ADVERTISEMENT

ಚಿತ್ರದುರ್ಗ: ‘ಶರಣ ಸಂಸ್ಕೃತಿ ಉತ್ಸವ’ದ ಸೌಹಾರ್ದ ನಡಿಗೆಯಲ್ಲಿ ಗಮನಸೆಳೆದ ‘ದರ್ಶನ್’

* ರಾಕ್‌ಲೈನ್‌ರಿಂದ ಉತ್ಸವಕ್ಕೆ ಅಧಿಕೃತ ಚಾಲನೆ * ಶರಣರು, ಸ್ವಾಮೀಜಿಗಳ ನೇತೃತ್ವ * ಗಾಂಧಿ ವೃತ್ತದಲ್ಲಿ ಅಭಿಮಾನಿಗಳ ಹರ್ಷೋದ್ಗಾರ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 10:09 IST
Last Updated 13 ಅಕ್ಟೋಬರ್ 2018, 10:09 IST
ಚಿತ್ರದುರ್ಗದಲ್ಲಿ ಶನಿವಾರದಿಂದ ಪ್ರಾರಂಭವಾದ ಶರಣ ಸಂಸ್ಕೃತಿ ಉತ್ಸವದ ‘ಶರಣರ ನಡಿಗೆ ಸೌಹಾರ್ದತೆ ಕಡೆಗೆ’ ಜಾಥಾದಲ್ಲಿ ಶಿವಮೂರ್ತಿ ಮುರುಘಾ ಶರಣರು, ದರ್ಶನ್, ರಾಕ್‌ಲೈನ್ ವೆಂಕಟೇಶ್, ರಾಜೇಂದ್ರಸಿಂಗ್ ಬಾಬು, ದೊಡ್ಡಣ್ಣ ಇದ್ದರು.
ಚಿತ್ರದುರ್ಗದಲ್ಲಿ ಶನಿವಾರದಿಂದ ಪ್ರಾರಂಭವಾದ ಶರಣ ಸಂಸ್ಕೃತಿ ಉತ್ಸವದ ‘ಶರಣರ ನಡಿಗೆ ಸೌಹಾರ್ದತೆ ಕಡೆಗೆ’ ಜಾಥಾದಲ್ಲಿ ಶಿವಮೂರ್ತಿ ಮುರುಘಾ ಶರಣರು, ದರ್ಶನ್, ರಾಕ್‌ಲೈನ್ ವೆಂಕಟೇಶ್, ರಾಜೇಂದ್ರಸಿಂಗ್ ಬಾಬು, ದೊಡ್ಡಣ್ಣ ಇದ್ದರು.   

ಚಿತ್ರದುರ್ಗ: ವೃತ್ತವೊಂದರ ತುಂಬೆಲ್ಲಾ ಜನವೋ ಜನ. ಒಂದೆಡೆ ಸಿನಿಮಾ ಕಲಾವಿದರ ಬರುವಿಕೆಗಾಗಿ ಕಾಯುತ್ತ ನಿಂತಿದ್ದ ಅಭಿಮಾನಿಗಳು.ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್‌ ಕಾರು ಕಂಡ ಕೂಡಲೇ ಅನೇಕರು ಸುತ್ತುವರಿದರು.ಕೇಕೆ, ಶಿಳ್ಳೆ, ಚಪ್ಪಾಳೆಗಳ ಸುರಿಮಳೆ. ಅಲ್ಲದೆ, ‘ಡಿ ಬಾಸ್, ಡಿ ಬಾಸ್, ಡಿ ಬಾಸ್’ ಎಂದು ಯುವಸಮೂಹದಿಂದ ಮುಗಿಲು ಮುಟ್ಟಿದ ಹರ್ಷೋದ್ಗಾರ...

ಇಲ್ಲಿನ ಗಾಂಧಿ ವೃತ್ತದ ಮುಂಭಾಗದಲ್ಲಿ ಶನಿವಾರ ‘ಶರಣ ಸಂಸ್ಕೃತಿ ಉತ್ಸವ 2018’ ರ ಅಂಗವಾಗಿ ಮುರುಘಾಮಠದಿಂದ ಹಮ್ಮಿಕೊಂಡಿದ್ದ ‘ಶರಣರ ನಡಿಗೆ ಸೌಹಾರ್ದತೆ ಕಡೆಗೆ’ ಜಾಥಾ ಕಾರ್ಯಕ್ರಮದಲ್ಲಿ ಚಿತ್ರರಸಿಕರು ಸಂಭ್ರಮದಲ್ಲೇ ಮುಳುಗಿದ್ದ ಸಂದರ್ಭದಲ್ಲಿ ಕಂಡ ದೃಶ್ಯವಿದು.

ದರ್ಶನ್, ರಾಕ್‌ಲೈನ್ ಅವರು ಬೆಳಿಗ್ಗೆ 8 ಕ್ಕೆ ನಡಿಗೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ಕಾರಣಕ್ಕಾಗಿ ಸ್ವಾಗತಿಸಲು ಅಲ್ಲಿ ನೆರೆದಿದ್ದ ಅಭಿಮಾನಿಗಳ ಕಾತುರ ಹೆಚ್ಚಾಗಿತ್ತು. ಕಂಡೊಡನೆ ಎಲ್ಲಿಲ್ಲದ ಉತ್ಸಾಹ ತುಂಬಿ ತುಳುಕುತ್ತಿತ್ತು. ಚಿತ್ರ ಕ್ಲಿಕ್ಕಿಸಲು ಅನೇಕರು ಮುಂದಾದರೆ, ಕೆಲ ಯುವತಿಯರುಆಟೋಗ್ರಾಫ್‌ಗಾಗಿ ಮುಂದೆ ಹೋದರಾದರೂ ನೂಕುನುಗ್ಗಲು ಉಂಟಾದ ಕಾರಣ ನಿರಾಸೆಯಿಂದ ಹಿಂದಕ್ಕೆ ಬಂದರು. ಸೆಲ್ಫಿತೆಗೆದುಕೊಳ್ಳಲು ಹರಸಾಹಸಪಟ್ಟರು ಕೆಲವರಿಗೆಸಾಧ್ಯವಾಗಲಿಲ್ಲ.

ADVERTISEMENT

ಶಿವಮೂರ್ತಿ ಮುರುಘಾ ಶರಣರು, ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಭೋವಿ ಗುರುಪೀಠದ ಸಿದ್ದರಾಮೇಶ್ವರ ಸ್ವಾಮೀಜಿ, ಅಥಣಿಯ ಗಚ್ಚಿನಮಠದ ಶಿವಬಸವ ಸ್ವಾಮೀಜಿ, ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ವಹಿಸಿದ್ದರು. ರಾಕ್‌ಲೈನ್ಜಾಥಾಕ್ಕೆ ಚಾಲನೆ ನೀಡಿದರು. ಖ್ಯಾತ ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ಹಿರಿಯ ಕಲಾವಿದರಾದ ಶ್ರೀನಿವಾಸ್‌ಮೂರ್ತಿ, ದೊಡ್ಡಣ್ಣ, ಕಾದಂಬರಿಕಾರ ಬಿ.ಎಲ್.ವೇಣು, ಎಸ್‌ಜೆಎಂ ವಿದ್ಯಾಪೀಠದ ಶಾಲಾ-ಕಾಲೇಜುಗಳ ನೂರಾರು ವಿದ್ಯಾರ್ಥಿಗಳು, ಶ್ರೀಮಠದ ಭಕ್ತರು ಸಾಥ್ ನೀಡಿದರು.

ಕನಕ ವೃತ್ತದ ಮುಂಭಾಗದಿಂದ ಪ್ರಾರಂಭವಾದ ಜಾಥಾ ಕೋಟೆ ರಸ್ತೆ, ಜೋಗಿಮಟ್ಟಿ ರಸ್ತೆ, ಪಟ್ಟದ ಪರಮೇಶ್ವರಿ ಶಾಲೆ, ಚಳ್ಳಕೆರೆ ಟೋಲ್‌ಗೇಟ್, ಆರ್‌ಟಿಒ ಕಚೇರಿ, ರಾಷ್ಟ್ರೀಯ ಹೆದ್ದಾರಿ 13 ರ ಗ್ರಾಮಾಂತರ ಪೊಲೀಸ್ ಠಾಣೆ ಮಾರ್ಗವಾಗಿಗಾಂಧಿವೃತ್ತಕ್ಕೆ ಬಂದಾಗ ಸಿನಿಮಾ ಕಲಾವಿದರು ಪಾಲ್ಗೊಂಡರು. ಅಲ್ಲಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ದಾವಣಗೆರೆ ರಸ್ತೆ, ರಾಷ್ಟ್ರೀಯ ಹೆದ್ದಾರಿ 4 ರ ರಸ್ತೆ ಮಾರ್ಗವಾಗಿ ಮುರುಘಾಮಠ ತಲುಪಿತು.

ಅನುಭವ ಮಂಟಪದ ಸಭಾ ಕಾರ್ಯಕ್ರಮದಲ್ಲಿ ವೆಂಕಟೇಶ್ ಮಾತನಾಡಿ, ಜಾತಿ-ಭೇದ ಮರೆತು ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಿದಾಗ ದೇಶದಲ್ಲಿ ಸಮಾನತೆ ಮೂಡುತ್ತದೆ. ಶ್ರೀಮಠವೂ ಅದೇ ಸಂದೇಶವನ್ನು ಸಾರುತ್ತಿದ್ದು, ಆ ಮಾರ್ಗದಲ್ಲಿ ಸಾಗಬೇಕಿದೆ ಎಂದು ಹೇಳಿದರು.

ಶರಣರು ಮಾತನಾಡಿ, ಆಹ್ವಾನ ಪತ್ರಿಕೆಯಲ್ಲಿ ದರ್ಶನ್ ಹೆಸರಿಲ್ಲದಿದ್ದರೂ ಆಕಸ್ಮಿಕವಾಗಿ ಅವರು ಕಾರ್ಯಕ್ರಮಕ್ಕೆ ಬಂದಿದ್ದಾರೆ. ಈಚೆಗೆ ರಾಕ್‌ಲೈನ್, ಬಾಬು ನಮ್ಮ ಜತೆಯಲ್ಲಿ ಕರೆದುಕೊಂಡು ಬರುತ್ತೇವೆ ಎಂದು ಹೇಳಿದ್ದರು. ಅದರಂತೆ ಬಂದಿರುವ ಕಲಾವಿದರು ಹೊಸ ಮೆರುಗನ್ನು ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಪಟೇಲ್ ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.