ADVERTISEMENT

ನಾಟಕ ನೋಡುವಲ್ಲಿ ಸಾಂಪ್ರದಾಯಿಕ ನೋಟ ಬಿಡಬೇಕು: ಸಾಣೇಹಳ್ಳಿ ಶ್ರೀ

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 4:52 IST
Last Updated 27 ಡಿಸೆಂಬರ್ 2022, 4:52 IST
ಹೊಸದುರ್ಗದ ಸಾಣೇಹಳ್ಳಿ ಯಲ್ಲಿ ಬಸವಾದಿ ಶರಣರ ದರ್ಶನ ನಾಟಕೋತ್ಸವ ಉದ್ಘಾಟನೆ ಸೋಮವಾರ ನಡೆಯಿತು
ಹೊಸದುರ್ಗದ ಸಾಣೇಹಳ್ಳಿ ಯಲ್ಲಿ ಬಸವಾದಿ ಶರಣರ ದರ್ಶನ ನಾಟಕೋತ್ಸವ ಉದ್ಘಾಟನೆ ಸೋಮವಾರ ನಡೆಯಿತು   

ಹೊಸದುರ್ಗ: ನಾಟಕ ನೋಡುವ ದೃಷ್ಟಿಕೋನ ಬದಲಾಗಬೇಕು. ಸಾಂಪ್ರದಾಯಿಕ ನೋಟವನ್ನು ಬಿಡಬೇಕು ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಸಾಣೇಹಳ್ಳಿಯ ಎಸ್‌.ಎಸ್ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಬಸವಾದಿ ಶರಣರ ದರ್ಶನ ನಾಟಕೋತ್ಸವ’ದ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಮೂವತ್ತು ಜಿಲ್ಲೆಗಳಲ್ಲಿ ಮೂವತ್ತು ಶರಣರ ನಾಟಕಗಳನ್ನು ಆಡಿಸುವ ಕಾರ್ಯ ಯೋಜನೆಯನ್ನು ಈ ವರ್ಷ ಹಾಕಿಕೊಂಡಿದ್ದೆವು. ಅಭಿನಯಿಸಿದ ಆ ತಂಡಗಳಿಗೆ ಕೇವಲ ₹ 25,000 ಧನಸಹಾಯ ನೀಡಿದ್ದೇವೆ. ಇದು ಅಲ್ಪ ಮೊತ್ತ. ಒಂದು ನಾಟಕ ಪ್ರದರ್ಶನಗೊಳ್ಳಲು ಕನಿಷ್ಠ
₹ 2 ಲಕ್ಷವಾದರೂ ಬೇಕು’ ಎಂದರು.

ADVERTISEMENT

ಪಾಂಡೋಮಟ್ಟಿ- ಕಮ್ಮತ್ತಳ್ಳಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ಮಾತನಾಡಿ, ‘ಟಿ.ವಿ.ಗಳು ಬಂದ ಮೇಲೆ, ಕಲೆ ನಶಿಸುತ್ತಿರುವ ಸಂದರ್ಭದಲ್ಲಿ ಕಲೆಗೆ ಬೆಲೆ ಕೊಟ್ಟವರು ಪೂಜ್ಯರು. ರಂಗಕಲೆಯನ್ನು ಉಳಿಸುವ ಪ್ರಯತ್ನ ಮಾಡುತ್ತಿರುವ ಪೂಜ್ಯರ ಕಾರ್ಯ ಅತ್ಯಂತ ಶ್ಲಾಘನೀಯ’ ಎಂದು ಹೇಳಿದರು.

ರಾಯಚೂರಿನ ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯ ಬಿ.ಎನ್. ಅಕ್ಕಿ ಮಾತನಾಡಿ, ‘ರಂಗಭೂಮಿಯಿಂದ ಜನರ ವೈಚಾರಿಕ ಮಟ್ಟ ಹೆಚ್ಚುವುದು’ ಎಂದರು.

ಪಿ. ಲಂಕೇಶ್ ಅವರ `ಸಂಕ್ರಾಂತಿ’ ನಾಟಕವನ್ನು ನಿರ್ಮಲಾ ವೇಣುಗೋಪಾಲ್ ಅವರ ನಿರ್ದೇಶನದಲ್ಲಿ ರಾಯಚೂರಿನ ಭಗತ್ ಸಾಂಸ್ಕೃತಿಕ ಸೇವಾಸಂಘ ಅಭಿನಯಿಸಿದರು.

ಇದೇ ವೇಳೆ ಅಜ್ಜಂಪುರ ಮೋಹನ್, ಚನ್ನಗಿರಿ ಚನ್ನಬಸಪ್ಪ, ಸುಧಾ ಅರುಣ್. ಅಧ್ಯಾಪಕ ಜಯಪ್ಪ ಇದ್ದರು. ಡಿ. 27ರಂದು ಮಧ್ಯಾಹ್ನ 2.30ಕ್ಕೆ ದಾವಣಗೆರೆಯ ‘ರಂಗ ಅನಿಕೇತನ’ ತಂಡದಿಂದ ‘ಇವ ನಮ್ಮವ’ ನಾಟಕ ಪ್ರದರ್ಶನ
ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.