ADVERTISEMENT

ಮನೆ ಮನೆಯಲ್ಲಿ ಅಕ್ಷರದ ಹಣತೆ ಬೆಳಗಿಸಿದ ಫುಲೆ: ತಿಪ್ಪೇಸ್ವಾಮಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 7:13 IST
Last Updated 5 ಜನವರಿ 2026, 7:13 IST
ಚಿತ್ರದುರ್ಗದ ಕೋಟೆನಾಡು ಬುದ್ಧವಿಹಾರ ಧ್ಯಾನಕೇಂದ್ರದಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು
ಚಿತ್ರದುರ್ಗದ ಕೋಟೆನಾಡು ಬುದ್ಧವಿಹಾರ ಧ್ಯಾನಕೇಂದ್ರದಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು   

ಚಿತ್ರದುರ್ಗ: ‘ಕಲಿಕೆ ಮತ್ತು ಜ್ಞಾನ ಮಾತ್ರವೇ ಅಸ್ಪೃಶ್ಯರಿಗೆ ಘನತೆ ತಂದು ಕೊಡಬಲ್ಲವು ಎಂದು ಬಲವಾಗಿ ನಂಬಿದ್ದವರು ಸಾವಿತ್ರಿಬಾಯಿ ಫುಲೆ. ಈ ಕಾರಣಕ್ಕೆ ಮನೆಮನೆಯಲ್ಲಿ ಅಕ್ಷರದ ಹಣತೆ ಬೆಳಗಿಸುವ ಮೂಲಕ ಶಿಕ್ಷಣದಲ್ಲಿ ಅವರು ಕ್ರಾಂತಿ ಮಾಡಿದರು’ ಎಂದು ಅಂಬೇಡ್ಕರ್‌ ವಿದ್ಯಾರ್ಥಿ ಪರಿಷತ್‌ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಕೋಟೆನಾಡು ಬುದ್ಧವಿಹಾರ ಧ್ಯಾನಕೇಂದ್ರದಲ್ಲಿ ಗೌತಮ ಬುದ್ಧ ಪ್ರತಿಷ್ಠಾನ ಹಾಗೂ ಅಂಬೇಡ್ಕರ್‌ ವಿದ್ಯಾರ್ಥಿ ಪರಿಷತ್‌ ನೇತೃತ್ವದಲ್ಲಿ ಆಯೋಜಿಸಿದ್ದ ಸಾವಿತ್ರಬಾಯಿ ಫುಲೆ ಜಯಂತಿ ಉದ್ಘಾಟಿಸಿ ಮಾತನಾಡಿದರು.

‘ವಿಧವೆಯರಿಗೆ ಪುನರ್‌ ವಿವಾಹ ಮಾಡಿ ಅವರ ಮಕ್ಕಳಿಗೆ ಶಾಲೆ ತೆರೆದಿದ್ದನ್ನು ಅಂದಿನ ಸಮಾಜ ವಿರೋಧಿಸಿತು. ಆದರೂ ಅವರು ಬ್ರಾಹ್ಮಣ ವಿಧವೆಯ ಮಗುವನ್ನು ದತ್ತು ಪಡೆದು ಯಶವಂತರಾವ್‌ ಎಂದು ನಾಮಕರಣ ಮಾಡಿ ಪ್ರೀತಿಯಿಂದ ಬೆಳೆಸಿದರು’ ಎಂದು ನೆನೆದರು.

ADVERTISEMENT

‘ಜ್ಯೋತಿಬಾ ಪುಲೆ ನಂತರ ಅವರ ಎಲ್ಲಾ ಹೋರಾಟಗಳನ್ನು ಏಕಾಂಗಿಯಾಗಿ ಮುಂದುವರೆಸಿದರು. ಪುಣೆಯಲ್ಲಿ ಪ್ಲೇಗ್‌ ರೋಗಿಗಳ ಆರೈಕೆ ಮಾಡುವಾಗ ಅವರಿಗೂ ಸೋಂಕು ತಗುಲಿ ಕೊನೆಯುಸಿರೆಳೆದರು. ಪ್ರತಿಯೊಬ್ಬ ವಿದ್ಯಾವಂತ ಮಹಿಳೆಯೂ ಸಾವಿತ್ರ ಬಾಯಿ ಅವರ ಬದ್ಧತೆ, ವೈಚಾರಿಕೆ ಮುನ್ನೋಟವನ್ನು ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಾಗಿದೆ’ ಎಂದರು.

‘ಅಸ್ಪೃಶ್ಯರಿಗೆ ನೀರು ಕುಡಿಯಲು ಕೊಡದಂತಹ ಪರಿಸ್ಥಿತಿಯಲ್ಲಿ ಫುಲೆ ದಂಪತಿ ತಮ್ಮ ಮನೆಯಲ್ಲಿಯೇ ಬಾವಿ ತೋಡಿಸಿ ಕ್ರಾಂತಿಕಾರಿ ಹೆಜ್ಜೆ ಇಟ್ಟರು. ಮಕ್ಕಳಿಗೆ ಪಾಠ ಹೇಳಕೊಡಲು ಹೋಗುವಾಗ ತಮ್ಮ ಮೇಲೆ ಸಗಣೆ ಎರುಚುತ್ತಿದ್ದರೂ, ಅದನ್ನು ಅವಮಾನವೆಂದು ತಿಳಿದುಕೊಳ್ಳದೇ ಶಿಕ್ಷಣ ನೀಡುವುದೇ ಗುರಿಯೆಂದು ನಂಬಿದ್ದರು’ ಎಂದು ಪ್ರಾಂಶುಪಾಲ ಸಿದ್ದಲಿಂಗಮ್ಮ ತಿಳಿಸಿದರು.

ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ್‌, ಉಪನ್ಯಾಸಕ ನಾಗೇಂದ್ರಪ್ಪ, ಡಾ.ಶ್ರೀಧರ್‌, ಡಾ.ರಕ್ಷತ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.