ADVERTISEMENT

₹100 ಕೋಟಿ ವೆಚ್ಚದ ಒಳಚರಂಡಿ ಯೋಜನೆಗೆ ಅನುಮೋದನೆ: ಸಚಿವ ಡಿ. ಸುಧಾಕರ್

ಜನವರಿಯಿಂದ ಕಾಮಗಾರಿ ಆರಂಭ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 6:11 IST
Last Updated 4 ಡಿಸೆಂಬರ್ 2025, 6:11 IST
ಡಿ. ಸುಧಾಕರ್
ಡಿ. ಸುಧಾಕರ್   

ಹಿರಿಯೂರು: ನಗರದಲ್ಲಿ ₹100 ಕೋಟಿ ವೆಚ್ಚದಲ್ಲಿ ಮೊದಲ ಹಂತದ ಒಳಚರಂಡಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಜನವರಿಯಿಂದ ಕಾಮಗಾರಿ ಆರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹಿರಿಯೂರು ನಗರಕ್ಕೆ ಸಮಗ್ರ ಒಳಚರಂಡಿ ಯೋಜನೆ ಜಾರಿ ಸಂಬಂಧ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆ ಮೂಲಕ ₹206 ಕೋಟಿ ಮೊತ್ತದ ವಿಸ್ತೃತ ವರದಿಗೆ ಅನಮೋದನೆ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಆರ್ಥಿಕ ಇಲಾಖೆಯವರು ಯೋಜನಾ ವರದಿ ಮೊತ್ತ ಹೆಚ್ಚಾಗಿರುವ ಕಾರಣ ಎರಡು ಹಂತದಲ್ಲಿ ಕಾಮಗಾರಿ ನಡೆಸುವಂತೆ ನಿರ್ದೇಶಿಸಿದ್ದರು. ವೇದಾವತಿ ನದಿಯಿಂದ ಬಲಭಾಗದ ಹಳೆಯ ನಗರ ಪ್ರದೇಶಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ₹100 ಕೋಟಿಗೆ ಯೋಜನೆಯನ್ನು ಸೀಮಿತಗೊಳಿಸಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಜನವರಿ ಒಳಗೆ ಟೆಂಡರ್ ಅಂತಿಮಗೊಳಿಸಿ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.

ವೇದಾವತಿ ನದಿಯ ದಕ್ಷಿಣ ದಂಡೆಯಲ್ಲಿ ವೆಟ್ ವೆಲ್ ಹಾಗೂ ಅದಕ್ಕೆ ಸಂಬಂಧಿಸಿದ ಘಟಕಗಳನ್ನು ನಿರ್ಮಾಣ, ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಾಪನೆ, ಇವುಗಳಿಗೆ ದಿನದ 24 ಗಂಟೆ ವಿದ್ಯುತ್ ಪೂರೈಕೆ ವ್ಯವಸ್ಥೆ ಮಾಡಲಾಗುತ್ತಿದೆ. 8.61 ಎಂ.ಎಲ್.ಡಿ. ಕೊಳಚೆ ನೀರನ್ನು ವಿನೂತನ ತಂತ್ರಜ್ಞಾನದಲ್ಲಿ ಶುದ್ಧೀಕರಿಸಿ ವೇದಾವತಿ ನದಿಗೆ ಬಿಡಲಾಗುತ್ತದೆ. ಅದು ವ್ಯರ್ಥವಾಗಿ ಹರಿದು ಹೋಗಲು ಬಿಡದೆ ಸಮೀಪದ ಕೈಗಾರಿಕೆಗಳಿಗೆ ಮತ್ತು ಕೆರೆಗಳ ಭರ್ತಿಗೆ ಬಳಸಲು ಅವಕಾಶವಿದೆ. ಬಳಸಿದ ನೀರಿನ ನಿರ್ವಹಣಾ ಘಟಕದ ನಿರ್ಮಾಣಕ್ಕೆ ನಗರಾಭಿವೃದ್ಧಿ ಇಲಾಖೆ ₹15.50 ಕೋಟಿ ಅನುದಾನ ಬಿಡುಗಡೆಗೆ ಅನುಮೋದನೆ ನೀಡಿದೆ ಎಂದು ಸುಧಾಕರ್ ಮಾಹಿತಿ ನೀಡಿದರು. 

ADVERTISEMENT
ಎರಡನೇ ಹಂತದ ಒಳಚರಂಡಿ ಯೋಜನೆಗೆ ಯಾವುದಾದರೂ ಉಳಿತಾಯದ ಯೋಜನೆಯಡಿ ಅನುದಾನ ಹಂಚಿಕೆ ಮಾಡುವಂತೆ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರಿಗೆ ಮನವಿ ಮಾಡುತ್ತೇನೆ
–ಡಿ. ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.