಿತ್ರದುರ್ಗ: ‘ಪರಿಶಿಷ್ಟ ಜಾತಿ, ಪಂಗಡಗಳ ಮೀಸಲಾತಿ ಹಂಚಿಕೆ ಹಾಗೂ ಅನುಷ್ಠಾನದ ವಿಷಯದಲ್ಲಿ ರಾಜ್ಯ ಸರ್ಕಾರ ಕಾನೂನು ರೂಪಿಸಬೇಕು. ಒಳ ಮೀಸಲಾತಿ ಜಾರಿ ಬಳಿಕವೂ ಮುಂದುವರಿದಿರುವ ಗೊಂದಲಗಳನ್ನು ನಿವಾರಿಸಬೇಕು’ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಒತ್ತಾಯಿಸಿದರು.
‘ಮೀಸಲಾತಿ ಪ್ರಮಾಣ ಏರಿಕೆ ಮಾಡಿರುವ ಕ್ರಮದ ವಿರುದ್ಧ ಕೆಲವರು ನ್ಯಾಯಾಲಯದ ಬಾಗಿಲು ತಟ್ಟಿದ್ದಾರೆ. ಕಾನೂನು ತಜ್ಞರ ಸಲಹೆ ಪಡೆದು ಈ ದಾವೆ ಕೋರ್ಟ್‌ನಲ್ಲಿ ನಿಲ್ಲದಂತೆ ನೋಡಿಕೊಳ್ಳಬೇಕು. ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು ಮೀಸಲಾತಿ ಏರಿಕೆ ಮಾಡಿರುವುದನ್ನು ಸಮರ್ಥಿಸಿ ಕಾನೂನು ರೂಪಿಸಿವೆ. ಅದೇ ಮಾದರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಬದ್ಧತೆ ತೋರುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಬಿಜೆಪಿ ಸರ್ಕಾರದ ಅವಧಿಯಲ್ಲೇ ಎಸ್‌ಸಿ ಮೀಸಲಾತಿಯನ್ನು ಶೇ 15ರಿಂದ 17ಕ್ಕೆ, ಎಸ್‌ಟಿ ಮೀಸಲಾತಿಯನ್ನು ಶೇ 3ರಿಂದ 7ಕ್ಕೆ ಏರಿಕೆ ಮಾಡಲಾಯಿತು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಸಂವಿಧಾನಕ್ಕೆ ತಿದ್ದುಪಡಿ ತಂದು ಆಗಲೇ ಕಾನೂನು ರೂಪಿಸುವ ಎಲ್ಲಾ ಅವಕಾಶಗಳು ಇದ್ದವು. ಈಗಲಾದರೂ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ (ಇಡಬ್ಲ್ಯುಎಸ್) ಮೀಸಲಾತಿಗೆ ಕಾನೂನು ರೂಪಿಸಿದಂತೆ ಎಸ್‌ಸಿ, ಎಸ್‌ಟಿ ಮೀಸಲಾತಿಗೂ ಕಾನೂನು ರೂಪ ನೀಡಬೇಕು’ ಎಂದು ಒತ್ತಾಯಿಸಿದರು.
‘ಹಲವು ವರ್ಷಗಳ ಹೋರಾಟದ ಫಲವಾಗಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳಮೀಸಲಾತಿ ಜಾರಿಗೊಳಿಸಿದ್ದಾರೆ. ವೈದ್ಯಕೀಯ ಶಿಕ್ಷಣ, ಸ್ನಾತಕೋತ್ತರ ಶಿಕ್ಷಣದಲ್ಲೂ ಈಗಾಗಲೇ ಒಳ ಮೀಸಲಾತಿ ಜಾರಿಗೊಳಿಸಲಾಗಿದೆ. ಆದರೆ, ಕೆಲವು ಕಾಲೇಜುಗಳು ಪ್ರಮುಖ ಕೋರ್ಸ್‌ಗಳನ್ನು ಬಿ ಹಾಗೂ ಸಿ ವರ್ಗಗಳ ವಿದ್ಯಾರ್ಥಿಗಳಿಗೆ ನೀಡಿ ಎ ವರ್ಗದ ಮಾದಿಗ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದ್ದಾರೆ ಎಂಬ ಆರೋಪವಿದೆ. ಸರ್ಕಾರ ಕೂಡಲೇ ಈ ತಾರತಮ್ಯವನ್ನು ಸರಿಪಡಿಸಬೇಕು’ ಎಂದರು.
‘ಹುದ್ದೆಗಳ ನೇಮಕಾತಿ ಸ್ಥಗಿತಗೊಂಡಿದ್ದ ಕಾರಣ ನಿರುದ್ಯೋಗಿಗಳು ಸಮಸ್ಯೆ ಅನುಭವಿಸಿದ್ದಾರೆ. ವಯೋಮಿತಿ ಸಡಿಲಿಕೆಯ ಮೂಲಕ ಅವರಿಗೆ ನ್ಯಾಯ ನೀಡಲು ಸರ್ಕಾರ ಮುಂದಾಗಿದೆ. ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳಿಗೆ ಹಣ ನೀಡಿ ತರಬೇತಿ ಪಡೆಯುತ್ತಿರುವ ಉದ್ಯೋಗಾಂಕ್ಷಿಗಳ ಭವಿಷ್ಯ ಹಾಳಾಗದಂತೆ ಸರ್ಕಾರ ಕ್ರಮ ವಹಿಸಬೇಕು. ನೌಕರರ ಬಡ್ತಿ, ಎಸ್‍ಸಿಪಿ– ಟಿಎಸ್‍ಪಿ ಯೋಜನೆಗೂ ಒಳಮೀಸಲಾತಿ ಅನ್ವಯಿಸಬೇಕು’ ಎಂದರು.
ಮುಖಂಡರಾದ ಸಿ.ಕಣ್ಮೇಶ್, ಕಿರಣ್, ಶರಣಪ್ಪ, ರವೀಂದ್ರ, ಸಿ.ಎನ್.ಕುಮಾರ್, ಪ್ರಸನ್ನ, ವಿಜಯಕುಮಾರ್ ಇದ್ದರು.
‘ಕುತಂತ್ರಿಗಳನ್ನು ಶಿಕ್ಷಿಸುವ ಕಾನೂನು ಬರಲಿ’
‘ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿ ಎಕೆ ಎಡಿ ಎಎ ಗುಂಪು ಪ್ರತ್ಯೇಕಿಸಿ ಶೇ 1ರಷ್ಟು ಮೀಸಲಾತಿ ನೀಡಲಾಗಿತ್ತು. ಆದರೆ ಸರ್ಕಾರ ಅದನ್ನು ಪರಿಷ್ಕರಿಸಿ ಮೂಲ ಜಾತಿಯ ವಿವಿರ ನೀಡಿ ಎ ಅಥವಾ ಬಿ ವರ್ಗಕ್ಕೆ ಸೇರಿಕೊಳ್ಳುವಂತೆ ಆದೇಶಿಸಿತ್ತು. ಈಗ ಕೆಲ ಕುತಂತ್ರಿಗಳು ಇದನ್ನು ದುರುಪಯೋಗ ಮಾಡಿಕೊಂಡು ದುರ್ಬಲರಾಗಿರುವ ಮಾದಿಗರ ಮೀಸಲಾತಿ ಕಸಿಯಲು ಎ ವರ್ಗಕ್ಕೆ ನುಸುಳುತ್ತಿದ್ದಾರೆ’ ಎಂದು ಆರೋಪಿಸಿದರು. ‘ಒಳ ಮೀಸಲಾತಿ ದುರುಪಯೋಗವಾಗದಂತೆ ತಡೆಯಲು ಕಾನೂನು ರೂಪಿಸಬೇಕು. ಎ ವರ್ಗಕ್ಕೆ ಬಂದು ಉನ್ನತ ಶಿಕ್ಷಣದ ಸೀಟು ಪಡೆದಿರುವ ಅಭ್ಯರ್ಥಿಗಳ ಸಮಗ್ರ ಮಾಹಿತಿ ಸಂಗ್ರಹಿಸಿ ಬಿಡುಗಡೆ ಮಾಡಬೇಕು. ಅವರು ಕುತಂತ್ರದಿಂದ ಎ ವರ್ಗದ ಮೀಸಲಾತಿ ಪಡೆದಿದ್ದರೆ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.