ADVERTISEMENT

ಕನ್ನಡ ಭಾಷೆಯ ಸ್ಥಾನ ಪಲ್ಲಟ

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಳವಳ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 9:04 IST
Last Updated 2 ನವೆಂಬರ್ 2019, 9:04 IST
ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಚಿಂತನ ಕಾರ್ಯಕ್ರಮದಲ್ಲಿ  ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಶಾಸಕ ಗೂಳಿಹಟ್ಟಿ ಡಿ.ಶೇಖರ್, ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ. ವಸಂತಕುಮಾರ್, ಪ್ರಾಧ್ಯಾಪಕ ಎಸ್.ಎನ್. ಆನಂದ ಇದ್ದಾರೆ.
ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಚಿಂತನ ಕಾರ್ಯಕ್ರಮದಲ್ಲಿ  ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಶಾಸಕ ಗೂಳಿಹಟ್ಟಿ ಡಿ.ಶೇಖರ್, ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ. ವಸಂತಕುಮಾರ್, ಪ್ರಾಧ್ಯಾಪಕ ಎಸ್.ಎನ್. ಆನಂದ ಇದ್ದಾರೆ.   

ಚಿತ್ರದುರ್ಗ: ಭಾಷೆ ಕೇವಲ ಮಾತಲ್ಲ, ಅದೊಂದು ಸಂಸ್ಕೃತಿ. ಭಾಷೆ ನಾಶವಾದರೆ ಸಂಸ್ಕೃತಿಗೂ ಧಕ್ಕೆ ಉಂಟಾಗುತ್ತದೆ. ಕನ್ನಡ ಭಾಷೆ ಸ್ಥಾನ ಪಲ್ಲಟಗೊಳ್ಳುತ್ತಿದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಹೊಸದುರ್ಗ ತಾಲ್ಲೂಕಿನ ಸಾಣೆಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಶಿವಧ್ವಜಾರೋಹಣ ಹಾಗೂ ಚಿಂತನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಎಲ್ಲ ಧ್ವಜಗಳ ಹಿಂದೆಯೂ ಆಶಯ, ಗುರಿ ಇದೆ. ಶಿವ ಧ್ವಜದಕ್ಕೆ ಜಾತಿ, ಧರ್ಮಗಳ ಎಲ್ಲೆ ಇಲ್ಲ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಶಿವ ಧ್ವಜಾರೋಹಣ ಪದ್ಧತಿಯನ್ನು ಜಾರಿಗೆ ತಂದರು. ಬಸವಾದಿ ಶರಣರ ಆಲೋಚನೆಗಳು ಇದಕ್ಕೆ ಪ್ರೇರಣೆ’ ಎಂದು ಹೇಳಿದರು.

ADVERTISEMENT

‘ಜಗತ್ತಿನಲ್ಲಿ ಹಲವು ದೇವರುಗಳಿಲ್ಲ. ಹೊರಗೆ ಕಾಣುವ ದೇವರು ನಮ್ಮ ಕಲ್ಪನೆ ಮಾತ್ರ. ಎಲ್ಲೆಡೆ ಏಕ ದೈವೀಶಕ್ತಿ ಕಾಣುವ ಗುಣ ಬೆಳೆಸಿಕೊಳ್ಳಬೇಕು. ವಿಶಾಲ ದೇವರ ಸ್ವರೂಪವನ್ನು ಶರಣರು ಇಷ್ಟಲಿಂಗದ ರೂಪದಲ್ಲಿ ನೀಡಿದರು. ಇಲ್ಲಿ ಮಧ್ಯವರ್ತಿ, ಪೂಜಾರಿಯ ಅವಶ್ಯಕತೆಯಿಲ್ಲ. ಹೋಮ, ಹವನಗಳ ಅಗತ್ಯವಿಲ್ಲ’ ಎಂದರು.

‘ಸಂಗ್ರಹಿಸುವ ಹಣ, ಕಟ್ಟುವ ಮನೆಯಲ್ಲಿ ಯಶಸ್ಸು ಅಡಗಿಲ್ಲ. ಬದುಕುವ ವಿಧಾನದಲ್ಲಿ ಯಶಸ್ಸಿದೆ. ನೈತಿಕ ನೆಲೆಗಟ್ಟು ಕುಸಿಯದ ಹಾಗೆ, ಧಾರ್ಮಿಕ ಚೌಕಟ್ಟನ್ನು ಮೀರದ ಹಾಗೆ ನಡವಳಿಕೆ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ. ವಸಂತಕುಮಾರ್ ಮಾತನಾಡಿ, ‘ಶಿವ’ ಅಂದರೆ ವಿಗ್ರಹವಲ್ಲ, ಒಳಿತು ಮತ್ತು ಮಂಗಳ. ಈ ಹಿನ್ನೆಲೆಯಲ್ಲಿಯೇ ಶಿವ ಮತ್ತು ಕನ್ನಡದ ಧ್ವಜಾರೋಹಣ ಮಾಡಲಾಗಿದೆ. ಕನ್ನಡಕ್ಕೆ ಒಳ್ಳೆಯದನ್ನು ಮಾಡುವ ಸಂಕಲ್ಪವೇ ಈ ಧ್ವಜಾರೋಹಣಗಳ ಆಶಯ. ನಾಟಕೋತ್ಸವದ ಮೂಲಕ ಸ್ವಾಮೀಜಿ ಜನರಿಗೆ ಸಂಸ್ಕಾರ ನೀಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಗೂಳಿಹಟ್ಟಿ ಡಿ.ಶೇಖರ್ ಕನ್ನಡ ಧ್ವಜಾರೋಹಣ ನೆರವೇರಿಸಿದರು. ‘ಯಶಸ್ಸಿನ ಗುಟ್ಟು’ ಕುರಿತು ಅಜ್ಜಂಪುರ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಎಸ್.ಎನ್. ಆನಂದ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.