ADVERTISEMENT

ದಾವಣಗೆರೆ ಸಂಚಾರಕ್ಕೆ ಜಿಲ್ಲಾಡಳಿತ ನಿರ್ಬಂಧ

ಹೊರ ಜಿಲ್ಲೆಯಿಂದ ಬಂದವರಿಗೆ ಕ್ವಾರಂಟೈನ್‌ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 5 ಮೇ 2020, 10:59 IST
Last Updated 5 ಮೇ 2020, 10:59 IST
ಜಿಲ್ಲಾಧಿಕಾರಿ ವಿನೋತ್ ಪ್ರಿಯಾ
ಜಿಲ್ಲಾಧಿಕಾರಿ ವಿನೋತ್ ಪ್ರಿಯಾ   

ಚಿತ್ರದುರ್ಗ: ಪಕ್ಕದ ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಗಡಿಯಲ್ಲಿ ಮುನ್ನೆಚ್ಚರಿಕೆ ಕೈಗೊಂಡಿರುವ ಜಿಲ್ಲಾಡಳಿತ, ಬೆಣ್ಣೆದೋಸೆ ನಗರಿಯ ಸಂಚಾರಕ್ಕೆ ನಿರ್ಬಂಧ ವಿಧಿಸಿದೆ.

‘ದಾವಣಗೆರೆಯಲ್ಲಿ ಸೋಂಕು ಹರಡುತ್ತಿರುವುದರಿಂದ ಜಿಲ್ಲಾ ಗಡಿಯಲ್ಲಿ ಎಚ್ಚರಿಕೆ ತೆಗೆದುಕೊಳ್ಳಲಾಗಿದೆ. ಗಡಿ ಪ್ರದೇಶದಲ್ಲಿ ನಿರ್ಮಿಸಿದ ಚೆಕ್‌ಪೋಸ್ಟ್‌ನಲ್ಲಿ ಪ್ರತಿಯೊಬ್ಬರನ್ನೂ ಪರಿಶೀಲಿಸಲಾಗುತ್ತಿದೆ. ದಾವಣಗೆರೆಯಿಂದ ಬರುವವರಿಗೆ ನಿರ್ಬಂಧ ವಿಧಿಸಲಾಗಿದೆ. ಆರೋಗ್ಯ ಪರೀಕ್ಷಿಸಿ ಹಿಂದಿರುಗಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಆರ್‌.ವಿನೋತ್ ಪ್ರಿಯಾ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಸರ್ಕಾರಿ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಕೂಡ ದಾವಣಗೆರೆಯಿಂದ ಸಂಚರಿಸುತ್ತಿರುವುದು ಗಮನಕ್ಕೆ ಬಂದಿದೆ. ಕೇಂದ್ರಸ್ಥಾನದಲ್ಲಿ ಇಲ್ಲದೇ ಇರುವ ಅಧಿಕಾರಿಗಳ ಪಟ್ಟಿ ತಯಾರಿಸಲಾಗಿದೆ. ಅಧಿಕಾರಿಗಳಿಗೂ ಕೂಡ ಗಡಿ ಪ್ರವೇಶಿಸಲು ಅವಕಾಶ ನೀಡಿಲ್ಲ. ಪದೇ ಪದೇ ನಿಯಮ ಉಲ್ಲಂಘಿಸುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಸರಕು ಸಾಗಣೆಗೆ ನಿರ್ಬಂಧ ವಿಧಿಸಲು ಅವಕಾಶವಿಲ್ಲ. ಆದರೂ, ಮುನ್ನೆಚ್ಚರಿಕೆ ಕೈಗೊಳ್ಳುವ ಅಗತ್ಯವಿದೆ. ಜಿಲ್ಲಾಡಳಿತದ ಗಮನಕ್ಕೆ ಬಾರದೇ ಹೊರ ಜಿಲ್ಲೆಯಿಂದ ಬರುವವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬಹುದು. ಇಂಥವರನ್ನು ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿ ಇಡಲಾಗುವುದು. ಜನರು ಭೀತಿಗೆ ಒಳಗಾಗದೇ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಹೇಳಿದರು.

‘ಹೊರ ಜಿಲ್ಲೆಗೆ ಭೇಟಿ ನೀಡುವ ಪ್ರತಿಯೊಬ್ಬರು ಕಡ್ಡಾಯವಾಗಿ ಪಾಸ್‌ ಪಡೆಯಬೇಕು. ಪಾಸ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಪಾಸ್‌ ಪಡೆಯಲು ಚಿತ್ರದುರ್ಗಕ್ಕೆ ಭೇಟಿ ನೀಡುವ ಅಗತ್ಯವಿಲ್ಲ. ಸಮೀಪದ ಗ್ರಾಮ ಪಂಚಾಯಿತಿ, ತಾಲ್ಲೂಕು ಕಚೇರಿ ಹಾಗೂ ಪೊಲೀಸ್‌ ಠಾಣೆಯಲ್ಲಿ ಅರ್ಜಿ ಸಲ್ಲಿಸಬಹುದು. ಪ್ರತಿ ಅರ್ಜಿಯನ್ನು ಪರಿಶೀಲಿಸಿ ಪಾಸ್‌ ವಿತರಿಸಲಾಗುವುದು. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಹೊರಜಿಲ್ಲೆಗೆ ಪ್ರಯಾಣಿಸಲು ಅವಕಾಶ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.