ADVERTISEMENT

ಚಿತ್ರದುರ್ಗ: ಜೈಲಲ್ಲಿ ಸಂಚು ರೂಪಿಸಿ ಮನೆಗೆ ಕನ್ನ

74 ‍ಪ್ರಕರಣ ದಾಖಲಾದ ಆರೋಪಿ ಪೊಲೀಸರ ಬಲೆಗೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 16:46 IST
Last Updated 31 ಆಗಸ್ಟ್ 2021, 16:46 IST
ಗವಿರಾಜ, ವೆಂಕಟೇಶ್‌, ಸಿದ್ದೇಶ್‌, ಅಂಜನಪ್ಪ
ಗವಿರಾಜ, ವೆಂಕಟೇಶ್‌, ಸಿದ್ದೇಶ್‌, ಅಂಜನಪ್ಪ   

ಚಿತ್ರದುರ್ಗ: ಜೈಲಲ್ಲಿ ಒಂದಾಗಿ ಮನೆ ಕಳವು ಸಂಚುರೂಪಿಸಿ ಕೃತ್ಯ ಎಸಗಿದ ನಾಲ್ವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತರಿಂದ ₹ 3 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ಹೊಸದುರ್ಗ ತಾಲ್ಲೂಕಿನ ಗಂಜಿಗೆರೆಯ ಗವಿರಾಜ ಅಲಿಯಾಸ್‌ ಗವಿ (40), ಅಂಜನಪ್ಪ (42), ಹೊಸದುರ್ಗದ ಮಾರುತಿ ನಗರದ ವೆಂಕಟೇಶ್‌ (40) ಹಾಗೂ ಹಿರಿಯೂರು ತಾಲ್ಲೂಕಿನ ಕಕ್ಕಯ್ಯನಹಟ್ಟಿಯ ಸಿದ್ದೇಶ್‌ (29) ಬಂಧಿತರು. ಇದರಿಂದ ಭರಮಸಾಗರ, ಶ್ರೀರಾಂಪುರ, ಹೊಸದುರ್ಗ ಠಾಣಾ ವ್ಯಾಪ್ತಿಯ ಏಳು ಪ್ರಕರಣಗಳು ಬೆಳಕಿಗೆ ಬಂದಿವೆ.

‘ಗಂಜಿಗೆರೆಯ ಗವಿರಾಜ ಪ್ರಮುಖ ಆರೋಪಿ. ಈತನ ವಿರುದ್ಧ 12 ವರ್ಷದಲ್ಲಿ 74 ಪ್ರಕರಣಗಳು ದಾಖಲಾಗಿವೆ. ಚಿತ್ರದುರ್ಗ, ತುಮಕೂರು, ಅರಸೀಕೆರೆ ಹಾಗೂ ತರೀಕೆರೆ ಠಾಣಾ ವ್ಯಾಪ್ತಿಯಲ್ಲಿ ಕಳವು ಕೃತ್ಯ ನಡೆಸಿದ್ದಾನೆ. ಹಲವು ಬಾರಿ ಬಂಧನವಾಗಿದ್ದರೂ, ಜಾಮೀನು ಮೇಲೆ ಹೊರಗೆ ಬಂದು ಕೃತ್ಯ ಮುಂದುವರಿಸುತ್ತಾನೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

‘ಚಿತ್ರದುರ್ಗ ಹಾಗೂ ತುಮಕೂರು ಜೈಲಿನಲ್ಲಿ ಆರೋಪಿಗಳಿಗೆ ಪರಿಚಯವಾಗಿದೆ. ಜೈಲಿನಲ್ಲಿ ಇರುವಾಗಲೇ ಮನೆಗಳವು ಬಗ್ಗೆ ಸಂಚು ರೂಪಿಸಿದ್ದರು. ಹೊರಗೆ ಬಂದ ಬಳಿಕ ಬೀಗ ಹಾಕಿದ ಮನೆಗಳನ್ನು ಹುಡುಕುತ್ತ ಒಟ್ಟಾಗಿ ತಿರುಗುತ್ತಿದ್ದರು. ನಾಯಿ ಇರುವ ಮನೆಗಳಲ್ಲಿ ಕಳವು ಮಾಡಲು ಹಿಂದೇಟು ಹಾಕುತ್ತಿದ್ದರು. ಯಾರೂ ಇಲ್ಲದಿರುವ ಮನೆಗಳನ್ನು ಪತ್ತೆ ಮಾಡಿ ಕೃತ್ಯ ಎಸಗುತ್ತಿದ್ದರು’ ಎಂದು ವಿವರಿಸಿದರು.

‘ಹೊಂಚು ಹಾಕಿದ ಮನೆಯ ಹೊರಗೆ ಇಬ್ಬರು ಇರುತ್ತಿದ್ದರು. ಇನ್ನಿಬ್ಬರು ಮನೆಯ ಬೀಗ ಮುರಿಯುತ್ತಿದ್ದರು. ರಾಡ್‌ ಬಳಸಿ ಬಾಗಿಲು ಮುರಿಯುವ ಕೌಶಲ ಕಲಿತಿದ್ದ ಇವರು, ಸದ್ದು ಆಗದಂತೆ ಕೃತ್ಯ ಎಸಗುತ್ತಿದ್ದರು. ಬಾಗಿಲು ಮುರಿಯುವಾಗ ಅಥವಾ ಕಳವು ಮಾಡುವಾಗ ಯಾರಾದರೂ ಬಂದರೆ ಕಲ್ಲು ತೂರಿ ಸೂಚನೆ ನೀಡುತ್ತಿದ್ದರು. ಇದರಿಂದ ಆರೋಪಿಗಳು ಸುಲಭವಾಗಿ ಪರಾರಿಯಾಗುತ್ತಿದ್ದರು’ ಎಂದರು.

ಪ್ರವಾಸಿ ತಾಣದಲ್ಲಿ ರಾತ್ರಿ ಗಸ್ತು
ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ಎಚ್ಚೆತ್ತುಕೊಂಡ ಚಿತ್ರದುರ್ಗ ಜಿಲ್ಲಾ ಪೊಲೀಸರು, ಪ್ರವಾಸಿತಾಣ ಹಾಗೂ ಯುವಜೋಡಿಗಳು ಸುತ್ತುವ ನಿರ್ಜನ ಪ್ರದೇಶಗಳ ಮೇಲೆ ನಿಗಾ ಇಡಲು ಮುಂದಾಗಿದೆ.

‘ಯುವಕ–ಯುವತಿಯರು ಸುತ್ತುವ ತಾಣಗಳನ್ನು ಪಟ್ಟಿ ಮಾಡುವಂತೆ ಎಲ್ಲ ಠಾಣೆಗಳಿಗೆ ಸೂಚಿಸಲಾಗಿದೆ. ಇಂತಹ ಸ್ಥಳದ ಸಂಚಾರ ಮಾರ್ಗದಲ್ಲಿ ತಪಾಸಣೆ ವ್ಯವಸ್ಥೆ ಮಾಡಲಾಗುತ್ತದೆ. ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಹಾಗೂ ಬೆಳಕಿನ ವ್ಯವಸ್ಥೆ ಮಾಡುವ ಬಗ್ಗೆ ಆಲೋಚಿಸಲಾಗುತ್ತಿದೆ’ ಎಂದು ಎಸ್‌ಪಿ ಜಿ.ರಾಧಿಕಾ ತಿಳಿಸಿದರು.

‘ಐತಿಹಾಸಿಕ ಕೋಟೆಯಲ್ಲಿ ಭದ್ರತೆ ಹೆಚ್ಚಿಸಿಕೊಳ್ಳುವಂತೆ ಪ್ರಾಚ್ಯವಸ್ತು ಹಾಗೂ ಪುರಾತತ್ವ ಇಲಾಖೆಗೆ ಸೂಚಿಸಲಾಗಿದೆ. ಕೋಟೆಯಲ್ಲಿ ಸಿಸಿಟಿವಿ ಕ್ಯಾಮೆರಾ ಇದ್ದು, ಖಾಸಗಿ ಭದ್ರತಾ ಸಿಬ್ಬಂದಿ ಕೂಡ ನಿಗಾ ಇಟ್ಟಿದ್ದಾರೆ. ಪೊಲೀಸರು ಆಗಾಗ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಯುವಜೋಡಿಗಳು ಸುತ್ತುವ ಸ್ಥಳಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.