ADVERTISEMENT

ಬೀಗ ಮುರಿದು ಹೊಸ ಬೀಗ ಹಾಕುವ ಕಳ್ಳರ ತಂಡ!

ನಾಯಕನಹಟ್ಟಿ ಹೋಬಳಿಯಲ್ಲಿ ಒಂದೇ ಮಾದರಿಯಲ್ಲಿ ಸರಣಿ ಕಳ್ಳತನ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 6:49 IST
Last Updated 20 ಡಿಸೆಂಬರ್ 2025, 6:49 IST
ನಾಯಕನಹಟ್ಟಿ ಹೋಬಳಿಯ ಎನ್.ದೇವರಹಳ್ಳಿ ಗ್ರಾಮದಲ್ಲಿ ಕಳ್ಳರ ಗುಂಪಿನ ಚಲನವಲನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು
ನಾಯಕನಹಟ್ಟಿ ಹೋಬಳಿಯ ಎನ್.ದೇವರಹಳ್ಳಿ ಗ್ರಾಮದಲ್ಲಿ ಕಳ್ಳರ ಗುಂಪಿನ ಚಲನವಲನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು   

ನಾಯಕನಹಟ್ಟಿ: ಹೋಬಳಿಯಲ್ಲಿ ಹಲವು ಗ್ರಾಮಗಳಲ್ಲಿ ಒಂದೇ ಮಾದರಿಯಲ್ಲಿ ಸರಣಿ ಕಳ್ಳತನಗಳು ನಡೆದಿದ್ದು, ಗ್ರಾಮೀಣ ಪ್ರದೇಶದ ಜನರು ಆತಂಕಕ್ಕೊಳಗಾಗಿದ್ದಾರೆ.

ಬುಧವಾರ ರಾತ್ರಿ ಎನ್.ದೇವರಹಳ್ಳಿ, ಜಂಬಯ್ಯನಹಟ್ಟಿ, ಕೆರೆಯಾಗಳಹಳ್ಳಿ, ದೇವರೆಡ್ಡಿಹಳ್ಳಿ, ಹೊನ್ನೂರು ಗ್ರಾಮಗಳಲ್ಲಿ ಆಗಿರುವ ಕಳ್ಳತನಗಳಲ್ಲಿ ಸಾಮ್ಯತೆ ಇದೆ. 

ಎನ್.ದೇವರಹಳ್ಳಿ ಗ್ರಾಮದ ನಂದಿನ ಹಾಲಿನ ಶೀತಲೀಕರಣ ಘಟಕದ ಬೀಗಮುರಿದು ಒಳನುಗ್ಗಿ ಅಲ್ಮೆರಾದಲ್ಲಿದ್ದ ₹24,000 ನಗದು ದೋಚಿದ್ದಾರೆ. ಈ ಘಟನೆಯು ಸಮೀಪದ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಐದು ಜನ ಇರುವ ಕಳ್ಳರ ಗುಂಪು ಎರಡು ಕೆಟಿಎಂ ಡ್ಯೂಕ್ ಬೈಕ್‌ಗಳಲ್ಲಿ ಬಂದು ದರೋಡೆ ನಡೆಸಿ ಹಿಂತಿರುಗಿದ ದೃಶ್ಯಗಳು ಸೆರೆಯಾಗಿವೆ. ಇದೇ ಗುಂಪು ಅದೇ ದಿನ ಕೆರೆಯಾಗಳಹಳ್ಳಿ ಮತ್ತು ಜಂಬಯ್ಯನಹಟ್ಟಿ ಗ್ರಾಮಗಳ ಅಂಗಡಿಗಳ ಬೀಗ ಮುರಿದು ಹಣ ದೋಚಿದೆ. ಹಾಗೆಯೇ ದೇವರೆಡ್ಡಿಹಳ್ಳಿ, ಹೊನ್ನೂರು ಗ್ರಾಮದಲ್ಲೂ ಇದೇ ಮಾದರಿಯಲ್ಲಿ ಕಳ್ಳತನ ನಡೆಸಿದೆ. ಬೀಗ ಮುರಿದ ಅಂಗಡಿಗಳಿಗೆ ಹೊಸ ಬೀಗ ಹಾಕಿ ತೆರಳಿರುವುದು ಅಚ್ಚರಿ ಮೂಡಿಸಿದೆ.

ADVERTISEMENT

ನಾಯಕನಹಟ್ಟಿ ಠಾಣೆಯ ಪಿಎಸ್‌ಐ ಜಿ.ಪಾಂಡುರಂಗ ಮಾತನಾಡಿ, ‘ಸೋಮವಾರ ಇದೇ ಕಳ್ಳರ ಗುಂಪು ಹಾವೇರಿಯಲ್ಲಿ ಸರಣಿ ಕಳ್ಳತನ ಮಾಡಿತ್ತು. ಬುಧವಾರ ನಮ್ಮ ಹೋಬಳಿಯ ಕೆಲವು ಗ್ರಾಮಗಳಲ್ಲಿ ಒಂದೇ ರಾತ್ರಿ ಕಳ್ಳತನದ ಕೃತ್ಯ ಎಸಗಿದೆ. ತಂಡದ ಸದಸ್ಯರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು, ಜೀನ್ಸ್ ಪ್ಯಾಂಟ್, ಜರ್ಕಿನ್, ಕೈಗವಸು, ಸ್ಪೋರ್ಟ್ಸ್ ಶೂ ಧರಿಸಿರುತ್ತಾರೆ. ಬೀಗ ಹಾಕಿರುವ ಮನೆಗಳೇ ಇವರ ಟಾರ್ಗೆಟ್’ ಎಂದರು.

ಸಾರ್ವಜನಿಕರು ಬೇರೆ ಊರುಗಳಿಗೆ ತೆರೆಳಬೇಕಿದ್ದರೆ ತಮ್ಮ ಗ್ರಾಮದ ಗಸ್ತು ಪೊಲೀಸರಿಗೆ ಮಾಹಿತಿ ನೀಡಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಸಾರ್ವಜನಿಕರು ಭಯಭೀತರಾಗದೇ ಪೊಲೀಸರಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.