
ಹಿರಿಯೂರು: ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ಈಡೇರಿಸುವ ಮೂಲಕ ಜನತಂತ್ರವನ್ನು ಉಳಿಸಬೇಕು ಎಂದು ನಿವೃತ್ತ ಪ್ರಾಚಾರ್ಯ ಜಿ.ರಾಮಚಂದ್ರ ಮನವಿ ಮಾಡಿದರು.
ನಗರದ ನೆಹರು ಮೈದಾನದಲ್ಲಿರುವ ರೋಟರಿ ಸಭಾಂಗಣದಲ್ಲಿ ಭಾನುವಾರ ಜನತಂತ್ರ ಉಳಿಸಿ ಆಂದೋಲನ -ಕರ್ನಾಟಕದ ಜಿಲ್ಲಾ ಘಟಕದ ನೇತೃತ್ವದಲ್ಲಿ ಜನತಂತ್ರದ ಸವಾಲುಗಳು ಮತ್ತು ಪರಿಹಾರಗಳು ವಿಷಯ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸಂವಿಧಾನದ ಆಶಯಗಳು ಈಡೇರಿದಾಗ ಮಾತ್ರ ಪ್ರಜಾಪ್ರಭುತ್ವ ಬಲಗೊಳ್ಳಲಿದೆ. ಜನತಂತ್ರದ ಆಧಾರ ಸ್ಥಂಭಗಳಾಗಿರುವ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವನ್ನು ನಾಶಪಡಿಸಲು ಬಂಡವಾಳಶಾಹಿಗಳು ಮತ್ತು ಕೋಮುವಾದಿಗಳು ಪ್ರಯತ್ನಿಸುತ್ತಿದ್ದು, ದುಷ್ಟಶಕ್ತಿಗಳಿಂದ ದೂರ ಉಳಿಯಲು ರೈತರು, ಮಹಿಳೆಯರು, ಯುವಜನತೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಜನತಂತ್ರ ಆಂದೋಲನ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.
‘ಪ್ರಭುತ್ವಗಳು ಬಂಡವಾಳಶಾಹಿಗಳ ಕೈವಶವಾಗುತ್ತಿರುವ ಕಾಲದಲ್ಲಿ ಜನತೆ ಸಂವಿಧಾನದ ಪರಿಕಲ್ಪನೆಯನ್ನು ಸರಿಯಾಗಿ ಅರ್ಥೈಸಿಕೊಳ್ಳುವ ಅನಿವಾರ್ಯತೆ ಇದೆ. ಶಿಕ್ಷಣ, ಅಧಿಕಾರ, ಸಂಪತ್ತು ಕೆಲವೇ ಜನರ ಸ್ವತ್ತಾಗದೇ, ದೇಶದ ಸಮಸ್ತ ವಂಚಿತರಿಗೂ ದೊರೆಯುವಂತಾಗಬೇಕು ಎಂಬುದೇ ಸಂವಿಧಾನದ ಆಶಯ. ಮತಗಳು ಮಾರಾಟದ ವಸ್ತುವಾಗದೇ ಮೌಲ್ಯಗಳಾಗಿ ರೂಪುಗೊಂಡಾಗ ಮಾತ್ರ ಜನತಂತ್ರ ವ್ಯವಸ್ಥೆ ನೆಲೆಗೊಳ್ಳಲು ಸಾಧ್ಯ’ ಎಂದು ಅಧ್ಯಕ್ಷತೆ ವಹಿಸಿದ್ದ ನವಯಾನ ಸಾಹಿತ್ಯ ಮತ್ತು ಸಾಂಸ್ಕೃತಿಕ ಘಟಕದ ರಾಜ್ಯ ಸಂಚಾಲಕ ವಿ.ಬಸವರಾಜು ಹೇಳಿದರು.
‘ಜನತಂತ್ರದ ಸವಾಲುಗಳು’ ಕುರಿತು ಮಾತನಾಡಿದ ಚಿತ್ರದುರ್ಗದ ಅಂಬೇಡ್ಕರ್ ವೇದಿಕೆಯ ಆರ್. ಮಂಜುನಾಥ, ‘ತಮ್ಮ ಹಕ್ಕಿಗಾಗಿ ಹೋರಾಟಕ್ಕಿಳಿದ ಹೋರಾಟಗಾರರಿಗೂ ಜಾಮೀನು ಸಿಗದಂತಹ ಪರಿಸ್ಥಿತಿ ಎದುರಾಗುತ್ತಿದೆ. ಇತ್ತೀಚೆಗೆ ಮತಗಳ್ಳತನವೆಂಬುದು ಜನತಂತ್ರಕ್ಕೆ ಬಹು ದೊಡ್ಡ ಆಪತ್ತನ್ನು ತಂದೊಡ್ಡಿದ್ದು, ರಾಜಕೀಯ ಅತಿರೇಕಗಳು ಜನತೆಯ ಬದುಕನ್ನು ದುಸ್ತರಗೊಳಿಸಿವೆ.
ಬಂಡವಾಳಶಾಹಿಗಳನ್ನು ಸರ್ಕಾರವೇ ದೊಡ್ಡ ಮಟ್ಟದಲ್ಲಿ ಪೋಷಿಸುತ್ತಿದ್ದು ಸಾಮಾನ್ಯರ ಪರಿಸ್ಥಿತಿ ಬಿಗಡಾಯಿಸಲು ಕಾರಣವಾಗಿದೆ’ ಎಂದು ಹೇಳಿದರು.
‘ಜನತಂತ್ರದ ಸವಾಲುಗಳಿಗೆ ಪರಿಹಾರಗಳು’ ಕುರಿತು ಮಾತನಾಡಿದ ಚಿಂತಕ ಶಿವಶಂಕರ ಸೀಗೆಹಟ್ಟಿ, ‘ಸಂಸದೀಯ ಪ್ರಜಾಪ್ರಭುತ್ವವು ಜನತೆಯನ್ನು ಪ್ರತಿನಿಧಿಸುವ ಒಂದು ರಾಜಕೀಯ ತತ್ವಾದರ್ಶವಾಗಿದ್ದು, ಅಂಬೇಡ್ಕರ್ ಹೇಳಿದಂತೆ ರಕ್ತಪಾತವಿಲ್ಲದೆ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಮೂಲಕ ಕಲ್ಯಾಣ ರಾಜ್ಯವನ್ನು ಸ್ಥಾಪಿಸಬೇಕಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ, ಜನತಂತ್ರದ ಉಳಿವಿಗಾಗಿ ಪೂರಕ ಜನಾಂದೋಲನ ರೂಪಗೊಳ್ಳಬೇಕಿದೆ’ ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನೌಕರರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಹೀರೆಹಳ್ಳಿ ಮಲ್ಲಿಕಾರ್ಜುನ್, ಜನತಂತ್ರ ಉಳಿಸಿ ಆಂದೋಲನದ ರಾಜ್ಯ ಘಟಕದ ಸಂಚಾಲಕ ಪ್ರೊ.ಸಿ.ಕೆ.ಮಹೇಶ್, ನಿವೃತ್ತ ಡಿಡಿಪಿಯು ಕೆ.ರುದ್ರಪ್ಪ, ನವಯಾನ ಬುದ್ಧ ಧಮ್ಮ ಸಂಘದ ಟಿ.ರಾಮು, ಸಿ.ಎ. ಚಿಕ್ಕಣ್ಣ, ಕೆ.ಕುಮಾರ್, ಟಿ.ಶಂಕರ್, ಮುಖಂಡರಾದ ಎಂ.ಡಿ.ರವಿ, ಕೂನಿಕೆರೆ ರಾಮಣ್ಣ, ಮಾರುತಿ ಸಣ್ಣಕ್ಕಿ, ಕೆ.ರಾಮಚಂದ್ರಪ್ಪ, ಆರ್.ರಾಮಣ್ಣ, ಕೃಷ್ಣಪ್ಪ, ಎಸ್.ಚಿಕ್ಕಣ್ಣ, ಡಯಟ್ ಉಪನ್ಯಾಸಕರಾದ ರಾಮಚಂದ್ರಪ್ಪ, ಪಾರ್ವತಮ್ಮ, ಹುಚ್ಚವ್ವನಹಳ್ಳಿ ವೆಂಕಟೇಶ್, ಗುರುಮೂರ್ತಿ, ಬಿ.ಶಿವಮೂರ್ತಿ, ಭೀಮಣ್ಣ, ಆರ್.ತಿಪ್ಪೇಸ್ವಾಮಿ, ಓಬಳನಾಯಕ, ನಿವೃತ್ತ ಡೀನ್ ಚಂದ್ರಪ್ಪ, ಕಿರಣ್ ಕುಮಾರ್, ಚಮನ್ ಷರೀಫ್, ಎಸ್.ಜಿ.ರಂಗಸ್ವಾಮಿ ಸಕ್ಕರ, ಶಿವಣ್ಣ ರಂಗೇನಹಳ್ಳಿ, ಪತ್ರಕರ್ತ ಮಹೇಶ್, ಡಿ.ನಾಗರಾಜ್, ಕುಮಾರ್ ಕಸವನಹಳ್ಳಿ, ಮಂಜುನಾಥ ಲೋಕಿಕೆರೆ, ಟಿ.ದೃವಕುಮಾರ್, ಷಫಿವುಲ್ಲಾ, ರುದ್ರಮುನಿ, ಟಿ.ಶ್ರೀನಿವಾಸ್, ಕೂನಿಕೆರೆ ಮಾರುತೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.