ಚಿತ್ರದುರ್ಗ: ‘ಶಕ್ತಿ’ ಯೋಜನೆಯಡಿ ಮಹಿಳೆಯರು 500 ಕೋಟಿಗೂ ಹೆಚ್ಚು ಬಾರಿ ರಾಜ್ಯದ ಸರ್ಕಾರಿ ಸ್ವಾಮ್ಯದ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಿರುವ ಕಾರಣ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸೋಮವಾರ ಸಂಭ್ರಮಾಚರಣೆ ನಡೆಯಿತು.
ಬಸ್ ನಿಲ್ದಾಣವನ್ನು ಹೂವು, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಶಕ್ತಿ ಯೋಜನೆಗೆ ಸಂಬಂಧಿಸಿದ ಸಾಧನೆ ಬಿಂಬಿಸುವ ಫ್ಲೆಕ್ಸ್‌ಗಳನ್ನು ಬಸ್ ನಿಲ್ದಾಣ ಆವರಣದಲ್ಲಿ ಅಳವಡಿಸಲಾಗಿತ್ತು. ಅಲಂಕೃತಗೊಂಡಿದ್ದ ಬಸ್‌ಗೆ ಶಾಸಕ ಕೆ.ಸಿ.ವೀರೇಂದ್ರ ಹಾಗೂ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಶಿವಣ್ಣ ಪೂಜೆ ನೆರವೇರಿಸಿದರು. ಬಳಿಕ ಮಹಿಳಾ ಪ್ರಯಾಣಿಕರಿಗೆ ಮತ್ತು ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಹೂ ಹಾಗೂ ಸಿಹಿ ವಿತರಣೆ ಮಾಡಿದರು.
‘ಶಕ್ತಿ ಯೋಜನೆಯಿಂದ ಬಹಳ ಅನುಕೂಲವಾಗಿದೆ. ನಾರಿಶಕ್ತಿಯ ಸಬಲೀಕರಣಕ್ಕೆ ಸಹಕಾರಿಯಾಗಿರುವ ಶಕ್ತಿ ಯೋಜನೆ ಮುಂದುವರಿಯಬೇಕು’ ಎಂದು ಭರಮಸಾಗರದ ನಿರ್ಮಲಾ ಅನಿಸಿಕೆ ವ್ಯಕ್ತಪಡಿಸಿದರು.
‘ರಾಜ್ಯ ಸರ್ಕಾರ ಬಡವರಿಗಾಗಿಯೇ ಗ್ಯಾರಂಟಿ ಯೋಜನೆ ಜಾರಿಗೆ ತಂದು ಸಮರ್ಪಕವಾಗಿ ಅನುಷ್ಠಾನಗೊಳಿಸಿದೆ. ಇದರಿಂದ ಬಡವರ ಬದುಕು ಹಸನಾಗಿದೆ. ನಮ್ಮಂತಹ ಉದ್ಯೋಗಿಗಳು ಬಸ್ ಪ್ರಯಾಣಕ್ಕಾಗಿ ಖರ್ಚು ಮಾಡುತ್ತಿದ್ದ ಹಣವನ್ನು, ಮನೆಯ ಇತರೆ ಖರ್ಚು ವೆಚ್ಚ ಭರಿಸಲು ಅನುಕೂಲವಾಗಿದೆ’ ಎಂದು ಗಾರ್ಮೆಂಟ್ಸ್ ಉದ್ಯೋಗಿ ವಿನುತಾ ಹರ್ಷ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಡಿ.ಎನ್.ಮೈಲಾರಪ್ಪ, ಬಿ.ಟಿ.ನಿರಂಜನ್, ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ್, ಸದಸ್ಯರಾದ ಅಬ್ದುಲ್ಲಾ ಷಾವಲಿ, ಇಂದಿರಾ, ಪಾಲೇಗೌಡ, ರಾಜೇಶ್ ಮದುರೆ, ವಿ.ದಿನೇಶ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.