ADVERTISEMENT

ಆರ್‌ಟಿಇ; ದಾಖಲಾದ ಮಕ್ಕಳು ಮೂರೇ ಮೂರು!

ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿದ ರಾಜ್ಯ ಸರ್ಕಾರ; ಪೋಷಕರು, ಶಿಕ್ಷಣ ತಜ್ಞರ ಆಕ್ರೋಶ

ಎಂ.ಎನ್.ಯೋಗೇಶ್‌
Published 11 ಜುಲೈ 2025, 4:39 IST
Last Updated 11 ಜುಲೈ 2025, 4:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿತ್ರದುರ್ಗ: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಅನುದಾನಿತ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಈ ವರ್ಷ ದಾಖಲಾಗಿರುವ ಮಕ್ಕಳ ಸಂಖ್ಯೆ 3ಕ್ಕೆ ಇಳಿದಿದೆ. ಶ್ರೀಮಂತರ ಮಕ್ಕಳ ಜೊತೆ ಬಡವರ ಮಕ್ಕಳೂ ಒಂದಾಗಿ ಕಲಿಯಬೇಕು ಎಂಬ ಕಾಯ್ದೆಯ ಉದ್ದೇಶ ಅರ್ಥ ಕಳೆದುಕೊಂಡಿದೆ ಎಂದು ಶಿಕ್ಷಣ ತಜ್ಞರು ಆರೋಪಿಸುತ್ತಾರೆ.

ಎಸ್‌ಸಿ, ಎಸ್‌ಟಿ, ಒಬಿಸಿ ಸೇರಿ ಬಡ ಕುಟುಂಬಗಳ ಮಕ್ಕಳಿಗೆ ಎಲ್‌ಕೆಜಿಯಿಂದ 8ನೇ ತರಗತಿವರೆಗೆ (14 ವರ್ಷದವರೆಗೆ) ಉಚಿತ ಶಿಕ್ಷಣ ನೀಡಬೇಕೆನ್ನುವ ಉದ್ದೇಶದಿಂದ 2010ರಲ್ಲಿ ಕೇಂದ್ರ ಸರ್ಕಾರವು ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿತು. ಆರಂಭದಲ್ಲಿ ಖಾಸಗಿ, ಅನುದಾನಿತ ಶಾಲೆಗಳಿಗೆ ಬಡ ಮಕ್ಕಳು ದಾಖಲಾಗಿ ಶಿಕ್ಷಣ ಪಡೆಯುತ್ತಿದ್ದರು. ಆದರೆ ಒಂದೆರಡು ವರ್ಷಗಳಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶದಿಂದ ಆರ್‌ಟಿಇ ಅಡಿ ದಾಖಲಾಗುವ ಮಕ್ಕಳ ಸಂಖ್ಯೆ ಕುಸಿತ ಕಾಣಲು ಆರಂಭಿಸಿತು.

ಸರ್ಕಾರಿ, ಅನುದಾನಿತ ಶಾಲೆಗಳು ಇರುವ ಒಂದೂವರೆ ಕಿ.ಮೀ. ವ್ಯಾಪ್ತಿಯಲ್ಲಿ ಖಾಸಗಿ ಶಾಲೆಗಳಿಗೆ ಆರ್‌ಟಿಇ ಅಡಿ ಅರ್ಜಿ ಹಾಕುವಂತಿಲ್ಲ ಎಂದು ಮ್ಯಾಪಿಂಗ್‌ ಆದೇಶ ಹೊರಡಿಸಿದ ನಂತರ ಆರ್‌ಟಿಇ ದಾಖಲಾತಿ ಬೆರಳೆಣಿಕೆ ಸಂಖ್ಯೆಗೆ ಕುಸಿದಿದೆ. ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಈ ಮ್ಯಾಪಿಂಗ್‌ ಆದೇಶ ಹೊರಡಿಸಲಾಯಿತು. ಇದರಿಂದಾಗಿ ಜಿಲ್ಲೆಯಲ್ಲಿ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಅಡಿ ದಾಖಲಾಗುವ ಮಕ್ಕಳ ಸಂಖ್ಯೆ ಇನ್ನಿಲ್ಲವಾಗಿದೆ.

ADVERTISEMENT

ಸರ್ಕಾರದ ಆದೇಶದ ಅನುಸಾರ ಆರ್‌ಟಿಇ ಅಡಿ ಬರುವ ಜಿಲ್ಲೆಯ 58 ಶಾಲೆಗಳಲ್ಲಿ 247 ಸೀಟುಗಳ ಲಭ್ಯತೆ ಇದೆ. ಒಟ್ಟು ಶಾಲೆಗಳಲ್ಲಿ ದಾಖಲಾದ ಮಕ್ಕಳ ಸಂಖ್ಯೆಯಲ್ಲಿ ಶೇ 25ರಷ್ಟು ಸೀಟುಗಳನ್ನು ಆರ್‌ಟಿಇ ಅಡಿ ದಾಖಲಾತಿಗೆ ಮೀಸಲಿಡಲಾಗಿದೆ. ಈಗಾಗಲೇ 2 ಸುತ್ತುಗಳಲ್ಲಿ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಒಟ್ಟು ಲಭ್ಯ ಸೀಟುಗಳ ಪೈಕಿ ಕೇವಲ 3 ಮಕ್ಕಳು ಮಾತ್ರ ದಾಖಲಾಗಿದ್ದಾರೆ.

2025–26ನೇ ಸಾಲಿಗಾಗಿ ಆರ್‌ಟಿಇ ಅಡಿ  ಪ್ರವೇಶ ಪಡೆಯುವ ಸಂಬಂಧ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಮೇ ತಿಂಗಳಲ್ಲಿ ಆನ್‌ಲೈನ್‌ ಅರ್ಜಿ ಆಹ್ವಾನಿಸಿತ್ತು. ಚಿತ್ರದುರ್ಗ ತಾಲ್ಲೂಕಿನಲ್ಲಿ ಲಭ್ಯ ಇರುವ 67 ಸೀಟುಗಳ ಪೈಕಿ ಮೊದಲ ಸುತ್ತಿನಲ್ಲಿ 3 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. 2ನೇ ಸುತ್ತಿನಲ್ಲಿ ಒಂದೂ ಮಗು ಕೂಡ ದಾಖಲಾಗಿಲ್ಲ.

ಚಳ್ಳಕೆರೆ ತಾಲ್ಲೂಕಿನಲ್ಲಿ ಅತೀ ಹೆಚ್ಚು 72 ಸೀಟುಗಳ ಲಭ್ಯತೆ ಇದೆ. ಎರಡೂ ಸುತ್ತಿನಲ್ಲಿ ಒಂದು ವಿದ್ಯಾರ್ಥಿ ಕೂಡ ದಾಖಲಾಗಿಲ್ಲ. ಹೊಳಲ್ಕೆರೆ ತಾಲ್ಲೂಕಿನಲ್ಲಿ ಕೇವಲ 8 ಸೀಟುಗಳ ಲಭ್ಯತೆ ಇದ್ದು, ಅಲ್ಲು ಕೂಡ ಯಾರೂ ದಾಖಲಾಗಿಲ್ಲ. ಎಸ್‌ಸಿ, ಎಸ್‌ಟಿ ಸಮುದಾಯಗಳ ಸಂಖ್ಯೆ ಹೆಚ್ಚು ಇರುವ ಜಿಲ್ಲೆಯಲ್ಲೇ ಹೆಚ್ಚು ದಾಖಲಾಗದಿರುವುದು ಆಶ್ಚರ್ಯ ತರಿಸುತ್ತದೆ.

ಸರ್ಕಾರದ ವಿರುದ್ಧ ಆಕ್ರೋಶ: ಆರ್‌ಟಿಇ ಅಡಿ ದಾಖಲಾಗುವ ಮಕ್ಕಳ ಸಂಖ್ಯೆ ರಾಜ್ಯದಾದ್ಯಂತ ಕುಸಿದಿದ್ದು ಇದಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಫಿಯಾವೇ ಕಾರಣ. ಕೇಂದ್ರ ಸರ್ಕಾರದ ಕಾಯ್ದೆಯನ್ನು ಯಥಾವತ್‌ ಅನುಷ್ಠಾನ ಮಾಡುವ ಬದಲು ರಾಜ್ಯ ಸರ್ಕಾರ ಮ್ಯಾಪಿಂಗ್‌ ಭೂತವನ್ನು ತಂದಿಟ್ಟು ಖಾಸಗಿ ಲಾಬಿಗೆ ಮಣಿದಿದೆ ಎಂದು ಪೋಷಕರು, ಶಿಕ್ಷಣ ತಜ್ಞರು ಆರೋಪಿಸುತ್ತಾರೆ.

‘ಲಭ್ಯವಿರುವ ಸೀಟುಗಳೆಲ್ಲವೂ ಅನುದಾನಿತ ಶಾಲೆಗಳಿಗೆ ಸೇರಿವೆ. ಆನ್‌ಲೈನ್‌ನಲ್ಲಿ ಖಾಸಗಿ ಶಾಲೆಗಳನ್ನೇ ತೋರಿಸುವುದಿಲ್ಲ. ನಾವು ಕೂಲಿ ಮಾಡಿದರೂ ಸರಿ, ಖಾಸಗಿ ಖಾಲೆಯಲ್ಲೇ ಮಕ್ಕಳನ್ನು ಓದಿಸುತ್ತೇವೆ ಎಂದು ಪೋಷಕರು ಹೇಳುತ್ತಾರೆ. ಹೀಗಾಗಿ ಆರ್‌ಟಿಇ ಉದ್ದೇಶವನ್ನೇ ಹಳ್ಳ ಹಿಡಿಸಲಾಗಿದೆ. ರಾಜ್ಯ ಸರ್ಕಾರಕ್ಕೆ ಬದ್ಧತೆ ಇದ್ದರೆ ಕೂಡಲೇ ಅವೈಜ್ಞಾನಿಕವಾದ ಮ್ಯಾಪಿಂಗ್‌ ಪದ್ದತಿಯನ್ನು ರದ್ದು ಮಾಡಬೇಕು’ ಎಂದು ಅಂಬೇಡ್ಕರ್‌ ವಿದ್ಯಾರ್ಥಿ ಪರಿಷತ್‌ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.