ADVERTISEMENT

ಯುವತಿ, ಬಾಲಕಿಗೆ ಲೈಂಗಿಕ ಕಿರುಕುಳ

ಮೌಢ್ಯ ನಿಷೇಧ, ಬಾಲ್ಯವಿವಾಹ ಕಾಯ್ದೆ ಅಡಿ ಪ್ರತ್ಯೇಕ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 15:15 IST
Last Updated 31 ಅಕ್ಟೋಬರ್ 2020, 15:15 IST

ಚಿತ್ರದುರ್ಗ: ದೆವ್ವ, ಭೂತದ ಹೆಸರು ಹೇಳಿಕೊಂಡು ಮತ್ತಿನ ಔಷಧ ಕುಡಿಸಿ 19 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಚಳ್ಳಕೆರೆ ತಾಲ್ಲೂಕಿನ ಗ್ರಾಮವೊಂದರ ಭಾಸ್ಕರ ಎಂಬಾತನ ಮೇಲೆ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಮೌಢ್ಯ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಈ ಕಾಯ್ದೆಯಡಿ ರಾಜ್ಯದಲ್ಲಿ ದಾಖಲಾದ ಮೂರನೇ ಪ್ರಕರಣ ಇದಾಗಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಈತನ ವಿರುದ್ಧ 15 ವರ್ಷದ ಬಾಲಕಿ ಮೇಲೂ ಲೈಂಗಿಕ ದೌರ್ಜನ್ಯ ಹಾಗೂ ಬಾಲ್ಯವಿವಾಹ ಮಾಡಿಕೊಂಡ ಆರೋಪದಡಿ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಯುವತಿ ಒಂದು ವಾರದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಭಾಸ್ಕರ ಇದಕ್ಕೆ ಔಷಧ ಕೊಡುವುದಾಗಿ ಅ.25ರಂದು ಗ್ರಾಮದ ದೇಗುಲ ಬಳಿಗೆ ಬರಲು ಹೇಳಿದ್ದಾನೆ. ಇವನನ್ನು ನಂಬಿ ಯುವತಿ ದೇಗುಲಕ್ಕೆ ಹೋಗಲು ಒಪ್ಪಿಗೆ ಸೂಚಿಸಿದ್ದಳು.

ADVERTISEMENT

‘ನಿನ್ನ ಮೈಮೇಲೆ ದೆವ್ವ ಬಂದಿದೆ. ಅದಕ್ಕಾಗಿ ಹೊಟ್ಟೆಯಲ್ಲಿ ಸಂಕಟವಾಗುತ್ತಿದೆ. ಇದನ್ನು ಖಂಡಿತ ಪರಿಹರಿಸುತ್ತೇನೆ’ ಎಂದು ಜಾಲಿಗಿಡಗಳ ಮಧ್ಯೆ ಕರೆದುಕೊಂಡು ಹೋಗಿ, ಬಟ್ಟೆ ಬಿಚ್ಚುವಂತೆ ಹೇಳಿದ್ದಾನೆ. ಇದಕ್ಕೆ ಒಪ್ಪದಿದ್ದಾಗ ಮತ್ತಿನ ಔಷಧ ಬೆರೆಸಿದ ನೀರು ಕುಡಿಯಲು ಕೊಟ್ಟಿದ್ದಾನೆ.

ಯುವತಿ ಪ್ರಜ್ಞೆ ತಪ್ಪಿದ್ದಾಗ ಆಕೆಯ ಬೆತ್ತಲೆ ಫೋಟೊಗಳನ್ನು ತೆಗೆದಿದ್ದ. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿದ್ದ. ಮತ್ತೊಮ್ಮೆ ಪಾವಗಡ ಗುಡ್ಡದ ದೇಗುಲಕ್ಕೆ ಕರೆದುಕೊಂಡು ಹೋಗಿ ಮತ್ತಿನ ಔಷಧ ಕುಡಿಸಿ, ಪ್ರಜ್ಞೆ ತಪ್ಪಿಸಿ ಬಲವಂತವಾಗಿ ತಾಳಿ ಕಟ್ಟಿದ್ದಾನೆ ಎಂದು ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.