ADVERTISEMENT

ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವ ಇಂದಿನಿಂದ

ತಾವಿದ್ದಲ್ಲೇ ಉತ್ಸವ ಎಂಬ ಧ್ಯೇಯ ವಾಕ್ಯದೊಂದಿಗೆ ಸರಳ ಆಚರಣೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 3:03 IST
Last Updated 22 ಅಕ್ಟೋಬರ್ 2020, 3:03 IST
ಶರಣ ಸಂಸ್ಕೃತಿ ಉತ್ಸವ ಸಂಬಂಧ ಮುರುಘಾಮಠದೊಳಗೆ ಕೈಗೊಂಡಿರುವ ಸಿದ್ಧತಾ ಕಾರ್ಯವನ್ನು ಶಿವಮೂರ್ತಿ ಮುರುಘಾ ಶರಣರು ಬುಧವಾರ ಪರಿಶೀಲಿಸಿದರು. ಗೌರವಾಧ್ಯಕ್ಷ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ, ಶಾಸಕ ಗೂಳಿಹಟ್ಟಿ ಶೇಖರ್ ಇದ್ದರು.
ಶರಣ ಸಂಸ್ಕೃತಿ ಉತ್ಸವ ಸಂಬಂಧ ಮುರುಘಾಮಠದೊಳಗೆ ಕೈಗೊಂಡಿರುವ ಸಿದ್ಧತಾ ಕಾರ್ಯವನ್ನು ಶಿವಮೂರ್ತಿ ಮುರುಘಾ ಶರಣರು ಬುಧವಾರ ಪರಿಶೀಲಿಸಿದರು. ಗೌರವಾಧ್ಯಕ್ಷ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ, ಶಾಸಕ ಗೂಳಿಹಟ್ಟಿ ಶೇಖರ್ ಇದ್ದರು.   

ಚಿತ್ರದುರ್ಗ: ದಸರಾ ಮಹೋತ್ಸವದ ಸಂದರ್ಭದಲ್ಲಿಯೇ ಇಲ್ಲಿನ ಮುರುಘಾ ಮಠದಲ್ಲಿ ಪ್ರತಿ ವರ್ಷವೂ ಶರಣ ಸಂಸ್ಕೃತಿ ಉತ್ಸವ ಕಳೆಗಟ್ಟುತ್ತದೆ. ಆದರೆ, ಈ ಬಾರಿ ಕೋವಿಡ್‌ ಕಾರಣಕ್ಕೆ ಉತ್ಸವವನ್ನು ಸರಳ ರೀತಿಯಲ್ಲಿ ಆಚರಿಸಲು ಮಠ ಸಿದ್ಧತೆಯಲ್ಲಿ ತೊಡಗಿದೆ.

ಕುಸ್ತಿ, ಕ್ರೀಡಾಕೂಟ, ಸೌಹಾರ್ದ ನಡಿಗೆ ಮುಂತಾದ ಜನಜಂಗುಳಿ ಸೇರುವ ಕಾರ್ಯಕ್ರಮ ಈ ಬಾರಿ ರದ್ದುಪಡಿಸಲಾಗಿದೆ. ಸಹಜ ಶಿವಯೋಗ, ಭಜನೆ, ವೀರಗಾಸೆ, ಜಾನಪದ ಹಾಡುಗಳ ಸ್ಪರ್ಧೆ, ವಿಚಾರಗೋಷ್ಠಿ, ಕೃಷಿ ಹಾಗೂ ಕೈಗಾರಿಕಾ ಮೇಳಗಳು ಎಂದಿನಂತೆಯೇ ನಡೆಯಲಿವೆ. ವಿಜಯದಶಮಿಯ ದಿನ ನಡೆಯುತ್ತಿದ್ದ ಜಾನಪದ ಕಲಾಮೇಳ ಮೆರವಣಿಗೆಯನ್ನೂ ಕೈಬಿಡಲಾಗಿದೆ.

11 ದಿನ ನಡೆಯುತ್ತಿದ್ದ ಉತ್ಸವವನ್ನು ಈ ವರ್ಷ ಕೇವಲ ಆರು ದಿನಗಳಿಗೆ ಇಳಿಸಲಾಗಿದೆ. ಅ. 22ರಿಂದ 28ರ ವರೆಗೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರಗೋಷ್ಠಿಗಳು ನಡೆಯಲಿವೆ. ಫೇಸ್‌ಬುಕ್‌ ಹಾಗೂ ಯುಟ್ಯೂಬ್ ನೇರ ಪ್ರಸಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ‘ತಾವಿದ್ದಲ್ಲೇ ಶರಣ ಸಂಸ್ಕೃತಿ ಉತ್ಸವ’ ಎಂಬುದು ಮಠದ ಧ್ಯೇಯವಾಗಿದೆ.

ADVERTISEMENT

ರಾಜ್ಯದ ಉತ್ತರ ಕರ್ನಾಟಕ ಭಾಗದ ಕಲಬುರ್ಗಿ, ರಾಯಚೂರು, ಬೆಳಗಾವಿ, ಹುಬ್ಬಳ್ಳಿ- ಧಾರವಾಡ ಹಾಗೂ ತುಮಕೂರು ಜಿಲ್ಲೆಯಿಂದ ವಿವಿಧ ಮಠಾಧೀಶರು, ರಾಜ್ಯದ ಪ್ರಭಾವಿ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಉತ್ಸವ ಮುಗಿಯುವವರೆಗೂ ತಂಗುವವರಿಗಾಗಿ ವಸತಿ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಆದರೆ, ಎಲ್ಲವೂ ಸರಳ ರೀತಿಯಲ್ಲೇ ನಡೆಯಲಿದೆ.

ನಾಡಿನ ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವಲ್ಲಿ ಶ್ರಮಿಸುತ್ತಿರುವ ಇತಿಹಾಸ ಪ್ರಸಿದ್ಧ ಮುರುಘಾಮಠದ ಈ ಉತ್ಸವ ಮಧ್ಯ ಕರ್ನಾಟಕದ ದಸರಾ ಮಹೋತ್ಸವ ಎಂಬಂತೆ ಖ್ಯಾತಿ ಗಳಿಸಿದೆ. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆ, ಸೌಹಾರ್ದ ಸಂದೇಶ ನೀಡುವ ನಡಿಗೆ ಸೇರಿ ಎಲ್ಲವನ್ನೂ ಉತ್ಸವ ಒಳಗೊಳ್ಳುತ್ತದೆ. ರಾಜ್ಯದ ಹಲವೆಡೆಯಿಂದ
ಸಾವಿರಾರು ಭಕ್ತರು ಈ ಉತ್ಸವಕ್ಕೆ ಕೋಟೆನಾಡಿಗೆ ಬರುವುದು ವಾಡಿಕೆ. ಆದರೆ, ಪ್ರಸಕ್ತ ಬಾರಿ ಹೆಚ್ಚು ಜನರು ಸೇರದೆಯೇ ಕಡಿಮೆ ಸಂಖ್ಯೆಯ ಭಕ್ತರೊಂದಿಗೆ ಅಂತರ ಕಾಪಾಡಿಕೊಂಡು ಕಾರ್ಯಕ್ರಮ ನಡೆಸಲು ಶ್ರೀಮಠ ಸಿದ್ಧತೆ ಮಾಡಿಕೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.