ADVERTISEMENT

ಸಕಾಲ ಅರ್ಜಿ ವಿಳಂಬಕ್ಕೆ ದಂಡ: ಸಕಾಲ ಮಿಷನ್‌ ಆಡಳಿತಾಧಿಕಾರಿ ಕೆ.ಮಥಾಯ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2018, 10:45 IST
Last Updated 15 ಡಿಸೆಂಬರ್ 2018, 10:45 IST

ಚಿತ್ರದುರ್ಗ: ಕಾಲಮಿತಿಯಲ್ಲಿ ನಾಗರಿಕರಿಗೆ ಸೇವೆಯನ್ನು ಒದಗಿಸಲು ರಾಜ್ಯದಲ್ಲಿ ಜಾರಿಗೆ ತಂದಿರುವ ‘ಸಕಾಲ ಸೇವೆಗಳ ಅಧಿನಿಯಮ’ ಪಾಲಿಸದ ಸರ್ಕಾರಿ ನೌಕರರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಮುಂದಾಗಿರುವ ಸರ್ಕಾರ, ದಂಡ ವಿಧಿಸಲು ನಿರ್ಧರಿಸಿದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ‘ಸಕಾಲ’ಕ್ಕೆ ಸಂಬಂಧಿಸಿದ ಅಹವಾಲು ಸ್ವೀಕಾರಿಸಿದ ‘ಸಕಾಲ ಮಿಷನ್‌’ ಆಡಳಿತಾಧಿಕಾರಿ ಕೆ.ಮಥಾಯ್‌ ಈ ಸೂಚನೆ ನೀಡಿದರು.

‘ಸಕಾಲ ಸೇವೆ ಕಾಯ್ದೆಯನ್ವಯ ನಿಗದಿತ ಅವಧಿಯೊಳಗೆ ಅರ್ಜಿ ವಿಲೇವಾರಿ ಮಾಡಬೇಕು. ಇಲ್ಲವಾದರೆ ದಿನಕ್ಕೆ ₹ 20ದಂಡವನ್ನು ಸಂಬಂಧಪಟ್ಟ ನೌಕರರ ವೇತನದಿಂದ ಕಡಿತಗೊಳಿಸಿ, ಅರ್ಜಿದಾರರಿಗೆ ಪಾವತಿಸಲು ಅವಕಾಶವಿದೆ. ವಿಳಂಬ ಧೋರಣೆ ಪ್ರದರ್ಶಿಸುವ ಸರ್ಕಾರಿ ನೌಕರರಿಗೆ ದಂಡ ವಿಧಿಸಲು ಹಿಂಜರಿಯುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಸಕಾಲ ಯೋಜನೆಯಡಿ ರಾಜ್ಯದಲ್ಲಿ 894 ಸೇವೆಗಳನ್ನು ಕಾಲಮಿತಿಯಲ್ಲಿ ನಾಗರಿಕರಿಗೆ ಒದಗಿಸುವ ವ್ಯವಸ್ಥೆ ಜಾರಿಯಲ್ಲಿದೆ. ಕಂದಾಯ ಇಲಾಖೆಯ ಎಲ್ಲ ಸೇವೆಗಳೂ ಸಕಾಲದ ವ್ಯಾಪ್ತಿಯಲ್ಲಿವೆ. ಕಾಯ್ದೆ ಅನುಷ್ಠಾನಗೊಂಡು ಏಳು ವರ್ಷ ಕಳೆದರೂ ಜಿಲ್ಲೆಯ ಲೋಕೋಪಯೋಗಿ ಇಲಾಖೆ ಹಾಗೂ ಆಯುಷ್‌ ಇಲಾಖೆ ಸಕಾಲದ ವ್ಯಾಪ್ತಿಯಲ್ಲಿ ಸೇವೆ ಒದಗಿಸುತ್ತಿಲ್ಲ. 34 ಸೇವೆಗಳು ಸಕಾಲ ವ್ಯಾಪ್ತಿಯಲ್ಲಿದ್ದರೂ ಸಾರ್ವಜನಿಕರಿಗೆ ಸ್ಪಂದಿಸದ ಲೋಕೋಪಯೋಗಿ ಇಲಾಖೆಯ ಬಗ್ಗೆ ಆಡಳಿತಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು.

‘ಸಕಾಲ ಯೋಜನೆಯಡಿ ಒದಗಿಸುವ ಸೇವೆ, ಸಕ್ಷಮ ಪ್ರಾಧಿಕಾರ, ಮೇಲ್ಮನವಿ ಪ್ರಾಧಿಕಾರದ ವಿವರವುಳ್ಳ ಫಲಕವನ್ನು ಎಲ್ಲ ಕಚೇರಿಯಲ್ಲಿ ಪ್ರದರ್ಶಿಸುವುದು ಕಡ್ಡಾಯ. ಇದಕ್ಕೆ ಪ್ರತ್ಯೇಕ ಕೌಂಟರ್‌ ತೆರೆದು ಸಿಬ್ಬಂದಿಯನ್ನು ನಿಯೋಜಿಸಬೇಕು. ತಾಂತ್ರಿಕ ತೊಡಕುಗಳನ್ನು ನಿವಾರಿಸಲು ತಂತ್ರಜ್ಞರನ್ನು ನಿಯೋಜಿಸಲಾಗುವುದು’ ಎಂದರು.

‘ಕೆಲವು ಇಲಾಖೆಯ ಸಿಬ್ಬಂದಿ ಸಾರ್ವಜನಿಕರ ಅರ್ಜಿಗಳನ್ನು ಸಕಾಲ ಯೋಜನೆಯಡಿ ಸ್ವೀಕರಿಸುತ್ತಿಲ್ಲ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿರುವುದಕ್ಕೆ ಸಂಬಂಧಿಸಿದಂತೆ ಹಲವು ದೂರುಗಳು ಬಂದಿವೆ. ಸಕಾಲ ವ್ಯಾಪ್ತಿಯಿಂದ ಹೊರಗುಳಿದರೆ ಭ್ರಷ್ಟಾಚಾರಕ್ಕೆ ಆಸ್ಪದ ಸಿಗುತ್ತದೆ. ಸರ್ಕಾರಿ ಕಚೇರಿಗಳನ್ನು ಭಷ್ಟಾಚಾರ ಮುಕ್ತಗೊಳಿಸಲು ಈ ಯೋಜನೆ ನೆರವಾಗಲಿದೆ’ ಎಂದು ವಿವರಿಸಿದರು.

33 ಸಾವಿರ ಅರ್ಜಿ ಬಾಕಿ

ಸೇವೆ ಒದಗಿಸಲು ಸತತ ಏಳು ಬಾರಿ ವಿಳಂಬ ಮಾಡಿದ 33,203 ಅರ್ಜಿಗಳು ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯಲ್ಲೇ ಇವೆ ಎಂಬ ಅಂಶ ‘ಸಕಾಲ ಮಿಷನ್’ ಆಡಳಿತಾಧಿಕಾರಿ ಮಥಾಯ್‌ ಅವರಿಗೆ ಅಚ್ಚರಿಯುಂಟು ಮಾಡಿತು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ತಪ್ಪಿತಸ್ಥ ನೌಕರರನ್ನು ಇಲಾಖೆ ವಿಚಾರಣೆಗೆ ಗುರಿಪಡಿಸಲಾಗುವುದು’ ಎಂಬ ಎಚ್ಚರಿಕೆ ನೀಡಿದರು.

‘ಚಿತ್ರದುರ್ಗ ತಾಲ್ಲೂಕು ಕಚೇರಿಯಲ್ಲಿ 13,687 ಅರ್ಜಿಗಳ ವಿಲೇವಾರಿಗೆ ಏಳು ಬಾರಿ ವಿಳಂಬ ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂತಹ 328 ಅರ್ಜಿಗಳು ಬಾಕಿ ಉಳಿದಿವೆ. ಸಾರ್ವಜನಿಕರನ್ನು ಈಪರಿ ನಿರ್ಲಕ್ಷ್ಯ ಮಾಡಿದರೆ ಸರ್ಕಾರಿ ವ್ಯವಸ್ಥೆಯ ಬಗ್ಗೆ ನಂಬಿಕೆ ಬರುವುದಾದರೂ ಹೇಗೆ’ ಎಂದು ಕಟುವಾಗಿ ಪ್ರಶ್ನಿಸಿದರು.

ಸಿ.ಎಂ.ಗೆ ಅಹವಾಲು ಸಲ್ಲಿಕೆ

ತಾಲ್ಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳು ಬಗೆಹರಿಸಬಹುದಾದ ಸಮಸ್ಯೆಗಳು ಮುಖ್ಯಮಂತ್ರಿ ಕಚೇರಿಗೆ ಬರುತ್ತಿರುವುದಕ್ಕೆ ಎಚ್‌.ಡಿ.ಕುಮಾರಸ್ವಾಮಿ ಅಸಮಾಧಾನಗೊಂಡಿರುವ ಸಂಗತಿಯನ್ನು ಮಥಾಯ್‌ ಅವರು ಸಭೆಯ ಗಮನಕ್ಕೆ ತಂದರು.

‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸಲ್ಲಿಕೆಯಾಗುತ್ತಿವ ಅರ್ಜಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಪ್ರತಿ ಜಿಲ್ಲೆಯಿಂದ ಸರಾಸರಿ ಮೂರು ಸಾವಿರ ಅರ್ಜಿಗಳು ಬೆಂಗಳೂರಿಗೆ ಬರುತ್ತಿವೆ. ಅಧಿಕಾರಿಗಳು ಸಮರ್ಥವಾಗಿ ಕೆಲಸ ಮಾಡಿದರೆ, ಸಾರ್ವಜನಿಕರಿಗೆ ಸ್ಪಂದಿಸಿದರೆ ಸಮಸ್ಯೆ ಹೊತ್ತು ಬರುವವರ ಸಂಖ್ಯೆ ಕಡಿಮೆಯಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.