ADVERTISEMENT

‘ಮತ್ತೆ ಕಲ್ಯಾಣ’ ಅಭಿಯಾನ ನಾಳೆ

ನೆರೆ ಸಂತ್ರಸ್ತರಿಗೆ ನೆರವಾಗಲು ತೀರ್ಮಾನ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 12:40 IST
Last Updated 13 ಆಗಸ್ಟ್ 2019, 12:40 IST
ಸಾಣೆಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ-
ಸಾಣೆಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ-   

ಚಿತ್ರದುರ್ಗ: ವಚನ ಚಳವಳಿಯ ಅರಿವಿನ ಮಾರ್ಗವನ್ನು ಕಂಡುಕೊಳ್ಳುವ ಉದ್ದೇಶದಿಂದ ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಆರಂಭವಾಗಿರುವ ‘ಮತ್ತೆ ಕಲ್ಯಾಣ’ ಅಭಿಯಾನ ಆ.15ರಂದು ಚಿತ್ರದುರ್ಗದಲ್ಲಿ ನಡೆಯಲಿದೆ.

ಅಭಿಯಾನಕ್ಕೆ ‘ಸಹಮತ ವೇದಿಕೆ’ ಸಿದ್ಧತೆ ಮಾಡಿಕೊಂಡಿದೆ. ನೆರೆ ಹಾಗೂ ಬರ ಪರಿಸ್ಥಿತಿಯ ನಡುವೆ ಜನರ ಚಿಂತನೆಯನ್ನು ಪ್ರೇರೇಪಿಸುವ ಚಳವಳಿಯನ್ನು ಮುಂದುವರಿಸಲು ‘ಸಹಮತ ವೇದಿಕೆ’ ನಿರ್ಧರಿಸಿದೆ. ಅಭಿಯಾನವನ್ನು ಇನ್ನಷ್ಟು ಸರಳಗೊಳಿಸಲು ತೀರ್ಮಾನಿಸಿದೆ. ನೆರೆ ಸಂತ್ರಸ್ತರಿಗೆ ನೆರವಾಗುವ ಸ್ವಾಮೀಜಿಯ ಸಂಕಲ್ಪಕ್ಕೆ ಸಹಮತ ವ್ಯಕ್ತಪಡಿಸಿದೆ.

‘ಆ.1ರಿಂದ ಆರಂಭವಾಗಿರುವ ‘ಮತ್ತೆ ಕಲ್ಯಾಣ’ ಅಭಿಯಾನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಚಲನವನ್ನುಂಟು ಮಾಡಿದೆ. ಆ.5ರವರೆಗೆ ಅಭಿಯಾನಕ್ಕೆ ಯಾವುದೇ ಅಡ್ಡಿ–ಆತಂಕಗಳು ಎದುರಾಗಿರಲಿಲ್ಲ. ಆ ಬಳಿಕ ಸುರಿದ ವಿಪರೀತ ಮಳೆಗೆ ರಾಜ್ಯದ 17 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಚಿತ್ರದುರ್ಗ ಸೇರಿ ಉಳಿದ ಜಿಲ್ಲೆಗಳಲ್ಲಿ ಬರವಿದೆ. ಈ ಬಗ್ಗೆ ವೇದಿಕೆ ಚರ್ಚೆ ನಡೆಸಿದ್ದು, ಚಿಂತನೆ ಬಿತ್ತುವ ಅಭಿಯಾನವನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ’ ಎಂದು ಸಹಮತ ವೇದಿಕೆಯ ಜಿಲ್ಲಾ ಸಮಿತಿ ಮುಖಂಡ ಜಿ.ಎಸ್‌.ಮಂಜುನಾಥ್‌ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಕಾರ್ಯಕ್ರಮವನ್ನು ಇನ್ನಷ್ಟು ಸರಳೀಕರಿಸಲಾಗಿದೆ. ಅಭಿಯಾನದ ಖರ್ಚು ಕಡಿಮೆಗೊಳಿಸಿ, ಉಳಿತಾಯಕ್ಕೆ ಒತ್ತು ನೀಡಲಾಗಿದೆ. ಈ ಉಳಿತಾಯದಲ್ಲಿ ನೆರೆ ಸಂತ್ರಸ್ತರಿಗೆ ನೆರವು ನೀಡಲಾಗುತ್ತದೆ. ಸಿರಿಗೆರೆಯ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಂತ್ರಸ್ತರಿಗೆ ಸಾಂತ್ವನ ಹೇಳುತ್ತಿದ್ದಾರೆ. ಅಭಿಯಾನದ ಜೊತೆಗೆ ಪಂಡಿತಾರಾಧ್ಯ ಸ್ವಾಮೀಜಿ ಕೂಡ ನೆರೆ ಸಂತ್ರಸ್ತರಿಗೆ ಸಹಾಯದ ಹಸ್ತ ಚಾಚಲಿದ್ದಾರೆ’ ಎಂದು ವಿವರಿಸಿದರು.

‘ಸ್ವಾತಂತ್ರ್ಯ ದಿನಾಚರಣೆಯಂದೇ ಅಭಿಯಾನ ಚಿತ್ರದುರ್ಗಕ್ಕೆ ಬರಲಿದೆ. ಸಂಪಿಗೆ ಸಿದ್ದೇಶ್ವರ ದೇಗುಲದಲ್ಲಿ ಬೆಳಿಗ್ಗೆ 9.30ಕ್ಕೆ ಧ್ವಜಾರೋಹಣ ನಡೆಸಲಾಗುತ್ತದೆ. ಬಳಿಕ ‘ಸಾಮರಸ್ಯ ನಡಿಗೆ’ ಹೊರಡಲಿದ್ದು, ಗಾಂಧಿ ವೃತ್ತ, ಬಿ.ಡಿ.ರಸ್ತೆ, ಪ್ರವಾಸಿ ಮಂದಿರದ ಮೂಲಕ ತ.ರಾ.ಸು ರಂಗಮಂದಿರ ತಲುಪಲಿದೆ. ಬೆಳಿಗ್ಗೆ 11ರಿಂದ ಮಧ್ಯಾಹ್ನ 1.30ರವರೆಗೆ ಮುಕ್ತ ಸಂವಾದ ನಡೆಯಲಿದೆ. ಸಾಹಿತಿ ಡಾ.ಲೋಕೇಶ ಅಗಸನಕಟ್ಟೆ ಹಾಗೂ ಡಾ.ಜೆ.ಕರಿಯಪ್ಪ ಮಾಳಿಗೆ ಉಪಸ್ಥಿತರಿರುವರು’ ಎಂದು ಮಾಹಿತಿ ನೀಡಿದರು.

‘ಸಾರ್ವಜನಿಕ ಸಮಾವೇಶ ಮಧ್ಯಾಹ್ನ 2.30ಕ್ಕೆ ನಡೆಯಲಿದೆ. ‘ಕಾಯಕ ಜೀವಿಗಳ ಕ್ರಾಂತಿ’ ಕುರಿತು ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್‌ ಉಪನ್ಯಾಸ ನೀಡಲಿದ್ದಾರೆ. ‘ಶರಣರ ಕೃಷಿ’ ಬಗ್ಗೆ ಕವಿತಾ ಮಿಶ್ರಾ ಮಾತನಾಡಲಿದ್ದಾರೆ. ರಾತ್ರಿ 8ಕ್ಕೆ ಶಿವಸಂಚಾರ ಕಲಾವಿದರು ‘ಮೋಳಿಗೆ ಮಾರಯ್ಯ’ ನಾಟಕ ಪ್ರದರ್ಶಿಸಲಿದ್ದಾರೆ’ ಎಂದರು.

ಮುಖಂಡರಾದ ಸೇತುರಾಮ್‌, ಡಾ.ದೊಡ್ಡಮಲ್ಲಯ್ಯ, ನುಲೇನೂರು ಶಂಕರಪ್ಪ, ತಿಮ್ಮಣ್ಣ, ರುದ್ರಸ್ವಾಮಿ, ಷಣ್ಮುಖಪ್ಪ, ಜಯಣ್ಣ, ಬಸ್ತಿಹಳ್ಳಿ ಸುರೇಶ್‌ ಬಾಬು, ಎನ್‌.ಡಿ.ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.